ಚಾಮರಾಜನಗರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅಕ್ಟೋಬರ್ ೧೧ರಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಸರ್ಕಾರಿ ಅಧಿಕಾರಿಗಳ ಜೊತೆ ಒಂದು ದಿನ ಯುವ ಕ್ರೀಡಾ ಅಧಿಕಾರಿಯಾಗಿ ಅನುಭವ ಕಲ್ಪಿಸುವ ಕಾರ್ಯಕ್ರಮದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಎನ್.ಎಸ್.ಎಸ್ ಸ್ವಯಂ ಸೇವಕರಾದ ಪ್ರಥಮ ಎಂ.ಕಾಂ ವಿದ್ಯಾರ್ಥಿನಿ ಡಿ. ಪ್ರಿಯಾಂಕ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು.
ರಾಜ್ಯ ಎನ್.ಎಸ್.ಎಸ್ ಘಟಕ ವಿದ್ಯಾರ್ಥಿನಿ ಪ್ರಿಯಾಂಕ ಅವರನ್ನು ಆಯ್ಕೆ ಮಾಡಿ ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಕಳುಹಿಸಿತ್ತು. ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನವಾದ ಅಕ್ಟೋಬರ್ ೧೧ರಂದು ಒಂದು ದಿನ ಯುವ ಕ್ರೀಡಾ ಅಧಿಕಾರಿಯಾಗಿ ಪ್ರಿಯಾಂಕ ಅವರು ಚಾಮರಾಜನಗರ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್. ಅನಿತಾ ಅವರೊಂದಿಗೆ ಇದ್ದು ದಿನವಿಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯ ವೈಖರಿಯ ಅನುಭವ ಪಡೆದುಕೊಂಡರು.
ಕ್ರೀಡಾ ಇಲಾಖೆಯ ಅಧಿಕಾರಿಗಳ ಕಾರ್ಯ ಚಟುವಟಿಕೆಯನ್ನು ತಿಳಿದುಕೊಳ್ಳಲು ಆಗಮಿಸಿದ್ದ ಪ್ರಿಯಾಂಕ ಅವರನ್ನು ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್. ಅನಿತಾ ಅವರು ಸ್ವಾಗತಿಸಿದರು. ನಂತರ ಇಲಾಖೆಯ ಯೋಜನೆಗಳು, ಕ್ರೀಡಾಂಗಣ ಕುರಿತು ಪ್ರಿಯಾಂಕ ಮಾಹಿತಿ ಪಡೆದರು.
ಇಲಾಖೆಯ ವ್ಯಾಪ್ತಿಗೊಳಪಡುವ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ವೀಕ್ಷಣೆ ಮಾಡಿದರು. ಜಿಲ್ಲಾ ಕ್ರೀಡಾ ವಸತಿ ನಿಲಯ ಮತ್ತು ಸಂತೇಮರಹಳ್ಳಿಯ ಆರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾವಸತಿ ಶಾಲೆಗೂ ಭೇಟಿ ನೀಡಿದರು.
ಇದೇ ಸಂದರ್ಭದಲ್ಲಿ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡ ಪ್ರಿಯಾಂಕ ಅವರು ಒಂದು ದಿನ ಕ್ರೀಡಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದು, ಒಳ್ಳೆಯ ಅನುಭವ ಹಾಗೂ ಸಂತಸ ತಂದಿದೆ. ಕ್ರೀಡಾ ಇಲಾಖೆಯ ಕೆಲಸವನ್ನು ನಾನೂ ಸಹ ನಿರ್ವಹಿಸಬಲ್ಲೆ ಎಂಬ ಬಲವಾದ ಆತ್ಮವಿಶ್ವಾಸ ಮೂಡಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕಾರ ನೀಡಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್. ಅನಿತಾ ಅವರು ಮಾತನಾಡಿ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಒಂದು ದಿನ ಯುವ ಕ್ರೀಡಾ ಅಧಿಕಾರಿಯಾಗಿ ಅನುಭವ ಪಡೆಯಲು ಸ್ನಾತಕೋತ್ತರ ವಿದ್ಯಾರ್ಥಿನಿ ಪ್ರಿಯಾಂಕ ಅವರನ್ನು ಆಯ್ಕೆ ಮಾಡಿ ಇಲಾಖೆ ಕಳುಹಿಸಿ ಕೊಟ್ಟಿತ್ತು. ಆ ಪ್ರಕಾರ ಪ್ರಿಯಾಂಕ ಅವರು ಜಿಲ್ಲಾ ಕಚೇರಿ, ಕ್ರೀಡಾಂಗಣ, ಕ್ರೀಡಾ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಅನುಭವ ಪಡೆದುಕೊಂಡಿದ್ದಾರೆ ಎಂದರು.