ಬೆಂಗಳೂರು : ಕಾಲರಾ, ಸಿಡುಬು, ಪ್ಲೇಗ್ ಮೊದಲಾದ ಸಾಂಕ್ರಾಮಿಕಗಳ ವಿರುದ್ಧ ಹೋರಾಡಿ ಗೆದ್ದಿರುವಂತೆಯೇ ಈಗಲೂ ಎಲ್ಲರೂ ಒಗ್ಗಟ್ಟಿನಿಂದ ಪರಿಸ್ಥಿತಿ ನಿಭಾಯಿಸಿದರೆ ಕೊರೊನಾದಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಕರ್ನಾಟಕ ವೀರಶೈವ ಅಭಿವೃದ್ಧಿ ಸಂಸ್ಥೆ ಹಾಗೂ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಹೇಳಿದ್ದಾರೆ.
ಕರ್ನಾಟಕ ವೀರಶೈವಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ವಿಜಯನಗರದ ಶ್ರೀಜಗಜ್ಯೋತಿ ಬಸವೇಶ್ವರ ವಿದ್ಯಾರ್ಥಿನಿಲಯದ ಆವರಣದಲ್ಲಿ ತೆರೆಯಲಾಗಿರುವ “ಕೊರೊನಾ ಆರೈಕೆ ಕೇಂದ್ರ” ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೊರೊನಾ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿರೋಧ ಪಕ್ಷಗಳು ರಚನಾತ್ಮಕ ಸಲಹೆ ನೀಡಲಿ ಎಂದರು.
ವಿರೋಧಿಸುವುದು ಮಾತ್ರ ವಿರೋಧ ಪಕ್ಷದ ಕೆಲಸವಲ್ಲ. ರಾಜ್ಯ ಸರ್ಕಾರ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದ್ದು ಇನ್ನೂ ಹೆಚ್ಚಿನ ಆರೈಕೆ ಕೇಂದ್ರಗಳನ್ನು ತೆರೆಯಲು ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿ ನಿಲಯದಲ್ಲಿ ತಾತ್ಕಾಲಿಕವಾಗಿ ೫೦ ಕೊಠಡಿಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ ಇಬ್ಬರು ತಂಗಲು ಅವಕಾಶವಿದೆ. ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಕೊಠಡಿ, ಶೌಚಾಲಯ, ಬಿಸಿ ನೀರಿನ ಸ್ನಾನ ಗೃಹ ಇದೆ. 24 ಗಂಟೆ ಬಿಸಿನೀರು, ದಿನಪತ್ರಿಕೆ, ವೈ -ಫೈ ಸೌಲಭ್ಯವಿದೆ.
ನಿತ್ಯ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ಹಾಗೂ ರಾತ್ರಿ ಪೌಷ್ಟಿಕ ಹಾಗೂ ಆರೋಗ್ಯಕರ ತಿಂಡಿ, ಊಟದ ವ್ಯವಸ್ಥೆ ಇದೆ. ನುರಿತ ವೈದ್ಯರು, ದಾದಿಯರು, ಸಹಾಯಕರು ಹಾಗೂ ಸ್ವಚ್ಚತಾ ಸಿಬ್ಬಂದಿ ದಿನದ ೨೪ ಗಂಟೆ ಪಾಳಿಯ ಆಧಾರದಲ್ಲಿ ಸೇವೆ ಸಲ್ಲಿಸುತ್ತಾರೆ. ಸೋಂಕಿತರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಂ.ರುದ್ರೇಶ್ ಈ ಆರೈಕೆ ಕೇಂದ್ರ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕರಾದ ಪುಟ್ಟಸ್ವಾಮಿ, ಪ್ರಭುದೇವರು, ಬಿ.ಆರ್.ಶಿವಣ್ಣ, ಗುರುಶಾಂತಯ್ಯ, ಬಸವಶ್ರೀ ಆಸ್ಪತ್ರೆ ಹಾಗೂ ಡಯಾಗ್ನಾಸ್ಟಿಕ್ ಕೇಂದ್ರದ ಉಸ್ತುವಾರಿ ಡಾ. ಅಶ್ವಿನ್ ಕುಮಾರ್, ಸಂಸ್ಥೆಯ ಸಿಬ್ಬಂದಿ ಇದ್ದರು..