ಚಾಮರಾಜನಗರ: ತಾಲೂಕಿನ ಕರಡಿಮೋಳೆ ಗ್ರಾಮದಲ್ಲಿ ಭಗೀರಥಮಹರ್ಷಿ ಜಯಂತಿ ಅಂಗವಾಗಿ ಭಗೀರಥ ಉಪ್ಪಾರ ಯುವಕಸಂಘದ ನಾಮಫಲಕದ ಅನಾವರಣ ಕಾರ್ಯಕ್ರಮ ನಡೆಯಿತು.
ನಾಮಫಲಕ ಅನಾವರಣ ಮಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಸಮಾಜ ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಪ್ರತಿಯೊಬ್ಬರು ಶಿಕ್ಷಣಪಡೆದಾಗ ಸಮಾಜದ ಮುಖ್ಯವಾಹಿನಿಗೆ ಬರಲುಸಾಧ್ಯ. ಇಂದಿಗೂ ಸಮಾಜದ ಪಿಡುಗಾಗಿರುವ ಬಾಲ್ಯವಿವಾಹ ನಿರ್ಮೂಲನೆಗೆ ಹೆಣ್ಣುಮಕ್ಕಳು ವಿದ್ಯಾವಂತರಾಗುವೊಂದೇ ಮಾರ್ಗ ಎಂದರು.
ಜಿಲ್ಲೆಯಲ್ಲಿ ಉನ್ನತಶಿಕ್ಷಣಕ್ಕೆ ಸಾಕಷ್ಟು ಅವಕಾಶಗಳಿದ್ದು, ಇದರ ಸದುಪಯೋಗವನ್ನು ಸಮುದಾಯದ ವಿದ್ಯಾರ್ಥಿಗಳು ಪಡೆಯಬೇಕು, ಕಠಿಣತಪಸ್ಸಿನಫಲವಾಗಿ ಧರೆಗೆ ಗಂಗೆಯನ್ನು ಕರೆತಂದ ಭಗೀರಥಮಹರ್ಷಿ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸಂಘಸಂಸ್ಥೆಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆ ಕಾರ್ಯಕ್ರಮದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಗೀರಥಮಹರ್ಷಿ ಭಾವಚಿತ್ರದ ಮೆರವಣಿಗೆ ನಡೆಯಿತು.
ಗಡಿಯಜಮಾನ ಕೃಷ್ಣ, ಯಜಮಾನರಾದ ಕ್ಯಾತಶೆಟ್ಟಿ, ನಾರಾಯಣ, ನಾಗರಾಜು, ನೀಲಶೆಟ್ಟಿ, ಮಹದೇವಸ್ವಾಮಿ, ಸುರೇಶ್, ರಂಗಸ್ವಾಮಿ, ಪ್ರಸನ್ನ ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.