* ಎಪಿಎಂಸಿ ಪ್ರಧಾನ ಕಚೇರಿಯಲ್ಲಿ ನಡೆದ ರಾಜ್ಯ ಕೃಷಿ ಮಾರಾಟ ಮಂಡಳಿಯ ಪ್ರಧಾನಸಭೆಯಲ್ಲಿ ಸಚಿವರ ಹೇಳಿಕೆ
* ಎಪಿಎಂಸಿಗೆ ಬರುವ ಉತ್ಪನ್ನಗಳ ವೈಶಿಷ್ಟ್ಯ ಬಗ್ಗೆ ಕಿರುಚಿತ್ರದಲ್ಲಿ ಮಾಹಿತಿ
* ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ಎಪಿಎಂಸಿ ಮುಚ್ಚಲು ಬಿಡಲ್ಲ ಎಂದು ವಾಗ್ದಾನ ಮಾಡಿದ್ದಾಗಿ ಸಭೆಗೆ ವಿವರಣೆ
* ಎಪಿಎಂಸಿಯಲ್ಲಿ ಶುಲ್ಕ ಭರಿಸಲು ಏಕರೂಪ ನೀತಿಗೆ ಚಿಂತನೆ
* ಹಮಾಲರ ಭದ್ರತೆಗಾಗಿ ಗ್ರೂಪ್ ಇನ್ಶೂರೆನ್ಸ್
* ಆತ್ಮನಿರ್ಭರ ಅಡಿ ಸಾವಯವ ಬೆಲ್ಲಕ್ಕೆ ಒತ್ತು; ಮಂಡ್ಯ ಸಾವಯವ ಬೆಲ್ಲ ಉತ್ಪಾದಿಸುವ ಆಲೆಮನೆಗಳಿಗೆ ತಲಾ 5 ಲಕ್ಷ ರೂಪಾಯಿ ಸಾಲ
* 162 ಎಪಿಎಂಸಿ ಮಾರ್ಕೆಟ್ ಮೂಲಸೌಕರ್ಯಕ್ಕೆ
206 ಕೋಟಿ ರೂ. ಬಿಡುಗಡೆ
ಬೆಂಗಳೂರು: ಎಪಿಎಂಸಿ ಮಹತ್ವ ಏನು..? ಯಾವ ಯಾವ ಎಪಿಎಂಸಿಗಳು ಯಾವುದಕ್ಕೆ ಪ್ರಖ್ಯಾತಿ ಪಡೆದಿದೆ…? ಅಲ್ಲಿಗೆ ಬರುವ ಪ್ರಮುಖ ಉತ್ಪನ್ನಗಳು ಯಾವುವು..? ಅವು ಯಾವ ಯಾವ ಕಡೆ ರಫ್ತಾಗುತ್ತದೆ.? ಯಾವ ಕಾರಣಕ್ಕೆ ಉಪಯೋಗವಾಗುತ್ತದೆ ಎಂಬಿತ್ಯಾದಿ ಮಾಹಿತಿಗಳುಳ್ಳ ಉತ್ಪನ್ನಗಳು ಹಾಗೂ ಅದರ ವೈಶಿಷ್ಟ್ಯದ ಬಗ್ಗೆ ಕಿರುಚಿತ್ರ ನಿರ್ಮಾಣ ಮಾಡಲಾಗುತ್ತದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಎಪಿಎಂಸಿ ಪ್ರಧಾನ ಕಚೇರಿಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕೃಷಿ ಮಾರಾಟ ಮಂಡಳಿಯ ಪ್ರಧಾನಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಎಲ್ಲ ಎಪಿಎಂಸಿಗಳಿಗೆ ಭೇಟಿ ನೀಡಿ ಅವುಗಳ ಸಾಧನೆ ಬಗ್ಗೆ, ಅಲ್ಲಿನ ಉತ್ಪನ್ನಗಳು ಹಾಗೂ ಅದರ ವೈಶಿಷ್ಟ್ಯದ ಬಗ್ಗೆ ಕಿರುಚಿತ್ರ ನಿರ್ಮಾಣ ಮಾಡಿ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುವುದು. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು, ಸದಾನಂದ ಗೌಡ ಅವರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಆಗುವ ಅನುಕೂಲಗಳ ಬಗ್ಗೆ ಈಗಾಗಲೇ ಮಾಧ್ಯಮಗಳ ಮೂಲಕ ಜಾಹೀರಾತುಗಳನ್ನು ನೀಡಲಾಗಿದೆ. ಇನ್ನು ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ರೈತರಿಗೆ ಅರಿವು ಮೂಡಿಸಲಾಗುವುದು. ಇದಕ್ಕೋಸ್ಕರವೇ ಕಿರುಚಿತ್ರ ನಿರ್ಮಾಣ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಎಪಿಎಂಸಿಯಲ್ಲಿ ಶುಲ್ಕ ಭರಿಸಲು ಏಕರೂಪ ನೀತಿಗೆ ಚಿಂತನೆ
ಎಪಿಎಂಸಿ ಕಾಯ್ದೆ ಬದಲಾವಣೆಗೂ ಸರ್ಕಾರ ಬದ್ಧವಾಗಿದೆ. ಎಪಿಎಂಸಿ ಒಳಗೆ ಹಾಗೂ ಹೊರಗೆ ಮಾರಾಟ ಮಾಡಲು ಏಕರೂಪ ನೀತಿ ಅಳವಡಿಸುವ ಬಗ್ಗೆ ಚಿಂತನೆ ಮಾಡುತ್ತೇವೆ. ಇನ್ನು ಎಲ್ಲ 162 ಎಪಿಎಂಸಿಗಳಿಗೂ ನಾನು ಭೇಟಿ ನೀಡಿ ಅವಹಾಲುಗಳನ್ನು ಆಲಿಸಲಿದ್ದೇನೆ.
ಈಗಿರುವ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು? ಯಾವ ಬದಲಾವಣೆಗಳನ್ನು ತಂದರೆ ಏನು ಮಾಡಬಹುದು? ಅಧಿಕಾರ ವಿಕೇಂದ್ರೀಕರಣ ಮಾಡಿ ಸ್ಥಳೀಯವಾಗಿ ಯಾವ ರೀತಿ ಅಧಿಕಾರ ನೀಡಬಹುದು ಎಂಬುದರ ಬಗ್ಗೆ ಗಮನಹರಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ಇರುವವರೆಗೂ ಎಪಿಎಂಸಿ ಮುಚ್ಚಲು ಬಿಡಲ್ಲ
ಎಪಿಎಂಸಿ ವ್ಯವಸ್ಥೆ ಬಹಳ ದೊಡ್ಡದು. ಇದನ್ನು ದುರ್ಬಲಗೊಳಿಸುವುದು ಹಾಗೂ ಮುಚ್ಚುವುದು ಸರ್ಕಾರದ ಉದ್ದೇಶವಿಲ್ಲ. ಎಪಿಎಂಸಿಗಳನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು, ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಹಾಗೂ ನಾನು ಇರುವವರೆಗೂ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸಹಕಾರ ಸಚಿವರಾದ ಸೋಮಶೇಖರ್ ತಿಳಿಸಿದರು.
ಹಾಲಿ ಎಪಿಎಂಸಿಯಲ್ಲಿ ವಹಿವಾಟು ನಡೆಸಿದರೆ 60 ಪೈಸೆ ಶುಲ್ಕ ವಸೂಲಿ ಮಾಡಲು ಒಪ್ಪಿಗೆ ದೊರೆತಿದೆ. ಇನ್ನು ಕೇಂದ್ರ ಸರ್ಕಾರ ಮಾರ್ಗಸೂಚಿ 10 ದಿನಗಳಲ್ಲಿ ಬರುವ ಸಾಧ್ಯತೆ ಇದ್ದು, ಅದು ಬಂದ ಮೇಲೆ ಎಪಿಎಂಸಿ ಹೊರಗೂ ಸಹ 60 ಪೈಸೆ ಶುಲ್ಕ ವಿಧಿಸುವ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಆತ್ಮನಿರ್ಭರ ಅಡಿ ಸಾವಯವ ಬೆಲ್ಲಕ್ಕೆ ಒತ್ತು; ಮಂಡ್ಯ ಸಾವಯವ ಬೆಲ್ಲ ತಯಾರಿಸುವ ಆಲೆಮನೆಗಳಿಗೆ ತಲಾ 5 ಲಕ್ಷ ರೂಪಾಯಿ ಸಾಲ
ಆತ್ಮನಿರ್ಭರ ಯೋಜನೆ ಅಡಿ ಸಾವಯವ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಮಂಡ್ಯ ಜಿಲ್ಲೆಯ ಸಾವಯವ ಬೆಲ್ಲ ಉತ್ಪಾದನೆ ಮಾಡಲಿರುವ ಆಲೆಮನೆಗೆ ಸಾಲ ಸೌಲಭ್ಯ ನೀಡಲು ಕ್ರಮ ವಹಿಸಲಾಗಿದ್ದು, 20 ಕೋಟಿ ರೂಪಾಯಿ ಮಂಜೂರಾತಿ ಮಾಡಲಾಗುತ್ತಿದ್ದು, ಒಂದೊಂದು ಆಲೆಮನೆಗೆ ತಲಾ 5 ಲಕ್ಷ ರೂಪಾಯಿಯಂತೆ ಸಾಲ ನೀಡಲಾಗುವುದು ಎಂದು ಸಹಕಾರ ಸಚಿವರಾದ ಸೋಮಶೇಖರ್ ಹೇಳಿದರು.
162 ಎಪಿಎಂಸಿ ಮಾರ್ಕೆಟ್ ಮೂಲಸೌಕರ್ಯಕ್ಕೆ
206 ಕೋಟಿ ರೂ. ಬಿಡುಗಡೆ
ಎಪಿಎಂಸಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವತ್ತ ಮುಂದಾಗಿದ್ದು, ಇದರ ಮೂಲಸೌಕರ್ಯ ಅಭಿವೃದ್ಧಿಗಾಗಿ ನಬಾರ್ಡ್ ನಿಂದ 206 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ಬಳಸಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಹಮಾಲರ ಭದ್ರತೆಗಾಗಿ ಗ್ರೂಪ್ ಇನ್ಶೂರೆನ್ಸ್
ರಾಜ್ಯದಲ್ಲಿ 24059 ಹಮಾಲರು ಕಾರ್ಯನಿರ್ವಹಿಸುತ್ತಿದ್ದು, 18ರಿಂದ 64 ವರ್ಷದೊಳಗೆ ಇರುವ ಹಮಾಲರಿಗೆ ಜೀವ ವಿಮೆ ಜಾರಿಯಲ್ಲಿದ್ದು, ಅವರಿಗೆ ಹೆಚ್ಚಿನ ಸೌಲಭ್ಯ ನೀಡುವ ನಿಟ್ಟಿನಲ್ಲಿ ಎಲ್ಐಸಿ ಜೊತೆಗೂಡಿ ಗ್ರೂಪ್ ಮೈಕ್ರೋ ಟರ್ಮ್ ಅಶ್ಯೂರನ್ಸ್ ಪ್ಲಾನ್ ನೀಡುವ ಕುರಿತು ತೀರ್ಮಾನಿಸಲಾಗಿದೆ.
ಈ ಗ್ರೂಪ್ ಇನ್ಶೂರೆನ್ಸ್ ನಿಂದ ಪ್ರೀಮಿಯಂ ಮೊತ್ತ ಬರುವುದಲ್ಲದೆ, ಒಂದು ವೇಳೆ ಹಮಾಲರು ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿವರೆಗೂ ವಿಮೆ ಪರಿಹಾರ ಜಮೆಯಾಗಲಿದೆ.
ಈ ಸಂದರ್ಭದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಎಪಿಎಂಸಿ ನಿರ್ದೇಶಕರಾದ ಕರಿಗೌಡ ಸೇರಿದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೃಷಿ ಮಾರಾಟ ಮಂಡಳಿಯ ಜಿಲ್ಲಾ ಸದಸ್ಯರು ಭಾಗವಹಿಸಿದ್ದರು.