ಚಾಮರಾಜನಗರ. ರಾಷ್ಟ್ರ ವೀರರು ಹಾಗೂ ಮಹಾತ್ಮರ ಸ್ಮರಣೆಯಿಂದ ನಮ್ಮಲ್ಲಿ ಹೊಸ ಚೈತನ್ಯ ಉಂಟುಮಾಡುತ್ತದೆ. ಕ್ರಾಂತಿಕಾರಿಗಳಲ್ಲಿ ಅತ್ಯಂತ ಶ್ರೇಷ್ಠರು ಹಾಗೂ ಅಪ್ರತಿಮ ದೇಶ ಭಕ್ತರಾದ ನೇತಾಜಿ ಎಂದೇ ಪ್ರಸಿದ್ಧಿ ಪಡೆದ ಸುಭಾಷ್ ಚಂದ್ರ ಬೋಸ್ 125ನೇ ಜನ್ಮ ದಿನ ಆಚರಿಸುವುದು ನಮ್ಮ ಪುಣ್ಯ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಪ್ರಿಯದರ್ಶಿನಿ ಸಾಣಿಕೊಪ್ಪ ರವರು ತಿಳಿಸಿದರು.


ಅವರು ಜೈಹಿಂದ್ ಪ್ರತಿಷ್ಠಾನದ ವತಿಯಿಂದ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನ ಹಾಗೂ ಪರಾಕ್ರಮ ದಿನವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರು ಭಾರತ ರಾಷ್ಟ್ರೀಯ ಸೈನ್ಯವನ್ನು ಕಟ್ಟಿ ,ನೀವು ನಿಮ್ಮ ರಕ್ತವನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ತಂದು ಕೊಡುತ್ತೇನೆ ಎಂಬ ಘರ್ಜನೆಯ ಮೂಲಕ ಯುವಮನಸ್ಸುಗಳ ಮೇಲೆ ರಾಷ್ಟ್ರ ಭಕ್ತಿ, ರಾಷ್ಟ್ರಪ್ರೇಮವನ್ನು ಮತ್ತು ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಮನೋಭಾವನೆಯನ್ನ ಬೆಳೆಯುವಂತೆ ಮಾಡಿದ ಕ್ರಾಂತಿಕಾರಿ ನೇತಾಜಿಯವರ ರಾಷ್ಟ್ರಪ್ರೇಮ ರಾಷ್ಟ್ರ ಚಿಂತನೆ ನಮ್ಮೆಲ್ಲರಿಗೂ ಕೂಡ ಆದರ್ಶವಾಗಬೇಕು ಎಂದು ತಿಳಿಸಿದರು.


ಮಹಿಳೆಯರ ಶಕ್ತಿ ಮತ್ತು ಶ್ರೇಷ್ಠತೆಯನ್ನು ಸೈನ್ಯದಲ್ಲಿ ಅಳವಡಿಸಿದ ನೇತಾಜಿ ಅವರ ಕೊಡುಗೆ ಅಪಾರ. ಮಹಿಳೆಯರಿಗೆ ಸೈನ್ಯದಲ್ಲಿ ಆದ್ಯತೆಯನ್ನು ನೀಡಿ ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಜಾನ್ಸಿ ರಾಣಿ ಲಕ್ಷ್ಮೀಬಾಯಿ ರೆಜಿಮೆಂಟನ್ನು ಆರಂಭಿಸಿ ಮಹಿಳಾ ಸೈನ್ಯವನ್ನು ರೂಪಿಸಿದ ನೇತಾಜಿಯವರ ದೂರದೃಷ್ಟಿಗೆ ಭಾರತೀಯರಾದ ನಾವು ಸದಾಕಾಲ ಚಿರಋಣಿಯಾಗಿರ ಬೇಕು.
ಯುವಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ರಾಷ್ಟ್ರಪ್ರೇಮವನ್ನು ಹಾಗೂ ರಾಷ್ಟ್ರೀಯ ವಿಚಾರಧಾರೆಗಳನ್ನು ವಿವಿಧ ಕಾರ್ಯಕ್ರಮಗಳನ್ನು ರೂಪಿಸುವ ಜೈ ಹಿಂದ್ ಸಂಘಟನೆ ಮಾದರಿಯಾಗಿದೆ. ಯುವಕರಲ್ಲಿ ಸ್ವಾಭಿಮಾನ ಆತ್ಮಗೌರವ ರಾಷ್ಟ್ರಪ್ರೇಮದ ಚಿಂತನೆಯ ಅಗತ್ಯವಿದೆ. ರಾಷ್ಟ್ರಕ್ಕಾಗಿ ನಾನು ಎಂಬ ಭಾವನೆ ಮೈಗೂಡಿಸಿಕೊಳ್ಳುವ ದಿಕ್ಕಿನಲ್ಲಿ ರಾಷ್ಟ್ರೀಯ ನಾಯಕರ ಸ್ಮರಣೆ ಅಗತ್ಯವಿದೆ ಎಂಬ ಮಾನಸಿಕತೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಚಿಂತಕರು ವಾದ ಸುರೇಶ್ಋಗ್ವೇದಿ ರವರು ಮಾತನಾಡಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನವೇ ಒಂದು ರೋಮಾಂಚನಕಾರಿ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿ ಹೋರಾಟ ಒಂದು ಕಡೆಯಾದರೆ ,ನೇತಾಜಿಯವರ ಹೋರಾಟದ ಮತ್ತೊಂದು ದಿಕ್ಕಿನಲ್ಲಿ ಸಾಗಿ ಬ್ರಿಟಿಷರ ವಿರುದ್ಧ ಅಂತಿಮವಾಗಿ ಭಾರತಕ್ಕೆ ಸ್ವಾತಂತ್ರ್ಯ ಘೋಷಣೆ ಮಾಡುವ ದಿಕ್ಕಿನಲ್ಲಿ ಕೊಡುಗೆ ಅಪಾರ ಎಂದರು. ಐಸಿಎಸ್ ಪರೀಕ್ಷೆಯಲ್ಲಿ ಉನ್ನತ ತೇರ್ಗಡೆ ಯನ್ನು ಹೊಂದಿ ಉತ್ತಮ ಹುದ್ದೆಯನ್ನು ಹೊಂದಬಹು ದಾಗಿದ್ದ ನೇತಾಜಿಯವರು ರಾಷ್ಟ್ರಕ್ಕಾಗಿ ತ್ಯಾಗ ಬಲಿದಾನ ಮಾಡಿಕೊಂಡವರು.

ಗೃಹಬಂಧನದಿಂದ ತಪ್ಪಿಸಿಕೊಂಡು ಪೇಜಾವರ ಕಾಬೂಲ್ ಜರ್ಮನಿಗೆ ತೆರಳಿ ಅಲ್ಲಿಯ ಅಡಾಲ್ಫ್ ಹಿಟ್ಲರ್ ನನ್ನು ಭೇಟಿಯಾಗಿ ಅಲ್ಲಿಂದ ಜಪಾನಿಗೆ ಬಂದು ಜಪಾನಿನ ರಾಜರನ್ನು ಬೇಟಿಯಾಗಿ, ಸಿಂಗಾಪುರ್ ನಲ್ಲಿ ಭಾರತ ರಾಷ್ಟ್ರೀಯ ಸೇನೆಯನ್ನು ಸ್ಥಾಪನೆ ಮಾಡಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಕೇಂದ್ರವನ್ನಾಗಿ ಮಾಡಿಕೊಂಡು ಸಿಂಗಾಪುರದಲ್ಲಿ ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರ ವನ್ನು ಸ್ಥಾಪಿಸಿದವರು. 1944 ರಲ್ಲಿ ಕೋಹಿಮಾ ಇಂಫಾಲ ಕಾಕಿನಾಡ ಗಳನ್ನು ವಶಪಡಿಸಿಕೊಂಡು ಬರ್ಮಾ ಮೂಲಕ ಭಾರತದ ಈಶಾನ್ಯ ಪ್ರದೇಶಗಳನ್ನು ಗೆದ್ದುಕೊಂಡ ನೇತಾಜಿಯವರ ಸಾಹಸವನ್ನು ಎಂದೂ ಮರೆಯಲಾಗದು . ಐ ಎನ್ ಎ ಸೈನಿಕರು ದೆಹಲಿಯ ಕೆಂಪುಕೋಟೆಯಲ್ಲಿ ಬಂಧಿಸಿದಾಗ ಸೈನಿಕರನ್ನು ಗಲ್ಲುಶಿಕ್ಷೆಯಿಂದ ಬಿಡುಗಡೆಗೊಳಿಸಿದ ಇತಿಹಾಸವನ್ನು ನಾವು ಕಾಣಬಹುದು .


ದೆಹಲಿಯಲ್ಲಿ ಇಂಡಿಯಾಗೇಟ್ ನಲ್ಲಿ ನೇತಾಜಿ ಅವರ ಬೃಹತ್ ಪ್ರತಿಮೆಯನ್ನು ಸ್ಥಾಪನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಭಾರತೀಯ ಸೈನ್ಯ ಮತ್ತು ರಕ್ಷಣೆ ಹಾಗೂ ರಾಷ್ಟ್ರಪ್ರೇಮದ ವಿಚಾರಧಾರೆಗಳಿಗೆ ಹೆಚ್ಚು ಮಹತ್ವವನ್ನು ನೀಡಬೇಕು ಎಂದು ತಿಳಿಸಿದರು.


ದಿವ್ಯ ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರಾದ ದಾನೇಶ್ವರಿ ಅಕ್ಕ ರವರು ಮಾತನಾಡಿ ದೇಶದ ಸ್ಥಾನಕ್ಕಾಗಿ ತಪಸ್ಸು ತ್ಯಾಗ ಬಲಿದಾನದ ಮೂಲಕ ಹೋರಾಟದ ಬದುಕನ್ನು ನಡೆಸಿದ ನೇತಾಜಿಯವರು ನಮ್ಮೆಲ್ಲರಿಗೂ ಕೂಡ ನೆಮ್ಮದಿಯ ಬದುಕನ್ನು ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ರಾಷ್ಟ್ರೀಯ ಬಲ ಆತ್ಮ ಬಲ ಹೆಚ್ಚಿಸಿಕೊಂಡು ಯುವಶಕ್ತಿ ರಾಷ್ಟ್ರಕ್ಕಾಗಿ ತಮ್ಮ ಸೇವೆಯನ್ನು ಸಲ್ಲಿಸುವ ಅವಕಾಶವನ್ನು ದಿನಗಳು ಆಲೋಚಿಸುವಂತೆ ಮಾಡಲಿ ಎಂದು ತಿಳಿಸಿದರು.


 ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ವೇಷ ಧರಿಸಿ ಸುಭಾಷ್ ರವರ ಜೀವನ ಮತ್ತು ಇತಿಹಾಸದ ಬಗ್ಗೆ ಸೈಂಟ್ ಫ್ರಾನ್ಸಿಸ್ ಐಸಿಎಸ್ ಶಾಲೆಯ 3 ನೆ ತರಗತಿಯ ಕಿಶೋರ್ ಶ್ರೀನಿವಾಸ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜೈಹಿಂದ್ ಪ್ರತಿಷ್ಠಾನದ ಕುಸುಮಾ ಋಗ್ವೇದಿ ಪ್ರೌಢಶಾಲಾ ಶಿಕ್ಷಕರಾದ ಸವಿತಾ ಅಕ್ಕಮಹಾದೇವಿ ಮಹಿಳಾ ಸಂಘದ ವತ್ಸಲ ರಾಜ ಗೋಪಾಲ್, ಬಿ ಕೆ ಆರಾದ್ಯರು, ಶ್ರೀನಿವಾಸ್ ಭಾಗ್ಯಶ್ರೀ . ರವಿ ಮಾಲ, ಝಾನ್ಸಿ ಮಕ್ಕಳ ಪರಿಷತ್ ಶ್ರಾವ್ಯ ಎಸ್ ಋಗ್ವೇದಿ , ಸಾನಿಕ, ವೈಭವಿ, ಇದ್ದರು.