‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್’

ಈ ಮಾತು ಕನ್ನಡಿಗರನ್ನು ಕುರಿತು ಶ್ರೀವಿಜಯ ಹೇಳಿದ ಹೆಗ್ಗಳಿಕೆಯ ಮಾತಾದರೂ ಅಲ್ಲಿ ಪ್ರತಿಬಿಂಬಿತವಾದದ್ದು ಯಾವುದೋ ನಗರದ ಅಥವಾ ಅರಮನೆಯ ಒಡ್ಡೋಲಗದ ನಡುವಿನ ಪಂಡಿತರನ್ನು ಕುರಿತು ಅಲ್ಲ ಅನ್ನುವುದು ಹದಿನಾರಾಣೆ ಸತ್ಯ.

ಕನ್ನಡಿಗರ ಹಿರಿಮೆಯ ಕುರಿತು ಬರೆದ ಪ್ರಸಿದ್ದ  ವಾಕ್ಯ. ಯಾವುದೇ ವಿಷಯದಲ್ಲಿ ಹೆಚ್ಚು ಓದಿಕೊಳ್ಳುವ  ಅವಶ್ಯಕತೆ ಇಲ್ಲದೆ  ಕಾವ್ಯ ರಚನೆ  ಮಾಡಲು  ಬೇಕಾದ  ಜ್ಞಾನ ಭಂಡಾರ ಇವರಲ್ಲಿ ಇತ್ತು ಎಂಬುದು ಭಾವಾರ್ಥ. ಕುಮಾರ ವ್ಯಾಸನಂತೂ ಹಲಗೆ ಬಳಪವ ಹಿಡಿಯದೆ ಉಪಯೋಗಿಸಿದ ಪದವನ್ನು ಪುನಃ ಬಳಸದೆ  ಕಾವ್ಯ ರಚನೆ ಮಾಡಿದೆನೆಂದು ಹೆಮ್ಮೆಪಡುತ್ತಾನೆ. ಹೀಗೆ ನೋಡುತ್ತಾ ಹೋದರೆ ಆಂಡಯ್ಯ ಕವಿಯ ‘ಕನ್ನಡ ನಾಡಿನ ವರ್ಣನೆ’ ಕಾವ್ಯದಲ್ಲೂ ಕನ್ನಡ ನಾಡಿನ ಜನರ ಬದುಕಿನ ಚೆಲುವನ್ನು ಕಾಣಬಹುದು. ಸಾಮಾನ್ಯವಾಗಿ ನೋಡುವುದಾದರೆ ಜಗತ್ತಿನ ಎಲ್ಲ ಸಾಹಿತ್ಯ ಹಾಗೂ ಸಂಸ್ಕೃತಿಗಳ ಉಗಮಸ್ಥಾನ ಗ್ರಾಮಗಳೇ ಆಗಿರುವುದರಲ್ಲಿ ಎರಡು ಮಾತಿಲ್ಲ. ‘ವ್ಯಾಸೋಚ್ಚಿಷ್ಟಂ ಜಗತ್ ಸರ್ವಂ’, ಅನ್ನುವುದು ಪಂಡಿತರಿಂದ ಮಂಡಿತವಾಗಿ ಉದ್ಗ್ರಂಥಗಳಲ್ಲಿ ಭೂಷಿತವಾಗಿರುವ ಮಾತಾಗಿರಬಹುದು ಆದರೆ ಜಗತ್ತಿನ ಜೀವಂತ ಭಾಷೆಗಳು ಮತ್ತು ಸಮೃದ್ದ ಭಾಷೆಗಳ ವಿಚಾರಕ್ಕೆ ಬಂದಾಗ ಈ ಮಾತು ಕೇವಲವಾಗುತ್ತದೆ. ಅಲ್ಲಿ ಬದುಕು ಭಾಷೆಯನ್ನು ನೆಡೆಸುತ್ತದೆ,ಬೆಳೆಸುತ್ತದೆ. ಆದ್ದರಿಂದ ‘ಲೋಕೋಚ್ಚಿಷ್ಟಂ ಜಗತ್ ಸರ್ವಂ’ ಅಂದರಾಗಲಿ ‘ಜನಪದೋಚ್ಚಿಷ್ಟಂ ಜಗತ್ ಸರ್ವಂ’ ಅಂದರಾಗಲಿ ಅತಿಷಯೋಕ್ತಿಯಾಗಲಾರದು ಅನ್ನುವುದು ನನ್ನ ಅಭಿಮತ.

 ಕಡಲ ತೀರದ ಭಾರ್ಗವ ಡಾ.ಕೆ.ಶಿವರಾಮ ಕಾರಂತರನ್ನು ಪಾಶ್ಚಿಮಾತ್ಯರೊಬ್ಬರು ಹೀಗೆ ಕೇಳುತ್ತಾರೆ “ಕಾರಂತರೆ ಕನ್ನಡ ಸಾಹಿತ್ಯದಿಂದ ವಿಶ್ವ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಏನು?” 

 ಅದಕ್ಕೆ ಉತ್ತರಿಸಿದ ಕಾರಂತರು “ಕನ್ನಡ ಸಾಹಿತ್ಯದಿಂದ ವಿಶ್ವಸಾಹಿತ್ಯಕ್ಕೆ ನೀಡಿದ ಅತಿ ದೊಡ್ಡ ಕೊಡುಗೆ ಜನಪದ ಸಾಹಿತ್ಯ” ಎಂದು ಹೆಮ್ಮೆಯಿಂದ ಹೇಳುತ್ತಾರೆ.

 ಅದು ಜನಪದಕ್ಕೆ ಇರುವ ತಾಕತ್ತು. ಕಾರಣ ಜನಪದ ಸಾಹಿತ್ಯದ ಉದ್ದೇಶ ಕೇವಲ ಸಾಹಿತ್ಯ ಸೃಷ್ಟಿಯಾಗಿರಲಿಲ್ಲ. ಅಲ್ಲಿ ಸಾಹಿತ್ಯಕ್ಕಾಗಿ ಸಾಹಿತ್ಯ ಹುಟ್ಟಿದ್ದಲ್ಲ. ಗ್ರಾಮೀಣ ಜನರ ಬದುಕಿನ ಅನುಭವ ಮತ್ತು ಅನುಭಾವದ ಒಟ್ಟು ಮೊತ್ತವಾಗಿ ಬೆಳಕು ಕಂಡದ್ದು. ಕನ್ನಡ ಭಾಷೆಗೆ ಚೆಲುವಿನ ಸೊಬಗು ಕೊಟ್ಟದ್ದು. ಗ್ರಾಮೀಣರ ಬದುಕೇ ಒಂದು ಸಂದರ ಮಹಾಕಾವ್ಯವೆಂದರೆ ತಪ್ಪಾಗಲಾರದು. ಜನರು ಜನರ ನಡುವಿನ ಬಾಂಧವ್ಯ, ಜನರು ಪ್ರಾಣಿಗಳ ನಡುವಿನ ಬಾಂಧವ್ಯ, ಜನರು ಮತ್ತು ಪ್ರಕೃತಿಯ ನಡುವಿನ ಬಾಂಧವ್ಯ ತೀರ ಸಮೀಪದ್ದಾಗಿ ತೋರುವ ಜೀವನವದು.  ಸೂರ್ಯನು ಹುಟ್ಟಿದಾಗಿನಿಂದ ಮುಳುಗುವವರೆಗೆ ದುಡಿಯುತ್ತಾರೆ.

ಕತ್ತಲಾದಮೇಲೆ ದಣಿವಾರಿಸಲು ಒಂದೆಡೆ ಕೂತು ಹಾಡುತ್ತಾರೆ,ಕುಣಿಯುತ್ತಾರೆ. ಇಲ್ಲಿ ಕಾವ್ಯಗಳು ಹುಟ್ಟುತ್ತವೆ, ಕಥೆಗಳು ಕಟ್ಟುತ್ತವೆ. ಇಲ್ಲಿ ಭಾಷೆಯ ಸೊಬಗು ದಿನದಿನವು ಹೊಸದಾಗಿ ಚಿಗಿತು ಅರಳುತ್ತದೆ. ಅದಕ್ಕೆ ಕಾರಣ ಗ್ರಾಮದ ಬದುಕು ಹಾಗೂ ಅವರ ಮನದ ವೈಶಾಲ್ಯತೆಯ ಶ್ರೀಮಂತಿಕೆಯ ಗುಣ. ಬದುಕನ್ನು ನೋಡುವ ಮತ್ತು ಅನುಭವಿಸುವ ಪರಿಯೇ ಬೇರೆ. ಪ್ರಪಂಚದ ಯಾವುದೇ ವಿಶ್ವವಿದ್ಯಾಲಯಗಳೂ ಕಲಿಸದ ಪಾಠವನ್ನು ನಮ್ಮ ಜನಪದರ ಬದುಕು ಕಲಿಸುತ್ತದೆ ಹಾಗೂ ಕಲಿಸುತ್ತಾ ಬಂದಿದೆ ಎಂದರೆ ತಪ್ಪಲ್ಲ. ಆಧುನಿಕತೆ ಬೆಳೆದಂತೆ ವಿಜ್ಞಾನ ಮೈತಳೆದಂತೆ ಪ್ರಪಂಚ ನಮಗೆ ತುಂಬಾ ಹತ್ತಿರವಾಗಿದೆ. ನಮ್ಮ ಕೈಯಲ್ಲಿರುವ ಒಂದು ಮೊಬೈಲ್ ನಲ್ಲಿ  ಪ್ರಪಂಚದಲ್ಲಿ ಯಾವುದೋ ಜಾಗದಲ್ಲಿ ಈ ಕ್ಷಣದಲ್ಲಿ ನೆಡೆಯುತ್ತಿರುವುದನ್ನು ನೋಡಬಹುದು. ಅಂತರಿಕ್ಷದ ಗ್ರಹಗಳ ಚಲನೆಯನ್ನು ವೀಕ್ಷಿಸುವಷ್ಟು ಮಟ್ಟಿಗೆ ಬೆಳೆದಿದ್ದೇವೆ. ನಮಗೆ ಕೊರತೆಯಿರುವುದು ಸಂಶೋಧನೆಯಲ್ಲಲ್ಲ, ಆಧುನಿಕತೆಯಲ್ಲಲ್ಲ. ಬದುಕಿನಲ್ಲಿ! ಬದುಕು ಅನ್ನುವುದು ಕೇವಲ ವ್ಯವಹಾರವಲ್ಲ. ಮಾನವ ಸಂಬಂಧಗಳ ಸಮ್ಮಿಲನ. ನಗರೀಕರಣ ಹೆಚ್ಚಿದಂತೆಲ್ಲ ಹತ್ತಿರವಿದ್ದ ಸಂಬಂಧಗಳೂ ದೂರ ದೂರ ಸಾಗುತ್ತಿವೆ. ಚಂದ್ರನನ್ನು ಕಂಡಿರುವ ಮನುಷ್ಯ ನೆರಮನೆಯ ಅಂಗಳ ಕಾಣುವಲ್ಲಿ ವಿಫಲನಾಗಿದ್ದಾನೆ. ನೆರೆ ಅನ್ನುವುದೇ ಹೊರೆಯಾಗಿರುವಾಗ ಮಾನವ ಸಂಬಂಧಗಳ ಮೌಲ್ಯವಾದರೂ ಎಲ್ಲಿ ಉಳಿಯಬೇಕು. ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ಹಬ್ಬ,ಜಾತ್ರೆ ಅಂದರೆ ಹತ್ತಾರು ಜನ ಸಂಬಂಧಿಕರು ಬರುತ್ತಿದ್ದರು.

 ಈಗಿನಂತೆ ಮನೆಗಳಲ್ಲಿ ಪ್ರತ್ಯೇಕ ರೂಮುಗಳಾಗಲಿ ಇತರೆ ವ್ಯವಸ್ಥೆಗಳಾಗಲಿ ಇರಲಿಲ್ಲ. ಆದರೂ ಯಾವುದೇ ಕೊರತೆಯಾಗದೆ ನಾಲ್ಕಾರು ದಿನ ಇರುವ ವ್ಯವಸ್ಥೆಯಲ್ಲೇ ಮನೆಯವರೊಡನೆ ಹೊಂದಿಕೊಂಡು ಸಂತೋಷದಿಂದ ಇದ್ದು ಬೀಳ್ಕೊಳ್ಳುತ್ತಿದ್ದರು. ಅಂದು ಮನೆಯಲ್ಲಿ ಜಾಗವಿಲ್ಲದಿದ್ದರೂ ಮನಸ್ಸಿನಲ್ಲಿ ಜಾಗವಿರುತ್ತಿತ್ತು. ಈಗ ಮನೆಯಲ್ಲಿ ಜಾಗವಿದೆ ಆದರೆ ಮನಸ್ಸಿನಲ್ಲಿ ಜಾಗವಿಲ್ಲ. ಪಟ್ಟಣದಲ್ಲಿರುವವರ ಮನೆಗೆ ಯಾರಾದರೂ ಸಂಬಂಧಿಕರು ಬಂದರೆ ತಡವರಿಸುತ್ತಾರೆ. ಹೇಳದೆ ಕೇಳದೆ ಬಂದರಂತೂ ಮುಗಿಯಿತು. ಅದಕ್ಕೆ ಹೇಳುವುದು ‘ಬಡವನ ಮನೆಯಲ್ಲಿ ಎಲ್ಲರಿಗೂ ಜಾಗವಿದೆ, ಶ್ರೀಮಂತರ ಮನೆಯಲ್ಲಿ ಎಲ್ಲರಿಗೂ ಜಾಗವಿಲ್ಲ! ಗ್ರಾಮೀಣ ಬದುಕೇ ಹಾಗೆ ಸಂಬಂಧ ಕೇವಲ ರಕ್ತಸಂಬಂಧವಾಗಿರಬೇಕೆಂದೇ ಅಲ್ಲ. ಹಸಿದವರಿಗೆ ಒಂದು ತುತ್ತು ಇರುತ್ತಿತ್ತು. ನೆಮ್ಮದಿ ಅಲ್ಲಿ ಹಾಸಿ ಹೊದ್ದು ಮಲಗಿತ್ತು. ಎತ್ತಿನ ಗಾಡಿಯ ತಿಗಡಿಗೆ, ಗದ್ದೆಯ ತೆವರಿಗೆ ತಲೆಕೊಟ್ಟು ನೆಮ್ಮದಿಯಾಗಿ ನಿದ್ದೆಮಾಡುತ್ತಿದ್ದ ಕಾಲವೆಲ್ಲಿ, ಸರಿಯಾಗಿ ನಿದ್ರೆಯೇ ಬರುತ್ತಿಲ್ಲ ಎಂದು ದಿಂಬು, ಹಾಸಿಗೆಯನ್ನೂ ಡಾಕ್ಟರ್ ಸಲಹೆ ಕೇಳಿ ತರುವ ಕಾಲವೆಲ್ಲಿ! 

 ತವರು ಮನೆಯಿಂದ ಗಂಡನ ಮನೆಗೆ ಹೊರಟ ಹೆಣ್ಣು ಮಗಳ ಮಾತೊಂದು ನೆನಪಾಗುತ್ತದೆ

 “ಮಾಮರದ ತಂಪಿಗೆ ಕೂತಿರುವ ಗಿಳಿಗಳೆ

  ಚದುರಂಗಿ ಮಾತ ನಿಲ್ಲಿಸಿ. ಚದುರಂಗಿ ಮಾತ 

  ನಿಲ್ಲಿಸಿ ಗಿಳಿಗಳೆ ನೀವ್ ಬನ್ನಿ ನನ್ನ ಕಳುಹೋಕೆ|

  ಯಕ್ಕೇಯ ಗಿಡದಾಗೆ ಹಕ್ಕಿ ಬೋರಾಡಿದಂಗೆ ಅಕ್ಕ

  ನೀಲಮ್ಮನ ಬಳಗಾದ, ಅಕ್ಕ ನೀಲಮ್ಮನ ಬಳಗಾದ

  ಕಣ್ಣೀರು ಹನ್ನೆರಡೊಳೆಯಾಗಿ ಹರಿದಾವೋ||

  ಕುರಿತೋದದೆಯೂ ಕಾವ್ಯಪ್ರಯೋಗದಲ್ಲಿ ಪರಿಣಿತರಾಗಿದ್ದರು. ಅದರಲ್ಲೂ ನಮ್ಮ ಗ್ರಾಮೀಣ ಹೆಣ್ಣುಮಕ್ಕಳು ಅನ್ನುವುದಕ್ಕೆ ಮೇಲಿನ ಹಾಡಿಗಿಂತ ಮತ್ತೊಂದು ಸಾಕ್ಷಿ ಬೇಕಿಲ್ಲ. ಇಲ್ಲಿ ಮಾಮರ ಅಂದರೆ ತವರು, ಅಲ್ಲಿ ಕುಳಿತಿರುವ ಗಿಳಿಗಳೆಂದರೆ ತನಗಿಂತ ಕಿರಿಯ ಮಕ್ಕಳು. ಅದ್ಭುತ ಪ್ರತಿಮೆಯನ್ನು ಜನಪದ ಹೆಣ್ಣುಮಗಳು ತಂದಿದ್ದಾಳೆ. ಅದು ಅವಳಿಗೆ ಗ್ರಾಮೀಣ ಬದುಕಿನಿಂದ ಬಂದ ಕೊಡುಗೆ. ನಮ್ಮ ಗ್ರಾಮೀಣರದು ನೆಮ್ಮದಿಯ ಶ್ರೀಮಂತ ಜೀವನ. ಆ ಬದುಕಿನಿಂದ ಸೊಗಸಾಗಿ ಅರಳಿರುವುದು ನಮ್ಮ ಭಾಷೆ!


ಡಾ.ಕಿರಣ್ ಸಿಡ್ಲೇಹಳ್ಳಿ
                                     ಸಾಹಿತಿ ಹಾಗೂ ಶಿಕ್ಷಕ