ಸರಗೂರು: ತಾಲೂಕಿನಾದ್ಯಂತ ಶುಕ್ರವಾರ, ಶನಿವಾರ ರಾತ್ರಿ ಸುರಿದ ಭಾರಿ, ಗಾಳಿ ಮಳೆಗೆ ರೈತರ ಬೆಳೆಗಳು, ಕಟಾವಿಗೆ ಬಂದಿದ್ದ ಬೆಳೆಗಳೂ ಸಂಪೂರ್ಣವಾಗಿ ನೆಲೆ ಕಚ್ಚಿದ್ದು, ಮನೆಗಳ ಮೇಲೆ ತೆಂಗಿನ ಮರಗಳು ಬಿದ್ದು ಸಂಪೂರ್ಣವಾಗಿ ಜಖಂಗೊಂಡಿವೆ. ಅಲ್ಲದೆ ಬಿರುಗಾಳಿಗೆ ಸಿಮೆಂಟ್‌ನ ತಗಡುಗಳು ಹಾರಿ ಹೋಗಿದ್ದು, ತುಂಬಾ ನಷ್ಟವಾಗಿದೆ ಎಂದು ರೈತರು ಆರೋಪಿಸಿದ್ದಾರೆ.]


ಸಾಗರೆ ಗ್ರಾಮದ ಮುಖಂಡ ಮಹೇಂದ್ರ ಅವರ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಅಲ್ಲದೆ ತೆಂಗಿನ ಮರಗಳು ಬುಡಸಮೇತವಾಗಿ ನೆಲಕ್ಕುರುಳಿದೆ. ಹೀಗಾಗಿ ಲಕ್ಷಾಂತರ ರೂ.ನಷ್ಟವಾಗಿದೆ ಎಂದು ಮಹೇಂದ್ರ ದೂರಿದ್ದಾರೆ.


ಅದೇ ರೀತಿ ದೇವಲಾಪುರ ಗ್ರಾಮದ ರೈತರಾದ ರಾಜಪ್ಪ ಅವರು ೨ ಎಕರೆ ಬಾಳೆ, ಗಿರೀಶ್ ಅವರ ೪ ಎಕರೆ, ಕಮಲಮ್ಮ ಅವರ ೨ ಎಕರೆ, ಶಿವಣ್ಣ ೨ ಬಾಳೆ ತೋಟದ ಗಿಡಗಳು ಗಾಳಿ ಮಳೆಗೆ ನೆಲೆ ಕಚ್ಚಿದ್ದು, ಸಾಲಸೋಲ ಮಾಡಿ ಲಕ್ಷಾಂತರ ರೂ.ಖರ್ಚಿನಲ್ಲಿ ಬಾಳೆ ಗಿಡ ನಾಟಿ ಮಾಡಲಾಗಿತ್ತು. ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿರುವಾಗ ಬಿರುಗಾಳಿ, ಮಳೆಗೆ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ. ಇದರಿಂದ ತುಂಬಾ ನಷ್ಟ ಉಂಟಾಗಿದೆ. ಕೂಡಲೇ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಮನವಿ ಮಾಡಿದ್ದಾರೆ.


ಮನೆ ಜಖಂ: ಶನಿವಾರ ರಾತ್ರಿ ಸುರಿದ ಭಾರಿ ಗಾಳಿ, ಮಳೆಗೆ ತಾಲೂಕಿನ ನೆಮ್ಮನಹಳ್ಳಿ ಗ್ರಾಮದ ರಾಮಬಾಯಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಮನೆಯಲ್ಲಿ ರಾಮಬಾಯಿ ಅವರನ್ನು ಹೊರತು ಪಡಿಸಿ ಇನ್ನುಳಿದವರು ಇರಲಿಲ್ಲ. ಹೀಗಾಗಿ ಹೆಚ್ಚಿನ ಅನಾಹುತವಾಗಿಲ್ಲ. ಅದೃಷ್ಟವಶಾತ್ ರಾಮಬಾಯಿ ಅವರು ಪ್ರಾಣಾಪಾಯರಿಂದ ಪಾರಾಗಿದ್ದಾರೆ. ಮನೆಯ ಮೇಲಿನ ಮಧ್ಯಭಾಗದಲ್ಲಿಯೇ ತೆಂಗಿನ ಮರ ಬಿದ್ದಿರುವುದರಿಂದ ಮಳೆ ನೀರು ಮನೆಯೊಳಗೆ ನುಗ್ಗಿದ್ದು, ಆಹಾರ ಧಾನ್ಯಗಳು ಹಾಳಾಗಿವೆ. ಇದಲ್ಲದೆ ಪಾತ್ರೆ ಸೇರಿದಂತೆ ಇನ್ನಿತರ ಪರಿಕರಗಳು ನಾಶವಾಗಿವೆ. ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಎಂದು ಗ್ರಾಮದ ಮುಖಂಡ ಮಹದೇವ್ ಒತ್ತಾಯಿಸಿದ್ದಾರೆ.