ಮೀನಿನ ಬಲೆಗೆ ಸಿಲುಕಿದ ಕಾಡಾನೆ ರಕ್ಷಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ

ಕಾಡಾನೆಯನ್ನು ದಡದತ್ತ ಸೇರಿಸುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಮುಂದಾಗುತ್ತಿರುವುದು.
ಸರಗೂರು: ನುಗು ಸೂಕ್ಷ್ಮ ವಲಯ ಪ್ರದೇಶದ ವ್ಯಾಪ್ತಿಯಲ್ಲಿನ ನುಗು ಜಲಾಶಯದಲ್ಲಿ ಮೀನುಗಾರಿಕೆಗಾಗಿ ಬಿಡಲಾಗಿದ್ದ ಬಲೆಗೆ ಕಾಡಾನೆಯೊಂದು ಸಿಲುಕಿ ಪರದಾಡಿದಲ್ಲದೆ ತುಂಬಾ ನಿತ್ರಾಣಗೊಂಡು 8 ತಾಸುಗಳ ತರುವಾಯ ಹರಸಾಹಸ ಪಟ್ಟು ಅರಣ್ಯ ಇಲಾಖೆ, ಅಗ್ನಿಶಾಮಕ ದಳದ ಸಹಾಯದಿಂದ ಬಲೆಗೆ ಬಿಡಿಸಿಕೊಂಡು ದಡ ಸೇರಿ ಕಾಡಿನತ್ತ ಪ್ರಯಾಣಿಸಿದೆ.
ತಾಲೂಕಿನ ನುಗು ವನ್ಯಜೀವಿ ವಿಭಾಗದ ನುಗು ಜಲಾಶಯದ ಗೇಟ್‍ನ ಎದುರಿನ ನೀರಿನಲ್ಲಿ ಮಂಗಳವಾರ
ಮುಂಜಾನೆ ಸುಮಾರು 6.30ರ ಸಮಯದಲ್ಲಿ ಕಾಡಿನ ಒಂದು ಅಂಚಿನಿಂದ ಮತ್ತೊಂದು ಅಂಚಿಗೆ ನೀರಿನ ಮೂಲಕ ಕಾಡಾನೆಗಳ ಹಿಂಡು ದಾಟುತ್ತಿದ್ದವು ಎನ್ನಲಾಗಿದೆ.
ಈ ಸಂದರ್ಭದಲ್ಲಿ 14-15 ವರ್ಷದ ಗಂಡಾನೆಯೊಂದು ಜಲಾಶಯದಲ್ಲಿ ಬೀಡಲಾಗಿದ್ದ ಮೀನಿನ ಬಲೆಗೆ ಸಿಲುಕಿಕೊಂಡಿದೆ. ಇದರಿಂದ ಗಾಬರಿಗೊಂಡ ಸಲಗ ದಿಕ್ಕು ತೋಚದಂತಾಗಿದೆ. ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದ್ದರೂ ವಿಫಲವಾಗಿದ್ದು, ತುಂಬಾ ದಣಿವಾಗಿದೆ. ಬಳಿಕ ಜಮೀನಿಗೆ ಹೋಗುತ್ತಿದ್ದ ರೈತರ ಕಣ್ಣಿಗೆ ಆನೆಯ ಪರದಾಟ ದೂರದಿಂದಲೇ ಕಂಡು ಬಂದಿದ್ದು, ಕೂಡಲೇ ವಿಷಯವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಅಗ್ನಿ ಶಾಮಕ ಇಲಾಖೆಯ ಸಹಾಯದೊಂದಿಗೆ ಬೋಟ್ ಮೂಲಕ ಆನೆ ಸಮೀಪ ಹೋಗಿ ಆನೆಯ ಕಾಲಿಗೆ ಸಿಲುಕಿದ ಬಲೆಯನ್ನು ಬಿಡಿಸುವಲ್ಲಿ ಸಫಲರಾಗಿದ್ದಾರೆ. ನಂತರ ಆನೆಯನ್ನು ನೀರಿನಿಂದ ಹೊರ ತರಲು ಆನೆಯ ಸುತ್ತ ಬೋಟ್ ಮೂಲಕ ಸಂಚಾರಿಸಿ ಪ್ರಯತ್ನಿಸಿದಾದರೂ ಆನೆ ನೀರಿನಿಂದ ಹೊರಬರಲು ದಾರಿ ಕಾಣದೆ ಕಂಗಾಲಾಗಿತ್ತು. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಚೆನ್ನನಾಯಕ ನೀರಿಗಿಳಿದು ಆನೆ ಸ್ಥಿತಿಯನ್ನು ಗಮನಿಸಿ ನಂತರ ಆನೆಯನ್ನು ದಡದತ್ತ ಮುಖ ಮಾಡಿಸುವ ಪ್ರಯತ್ನ ಮಾಡಲಾಯಿತು.
ಕೊನೆಗೆ ಅರಣ್ಯ ಇಲಾಖೆಯ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ, ಅಗ್ನಿ ಶಾಮಕ ಇಲಾಖೆ 7 ಸಿಬ್ಬಂದಿ ಹಾಗೂ ಪೋಲಿಸ್ ಇಲಾಖೆಯ 10ಕ್ಕೂ ಹೆಚ್ಚು ಸಿಬ್ಬಂದಿಗಳ ಸುಮಾರು 8 ಗಂಟೆಗಳ ಸತತ ಕಾರ್ಯಚರಣೆ ಬಳಿಕ ಆನೆಯನ್ನು ದಡ ಸೇರಿ ಕಾಡಿನತ್ತ ಮುಖ ಮಾಡಿಸಿದರು. ಇನ್ನೂ ನೀರಿನಲ್ಲಿ ಸಿಲುಕಿದ ಆನೆಯನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿದ್ದರು.
ಸ್ಥಳದಲ್ಲಿ ಹೆಡಿಯಾಲ ಅರಣ್ಯ ಉಪವಿಭಾಗದ ಎಸಿಎಫ್ ರವಿಕುಮಾರ್, ವಲಯ ಅರಣ್ಯಧಿಕಾರಿಗಳಾದ ಗೀತಾ, ಮಂಜುನಾಥ್, ಪುಟ್ಟರಾಜು, ಅಗ್ನಿ ಶಾಮಕ ಇಲಾಖೆಯ ಠಾಣಾಧಿಕಾರಿ ಕೆ.ಸಿ.ರಮೇಶ್, ಪ್ರಮುಖ ಅಗ್ನಿಶಾಮಕ ಅಶೋಕ್ ನಾರ್ಥಿ, ಸಿಬ್ಬಂದಿಗಳಾದ ಪುಂಡಲೀಕ ಲಮಾಣಿ, ಡಿ.ವಿನಯ್ ಕುಮಾರ್, ಆನಂದ್ ಅತ್ತಿಗೇರಿ, ಎಸ್.ದಿನೇಶ್ ಮುಂತಾದವರು ಸ್ಥಳದಲ್ಲಿದ್ದರು.

ಮೀನಿನ ಬಲೆಗೆ ಕಾಡಾನೆ ಸಿಲುಕಿ ನೀರಿನಿಂದ ಹೊರಬರಲು ತುಂಬಾ ಹರಸಾಹಸ ಪಟ್ಟಿದೆ. ಮೂಕ ಕಾಡುಪ್ರಾಣಿಗಳಿಗೆ ಇಂಥ ದುರ್ಗತಿ ಮರುಕಳಿಸಬಾರದು. ಈ ಕುರಿತು ಸರ್ಕಾರಕ್ಕೆ ವರದಿ ನೀಡುತ್ತೇನೆ. ನುಗು ಸೂಕ್ಷ್ಮ ಪ್ರದೇಶವಾಗಿದ್ದು, ಮೀನುಗಾರಿಕೆ ಮಾಡುವುದನ್ನು ನಿಲ್ಲಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಮೀನುಗಾರಿಕೆಯಿಂದ ಕಾಡಿನ ಪ್ರಾಣಿಗಳಿಗೂ ಹಾಗೂ ಹಿನ್ನೀರಿಗೆ ವಲಸೆ ಬರುವ ಪಕ್ಷಿಗಳಿಗೂ ತೊಂದರೆಯಾಗುತ್ತಿದೆ. ತಪ್ಪಿಸಲು ಶೀಘ್ರದಲ್ಲೇ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಇಲ್ಲವಾದಲ್ಲಿ ಕಾಡು ಪ್ರಾಣಿಗಳ ಸಂತತಿ ಕಡಿಮೆಯಾಗಲಿದೆ. ಹೀಗಾಗಿ ಸರಕಾರವೂ ಎಚ್ಚೇತ್ತು ಕಠಿಣಕ್ರಮ ಜರುಗಿಸಬೇಕು.
ರವಿಕುಮಾರ್, ಎಸಿಎಫ್, ಹೆಡಿಯಾಲ ಅರಣ್ಯ ಉಪವಿಭಾಗ.

ನೀರಾವರಿ ಇಲಾಖಾಧಿಕಾರಿಗಳು ಮೀನುಗಾರಿಕೆಗೆ ಟೆಂಡರ್ ನೀಡಿದಲ್ಲದೆ ಹಣದಾಸೆಗೆ ಅಕ್ರಮ ಮೀನುಗಾರಿಕೆ ನಡೆಸಲು ಅನುಮತಿ ನೀಡುತ್ತಿದ್ದಾರೆ. ಇದರಿಂದ ಕಾಡು ಪ್ರಾಣಿಗಳ ಜೀವಕ್ಕೆ ಸಂಚಾಕಾರ ಉಂಟಾಗುತ್ತಿದೆ. ಇದೇ ರೀತಿ ಮೀನಿನ ಬಲೆಗೆ ಸಿಲುಕಿ ಇನ್ನೆಷ್ಟು ಜಲಚರ ಜೀವಿಗಳು, ಪಕ್ಷಿಗಳು ಸಾವನ್ನಪ್ಪಿರಬಹುದು ಎಂಬುದು ಗೋಚರಿಸದು. ಹೀಗಾಗಿ ಕೂಡಲೇ ಸರಕಾರ ಮೀನುಗಾರಿಕೆ ನಡೆಸುವುದು ನಿಲ್ಲಿಸಬೇಕಿದೆ.
ನವೀನ್‍ಕುಮಾರ್, ಹೊಸಬಿರ್ವಾಳ್.

By admin