ಸುವರ್ಣ ಬೆಳಕು ಫೌಂಡೇಷನ್ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ದಿನಾಂಕ: ೧೩-೦೭-೨೦೨೨ರ ಸಂಜೆ ೬:೦೦ಕ್ಕೆ ವಿಜಯನಗರ ೧ನೇ ಹಂತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಂ.ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಪಂಡಿತ್ ರಮೇಶ್ ಧನೂರ್ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಪಂ.ರಮೇಶ್ ಧನೂರ್ ಅವರಿಂದ ತಬಲ ಸ್ವತಂತ್ರ ವಾದನ ಕಾರ್ಯಕ್ರಮ ನೆಡೆಸಿಕೊಡಲಿದ್ದಾರೆ. ವಿಧಾನಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ ಉದ್ಘಾಟಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡರಾದ ಎನ್.ಎಂ.ನವೀನ್ ಕುಮಾರ್, ಹಿರಿಯ ಹಾರ್ಮೋನಿಯಂ ಕಲಾವಿದರಾದ ವೀರಭದ್ರಯ್ಯ ಹೀರೇಮಠ, ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿ.ವಿ ಉಪನ್ಯಾಸಕ ಡಾ.ದುಂಡಯ್ಯ ಪೂಜಾರ್, ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್.ಅನಂತ ಮತ್ತಿತ್ತರು ಭಾಗವಹಿಸಲಿದ್ದಾರೆ.

                   ಪಂಡಿತ್ ರಮೇಶ್ ಧನೂರ್ ಅವರ ಪರಿಚಯ

ರಾಮಪ್ಪ ಪಿ. ಹೂಗಾರ ಎಂಬ ಮೂಲ ಹೆಸರಿನ ಪಂಡಿತ್ ರಮೇಶ್ ಧನೂರ್ ಅವರು ಪದ್ಮಪ್ಪ ಮತ್ತು ತಿಪ್ಪಮ್ಮ ದಂಪತಿಗಳ ಸುಪುತ್ರರು. ೧೯೭೨ರಲ್ಲಿ ಇವರ ಜನನ. ಪ್ರಾರಂಭಿಕ ತಬಲ ಶಿಕ್ಷಣವನ್ನು ಪಂ ಶಿವಮೂರ್ತಿ ಭುವಾ ಅವರಲ್ಲಿ ಮತ್ತು ಉನ್ನತ ವ್ಯಾಸಂಗವನ್ನು ೧೯೮೯-೯೦ರಲ್ಲಿ ಗದಗಿನ ಪದ್ಮಭೂಷಣ ಡಾ. ಪಂಡಿತ ಪುಟ್ಟರಾಜ ಗವಾಯಿಗಳವರಲ್ಲಿ ಹತ್ತು ವರ್ಷಗಳ ಶಿಕ್ಷಣ ಪಡೆದಿದ್ದಾರೆ. ಇವರ ವಿದ್ಯಾರ್ಹತೆ ಡಿ.ಎಂ.ಸಿ., ಎಂ.ಎ (ಜೂನಿಯರ್, ಸೀನಿಯರ್, ವಿದ್ವತ್). ಇವರು ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಉಳ್ಳವರಾಗಿದ್ದು, ಅನೇಕ ವಿದ್ವಾಂಸರ ಸಂಗೀತ ಕಾರ್ಯಕ್ರಮಗಳಿಗೆ ಸಾಥ್ ನೀಡಿದ್ದಾರೆ.

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ವಿಶೇಷ ಸಂಗೀತ ತಾಳ ವಾದ್ಯ ಪರೀಕ್ಷೆಯ ಪರೀಕ್ಷಕ ಮತ್ತು ಮೌಲ್ಯಮಾಪಕ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ೨೦೦೧ ರಿಂದ ಮೈಸೂರಿನ ಸಪ್ತಸ್ವರ ಸಂಗೀತ ವಿದ್ಯಾಲಯ, ಭಾರತೀಯ ವಿದ್ಯಾಭವನ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಡಿನ ಹಿರಿಯ ಗಾಯಕರಾದ ಪಂಡಿತ ಸೋಮನಾಥ ಮರಡೂರ ಮಾಧವಗುಡಿ, ಪಂಡಿತ ಸೋಮನಾಥ ವಿನಾಯಕ ತೊರವಿ, ಪಂಡಿತ ವೆಂಕಟೇಶ ಕುಮಾರ ಹಾಗೂ ನಾಡಿನ ಶ್ರೇಷ್ಠ ಹಿರಿಯ ಸಂಗೀತ ತಜ್ಞರಾದ ಪಂಡಿತ ಇಂದೋಧರ ನಿರೋಡಿ ಅವರೊಂದಿಗೆ ತಬಲ ಸಾಥ್ ಮಾಡಿರುತ್ತಾರೆ.

ಪ್ರಸ್ತುತ ನಾಡಿನ ಪ್ರತಿಷ್ಠಿತ ವೇದಿಕೆಗಳಾದ ಗಾನಯೋಗಿ ಪಂಡಿತ ಸೋಮನಾಥ ಪಂಚಾಕ್ಷರಿ ಗವಾಯಿಗಳವರ ಸ್ಮೃತಿ ಸಂಗೀತೋತ್ಸವ, ಹಂಪಿ ಉತ್ಸವ, ನವರಸಪುರ ಉತ್ಸವ, ಲಕ್ಕುಂಡಿ ಉತ್ಸವ, ಬನವಾಸಿ ಉತ್ಸವಗಳಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿರುತ್ತಾರೆ. ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ತಬಲ ಸಾಥಿದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅನೇಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಈ ಎಲ್ಲಾ ಸೇವೆಗಳ ಫಲವಾಗಿ ಇವರಿಗೆ ೨೦೧೯ರಲ್ಲಿ ಕನ್ನಡ ವಿಕಾಸ ಪ್ರಶಸ್ತಿ ದೊರಕಿದೆ. ಇದೀಗ ಅವರಿಗೆ ಮೈಸೂರು ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ.