ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)

ಈ ಮೇಲಿನ ಹೇಳಿಕೆಯನ್ನು ಹೇಳಿದವರು ಬ್ರಾಹ್ಮಣ ಸಮುದಾಯದ ಮಾನವತಾವಾದಿಯಾದ ಶ್ರೇಷ್ಠ ಧುರೀಣ ದಿ.ಕುದ್ಮುಲ್ ರಂಗರಾವ್.ಆಗಿನ ಸಮಾಜದ ನಡಾವಳಿಯಂತೆ ಉತ್ತಮ ಜಾತಿ ಎಂದು ಒಣ ಶೀರ್ಷಿಕೆ ಪಡೆದ ವರ್ಗದಿಂದ ಬಂದ ಧೀಮಂತ ಸಮಾಜಬಂಧು.ಇವರು ಕಾಸರಗೋಡಿನ ಕುದ್ಮುಲ್ ಎಂಬ ಚಿಕ್ಕ ಗ್ರಾಮದಲ್ಲಿ 1859 ಜೂನ್ 29ರಂದು ತಂದೆ ದೇವಪ್ಪಯ್ಯ ತಾಯಿ ಗೌರಿ ಅವರಿಗೆ  ಹಿರಿಯ ಮಗನಾಗಿ ಜನಿಸಿದರು.ಬಾಲ್ಯದಿಂದಲೇ ಸಮಾಜದ ಸುತ್ತಮತ್ತಲಿನ ಮಾನವ ಬದುಕಿನ ಹೇಯ ಚಿತ್ರಣವನ್ನು ಸರಿಚಿತ್ತದಲ್ಲಿ ಸರಿದಾರಿಗೆ ತರುವಲ್ಲಿ ಚಿಂತಿಸಿದ ಮಹಾನ್ ಚೇತನ ಕುದ್ಮುಲ್ ರಂಗರಾವ್. ಇವರು ಬಾಲ್ಯದಲ್ಲಿ ತಮ್ಮ ಕಣ್ಣೆದುರಿಗೆ ಕೊರಗ ಸಮುದಾಯದ ಹುಡುಗ ಹೊಸ ಬಟ್ಟೆಯನ್ನು ಧರಿಸಿದ ಎನ್ನುವ ಚಿಕ್ಕ ಕಾರಣಕ್ಕೆ ಬೆತ್ತಲೆ ನಿಲ್ಲಿಸಿ ಚಾಟಿ ಏಟನ್ನು ನೀಡುತ್ತಿದ್ದನ್ನು ಕಂಡು ಮರುಗಿದರು.ತಮ್ಮ ಸಮುದಾಯದ ವಿರುದ್ಧವೇ ಪ್ರತಿಭಟಿಸಿ ನಿಂತರು.ಸ್ವಾತಂತ್ರ್ಯದ ಬದುಕಿನ ಅರಿವು ಅವರನ್ನು ಎಚ್ಚರಗೊಳಿಸಿತ್ತು.ನಮ್ಮ ಸ್ವಾತಂತ್ರ್ಯವು ಇತರರಿಗೂ ಅಗತ್ಯ ಮತ್ತು ಹಕ್ಕು ಎಂದು ವಾದಿಸತೊಡಗಿದರು.

ಅದರಂತೆಯೇ ತಮ್ಮ ಭವಿಷ್ಯದ ಕಾಯಕಗಳನ್ನು ಗುರಿ ಉದ್ದೇಶಗಳನ್ನು ಯೋಜಿಸತೊಡಗಿದರು.ಆರಂಭದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವ ಮನೋ ಇಚ್ಛೆಯನ್ನು ಹೊತ್ತು ಎಲ್ಲರಿಗೂ ಸಮಾನ ಶಿಕ್ಷಣ ನೀಡುವ ದೃಷ್ಟಿಯಲ್ಲಿ ಮುಂದಾದರು.ಅದರಂತೆಯೇ ದಲಿತ ಕೇರಿಗಳಿಗೆ ಭೇಟಿನೀಡಿ ದಲಿತರನ್ನು ಸಂತೈಸಿ ದಲಿತರಲ್ಲಿ ಮೇಲ್ಜಾತಿಯವರು ಹುಟ್ಟು ಹಾಕಿದ್ದ ಭಯವನ್ನು ಹೋಗಲಾಡಿಸಿ ನಿರ್ಭಯವಾಗಿ ಬದುಕಲು ಪ್ರೇರೇಪಿಸಿದರು.ಶಾಲೆಗೆ ದಲಿತ ಮಕ್ಕಳನ್ನು ಕರೆತಂದರು.ಈ ರೀತಿಯ ಬೆಳವಣಿಗೆಯನ್ನು ಕಂಡ ತಕ್ಷಣ ಜಾತಿ ಬಹಿಷ್ಕಾರಕ್ಕೆ ಕುದ್ಮುಲ್ ರಂಗರಾವ್ ಮೊದಲಿಗೆ ತಾವೇ ಒಳಪಟ್ಟರು.ಆ ನಂತರ ಸ್ವಜಾತಿಯವರಿಂದ ಜೀವ ಬೆದರಿಕೆಗಳನ್ನು ಎದುರಿಸಬೇಕಾಯಿತು ಊರಿನಿಂದ ಬಹಿಷ್ಕಾರಕ್ಕೂ ಒಳಗಾಗುವ ಸನ್ನಿವೇಶಗಳು ಒದಗಿ ಬಂದವು.ಇವರ ಮೊದಲ ಪ್ರಯತ್ನಕ್ಕೆ ಬಹುದೊಡ್ಡ ಸವಾಲುಗಳು ಸಾಲುಗಟ್ಟಿ ಇವರ ಮುಂದೆ ನಿಂತು ಅಡ್ಡಿಯನ್ನುಂಟು ಮಾಡಿದವು.

ಶಾಲೆಗೆ ಬಂದ ದಲಿತ ಮಕ್ಕಳನ್ನು ಅವರ ಪೋಷಕರನ್ನು ಎದುರಿಸಿ ಬೆದರಿಸಿ ಶಾಲೆಗೆ ಮಕ್ಕಳನ್ನು ಹೋಗದಂತೆ ತಡೆದರು.ಆಗ ಕುದ್ಮುಲ್ ರಂಗರಾವ್ ಅವರು ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯಲಿಲ್ಲ.ಅವರಿಗೊಂದು ಮನವರಿಕೆ ಆಯಿತು; ಪ್ರತಿಭಟಿಸಲು ಕಾನೂನುಗಳು ಮುಖ್ಯ. ಬ್ರಿಟೀಷ್ ಸರ್ಕಾರವು ಇದಕ್ಕೆ ಅನುಕೂಲವಾಗುವಂತೆ ಕಾನೂನುಗಳನ್ನು ರಚಿಸಿತ್ತು ಮತ್ತು ಶಿಕ್ಷಣದ ವ್ಯವಸ್ಥೆಯಲ್ಲಿ ಸರ್ವರಿಗೂ ಆದ್ಯತೆ ಒದಗಿಸಿತ್ತು.ಇದನ್ನು ಅರಿತ ಕುದ್ಮುಲ್ ಅವರು ಕಾನೂನು ಪದವಿಯನ್ನು ಪಡೆದುಕೊಂಡರು ವಕೀಲ ವೃತ್ತಿಯನ್ನು ಆರಂಭಿಸಿದರು.ತಮಗೆ ದಕ್ಕಿದ ಕಾನೂನಿನ ಬೆಂಬಲವನ್ನು ಆಶ್ರಯವಾಗಿ ಪಡೆದು ದಲಿತ ಸಮುದಾಯದವರ ಮೇಲೆ ದೌರ್ಜನ್ಯವೆಸಗುತ್ತಿದ್ದವರ ವಿರುದ್ಧವಾಗಿ ಕಾನೂನಾತ್ಮಕ ದಾಳಿ ಹೂಡಿದರು.ಕಾನೂನಾತ್ಮಕ ಶಿಕ್ಷೆಗೆ ನೂಕಿ ದಲಿತರ ಮೇಲಿನ ನಿರಂತರ ದೌರ್ಜನ್ಯಕ್ಕೆ ನಿಧಾನಗತಿಯನ್ನು ತಂದರು.ಮೇಲ್ಜಾತಿಯ ಯುವಕನಿಂದ  ದಲಿತ ಹೆಣ್ಣಿಗಾದ ಪ್ರೀತಿಯ ಮೋಸದ ವಿರುದ್ಧ ಜೀವನಾಂಶವನ್ನು ಕೊಡಿಸಿದರು‌.ತತ್ಸಮಾನ ಕಾಲದಲ್ಲಿದ್ದ ಬಾಲ್ಯವಿವಾಹ ,ದೇವದಾಸಿ ಪದ್ಧತಿ, ಸತಿಸಹಗಮನ ಪಧ್ಧತಿಗಳ ವಿರುದ್ಧವಾಗಿ ನಿಂತು,ಕಾನೂನಾತ್ಮಕ ರಕ್ಷಣೆಯೊಂದಿಗೆ ಹಲವು ಬಾಲ್ಯ ವಿವಾಹಗಳನ್ನು ತಡೆದರು. ಸತಿಸಹಗಮನವೆಂಬ ಕೆಟ್ಟ ಆಚರಣೆಯನ್ನು ನಿರ್ಮೂಲನೆಗೊಳಿಸಲು ಪ್ರಯತ್ನಿಸಿದರು.ಸಮಾಜದಲ್ಲಿ ಸ್ಥಾನಮಾನಗಳಿಲ್ಲದೆ ಬದುಕಿನುದ್ದಕ್ಕೂ ಚಿತ್ರಹಿಂಸೆಯೊಂದಿಗೆ ಬದುಕನ್ನು ಸಾಗಿಸುತ್ತಿದ್ದ ವಿಧವೆಯರನ್ನು, ದೇವದಾಸಿಯರನ್ನು ಕರೆತಂದು ಆಶ್ರಮಗಳನ್ನು ತೆರೆದು ಆಶ್ರಯ ನೀಡಿದರು.ದೀನ ದಲಿತರ ಸೇವೆಗಾಗಿ ‘ಡಿಪ್ರೆಸ್ಡ್ ಕ್ಲಾಸ್ ಮಿಷನ್’ ಎಂಬ ಸಂಸ್ಥೆಯನ್ನು ಆರಂಭಿಸಿದರು.ಇದರ ಅಡಿಯಲ್ಲಿ ಮಂಗಳೂರಿನ ಕಂಕನಾಡಿ, ಮೂಲ್ಕಿ, ಬೋಳೂರು,ಉಡುಪಿ, ಬನಂಜೆ,ನೇಜಾರು ಅತ್ತಾವರ , ಬಾಬುಗುಡ್ಡೆ  ದಡ್ಡಲ್ ಕಾಡುಗಳಲ್ಲಿ ಉಚಿತ  ಶಾಲೆಗಳನ್ನು ಆರಂಭಿಸಿದರು.

ಹಲವಾರು ದಲಿತ ಮಕ್ಕಳನ್ನು ಶಾಲೆಗೆ ಕರೆತಂದರು. ಪಾಠ ಮಾಡಲು ಮೇಲ್ಜಾತಿಯವರು ಬರದೇ ಇದ್ದಾಗ ತಾವೇ ಉತ್ತಮ ಶಿಕ್ಷಣ ನೀಡಿದ ದಲಿತ ಯುವಕರನ್ನು ಸಂಘಟಿಸಿ ಅವರಿಗೆ ಶಿಕ್ಷಕ ತರಬೇತಿಯನ್ನು ನೀಡಿ ದಲಿತರಿಂದಲೇ ಶಿಕ್ಷಣ ಭೋಧನೆಯನ್ನು ಮಾಡಿಸಿದರು.ಶಿಕ್ಷಿತರಾದ ಹಲವಾರು ವಿದ್ಯಾರ್ಥಿಗಳು ಸರ್ಕಾರಿ ಕೆಲಸಗಳನ್ನು ಪಡೆದುಕೊಂಡರು.ವೈದ್ಯವೃತ್ತಿ ,ವಕೀಲ ವೃತ್ತಿ ,ಶಿಕ್ಷಕ ವೃತ್ತಿ ,ಪೋಲೀಸ್ ವೃತ್ತಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗವಂತರಾದರು.ಜೊತೆಗೆ ದಲಿತರಿಗೆ ವೃತ್ತಿ ತರಬೇತಿಯನ್ನು ನೀಡಲು ಶೇಡಿಗುಡ್ಡೆ ಎಂಬಲ್ಲಿ ಕೈಗಾರಿಕಾ ವೃತ್ತಿ ತರಬೇತಿ ಶಾಲೆಯನ್ನು ತೆರೆದರು.ಇಲ್ಲಿ ಬಡಗಿ, ನೇಯ್ಗೆ, ತೋಟಗಾರಿಕೆ ,ಕಸೂತಿ ,ರೇಷ್ಮೆ ಹುಳು ಸಾಕಾಣಿಕೆ ಇತ್ಯಾದಿ ಕರಕುಶಲ ತರಬೇತಿಗಳನ್ನು ನೀಡಿ ಸಣ್ಣಪ್ರಮಾಣದ ಉದ್ಯಮಶೀಲರನ್ನಾಗಿಸಿ ಅಥವಾ ಹೂಡಿಕೆದಾರರನ್ನಾಗಿಸಿ ದಲಿತರ ಉತ್ತಮ ಬದುಕಿಗೆ ಆದರ್ಶ ದಾರಿಯನ್ನು ತೋರಿದರು.ಮತ್ತು ದಲಿತರ ಸ್ವಾವಲಂಬನೆ ಜೀವನಕ್ಕೆ ಮಾರ್ಗ ತೋರಿದರು.ಈ ಮಹತ್ಕಾರ್ಯಗಳನ್ನು ಗಮನಿಸುತ್ತಿದ್ದ ಹಲವು ಬ್ರಿಟಿಷ್ ಅಧಿಕಾರಿಗಳು ಹಾಗೂ ಶ್ರೀಮಂತರು ಕುದ್ಮುಲ್ ಅವರಿಗೆ ಅಭಿನಂದನೆಗಳನ್ನು ಮತ್ತು ಪ್ರೋತ್ಸಾಹವನ್ನು ನೀಡಿದರು.ಅಮೇರಿಕಾದ ಖ್ಯಾತ ಉದ್ಯಮಿ ಹೆರ್ನಿ ಫೋರ್ಡ್, ಜಸ್ಟಿಸ್ ವಿಲ್ಬಟ್೯.ಡಾ ಕಾರ್ನಾಟ್ ಅವರು ಕುದ್ಮುಲ್ ಅವರಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಇವರ  ಡಿ.ಸಿ.ಎಂ ಸಂಸ್ಥೆಗೆ ಧನ ಸಹಾಯವನ್ನು ಮಾಡಿದರು.ರವೀಂದ್ರನಾಥ ಟಾಗೋರ್‌,ದೀನ ಬಂಧು ಸಿ.ಎಸ್ ಆಂಡ್ರೂಸ್, ಡಾ.ಆನಿಬೆಸೆಂಟ್ ಮತ್ತು ಜಿ.ಕೆ ದೇವಧರ್, ಮುಂತಾದವರು ಈ ಸಂಸ್ಥೆಗೆ ಭೇಟಿ ನೀಡಿ ಇವರ ಮಾನವೀಯ ಸೇವೆಗಳನ್ನು ನೋಡಿ ಅಭಿನಂದಿಸಿದರು’

ಬೆಂಬಲ ಸೂಚಿಸಿದರು.ಇನ್ನೂ ಸಕಲ ಕಾರ್ಯಗಳಲ್ಲಿ ತೊಡಗಿಸಿಕೊಂಡ ಇವರ ಅಮೋಘ ಬದುಕಿನ ಸಮಾಜ ಸೇವೆಯ ವಿವರಣೆ ಸಾವಿರ ಪುಸ್ತಕಗಳ ವರದಿಯಷ್ಟಿದೆ.ಈ ಪೂರ್ಣ ಯಶಸ್ಸಿನ ಕುದ್ಮುಲ್ ಅವರ ಬದುಕಿನ ಇವತ್ತಿನ ಸಣ್ಣ ಮರು ಸ್ಮರಣೆಯಲ್ಲಿ ಕೆಲವು ಚಿಂತನೆಗಳನ್ನು ಪಡೆಯುವುದಾಗಿ ಇಲ್ಲಿ ನಾವು ನೀವೆಲ್ಲರೂ ಗಮನಿಸಿಬೇಕಾದ ಒಂದೆರೆಡು ವಿಷಯಗಳೆಂದರೆ ಮೇಲ್ಜಾತಿಯವರೆಲ್ಲಾ ಕೆಟ್ಟವರಲ್ಲ.ಅವರಲ್ಲೂ ದಲಿತರ ಬಗೆಗಿನ ಕಾರುಣ್ಯ ಪ್ರೇಮವಿತ್ತು ಎನ್ನುವುದಕ್ಕೆ ಕುದ್ಮುಲ್ ರಂಗರಾವ್ ಅವರೇ ಸಾಕ್ಷಿ ಎಂಬುದು.ಮೇಲ್ಜಾತಿ ಸಮುದಾಯದ ಅರ್ಧಭಾಗ ಮಾಡಿದ ತಪ್ಪಿಗೆ ಪೂರ್ತಿ ಸಮುದಾಯವು ದಲಿತರ ಹಿಂಸೆಯ ದೃಷ್ಟಿಯಲ್ಲಿ ಗುರಿಯಾಗಿದೆ.ಜೊತೆಗೆ ಇನ್ನೊಂದು ವಿವೇಚನೆ ಎಂದರೆ ಮೇಲ್ಜಾತಿಯಲ್ಲಿ ಹುಟ್ಟಿ ಕುದ್ಮುಲ್ ರಂಗರಾವ್ ಮಾಡಿದ ಸಾಧನೆ ತ್ರಿಕಾಲಕ್ಕೂ ಮೇಲ್ಜಾತಿಯವರೂ ಸ್ವ ವಿಮರ್ಶೆಮಾಡಿಕೊಳ್ಳಬೇಕಾದ ವಿಚಾರವಾಗಿದೆ.ಮನುಷ್ಯತ್ವದ ವಿರುದ್ಧವಾಗಿ ಬದುಕಿದ ತಪ್ಪಿಗೆ ಕ್ಷಮೆಕೋರಬೇಕಾಗಿದೆ‌.ಜೊತೆಗೆ ಸಮಾನತೆಯ ಬದುಕಿಗೆ ಹೊಂದಾಣಿಕೆಯಾಗುವಲ್ಲಿ ಮುಂದಾಗುವುದು.

ಮೇಲ್ಜಾತಿಯವರಲ್ಲಿನ ಉತ್ತಮ ಬದಲಾವಣೆ ಎಂದು ಭಾವಿಸುತ್ತೇನೆ.ಅಂದು ತೋರಿದ ತಾರತಮ್ಯವು ಇಂದು ಬಹುಭಾಗದೆಲ್ಲೆಡೆ ಮರೆಯಾಗಿದೆ ಇದು ಒಳ್ಳೆಯ ಬೆಳವಣಿಗೆ.ಮೇಲ್ಜಾತಿಯೆನಿಸದವರ ಸಮುದಾಯದಲ್ಲಿ ಎಲ್ಲರೂ ಕುದ್ಮುಲ್ ರಂಗರಾವ್ ಆದರೆ ಸಮಾಜವು ಸ್ವಾಸ್ಥ್ಯದಿಂದ ಕೂಡಿರುತ್ತದೆ.ಕುದ್ಮುಲ್ ರಂಗರಾವ್ ಅವರ ಚಿಂತನೆಯಲ್ಲಿ ಬದುಕಿನ ಶೈಲಿಯನ್ನು ಅಥವಾ ಆಚಾರ ವಿಚಾರಗಳನ್ನು ಸರಿಪಡಿಸಿಕೊಂಡರೆ ಮಾನವತಾ ಸಮಾಜ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ.ಆ ಕಾಲಕ್ಕೆ ಕುದ್ಮುಲ್ ರಂಗರಾವ್ ಅವರ ಅಪಾರ ಕೊಡುಗೆ ಯುಗದ ಸ್ಮರಣಿಕೆಯಾಗಿದೆ.ಕಾಲ ಕಾಲಕ್ಕೂ ಕುದ್ಮುಲ್ ರಂಗರಾವ್ ಅವರ ಬದುಕಿನ ಆದರ್ಶಗಳು ರವಾನೆ ಆಗುತ್ತಿರಲಿ ಮತ್ತು ಅದನ್ನು ಅನುಸರಿಸುವ ದೃಷ್ಟಿ ಎಲ್ಲರಲ್ಲೂ ಆಳವಾಗಿ ಬೇರೂರಲಿ.ದಿವಂಗತ ಕುದ್ಮುಲ್ ರಂಗರಾವ್ ಅವರಿಗೆ ಮತ್ತೊಮ್ಮೆ ಭೀಮ ವಂದನೆಗಳು.*

ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)**

ಯುವಸಾಹಿತಿ, ವಿಮರ್ಶಕ, ಸಂಶೋಧಕ.ದೂರವಾಣಿ ಸಂಖ್ಯೆ:-8884684726