ಕಾಂಕ್ರೀಟ್ ಕಾಡಿನ ಆಸೆ ಎಲ್ಲವನ್ನೂ ನುಂಗುತ್ತಿದೆ"
ಕಾಂಕ್ರೀಟ್ ಕಾಡು, ಬೆಳವಣಿಗೆಯ ವೇಗವನ್ನು ಕಾಣುತ್ತಿರುವ ಹಾಗೆ ನಿಸರ್ಗ ಕಾಣುತ್ತಿಲ್ಲವೆಂದಾಗಿದೆ. ಪರಿಸರ ದಿನಾಚರಣೆ, “ಗಿಡ ಬೆಳೆಸಿ ನಾಡು ಉಳಿಸಿ” ಎನ್ನುವ ಘೋಷಣೆ ವರ್ಷಕ್ಕೊಮ್ಮೆ ಬಂದರೆ, ಈ ಕಾಂಕ್ರೀಟ್ ಕಾಡಿನ ಅನುಸರಣೆ ಪ್ರತಿ ಸೆಕೆಂಡಿಗೆ ಸಾವಿರ ಜನರ ಬಯಕೆ ಎಂದರೂ ಆಶ್ಚರ್ಯವಿಲ್ಲ. ಕಾಂಕ್ರೀಟ್ ಕಾಡು ಎಂದೊಡನೆ ನಮ್ಮೆಲ್ಲರ ತಲೆಗೆ ಹೊಕ್ಕುವುದೊಂದೇ ನಗರದ ಪರಿಕಲ್ಪನೆ. ಪಟ್ಟಣಗಳಲ್ಲಿ ದೊಡ್ಡ ಕಾರ್ಖಾನೆಗಳು, ಜನವಸತಿ ಬಹುಮಹಡಿ ನಿಲಯಗಳು, ಮಾರುಕಟ್ಟೆ ಮಳಿಗೆಗಳು, ಸೇತುವೆಗಳು, ದೊಡ್ಡ ದೊಡ್ಡ ರಸ್ತೆಗಳು, ಐಷರಾಮಿ ಮನೆಗಳು ನಗರೀಕರಣ ಎನಿಸಿದೆ. ನಗರೀಕರಣ ನಗರದ ಭಾಗ ಮಾತ್ರವಾಗಿಲ್ಲ ಈ ಪ್ರಸ್ತುತ ದಶಕದಲ್ಲಿ ಜನಜಂಗುಳಿ ಮುಖ್ಯನಗರಗಳಿಂದ ಹಿಡಿದು ಕುಗ್ರಾಮಗಳವರೆವಿಗೂ ವ್ಯಾಪ್ತಿ ಪಡೆದುಕೊಂಡಿದೆ. ಹಾಗಾಗಿ ಈ ಕಾಂಕ್ರೀಟ್ ಕಾಡು ನಗರ ಮಾತ್ರವಲ್ಲ ಹಳ್ಳಿಗಳಿಗೂ ಆವರಿಸಿ ನಿಸರ್ಗವನ್ನೇ ನುಂಗುತ್ತಿದೆ.

ಏತಕ್ಕಾಗಿ ಈ ಕಾಂಕ್ರೀಟ್ ಕಾಡನ್ನು ಈ ರೀತಿ ಎಲ್ಲಾ ಕಡೆ ಬೆಳೆಸುತ್ತಿದ್ದಾರೆ. ಅದೇನು ಶುದ್ಧವಾದ ಗಾಳಿ ನೀಡೀತೆ? ಪರಿಸರವನ್ನು ತಂಪಾಗಿ ಇಟ್ಟೀತೆ? ನಮಗೆ ಬೇಕಾದ ಆರೋಗ್ಯಯುತ ಆಹಾರವನ್ನು ನೀಡೀತೆ? ಇಲ್ಲ. ಈ ಕಾಂಕ್ರೀಟ್ ಕಾಡು ನೀಡುವ ಒಳಿತು ಕೆಡುಕುಗಳ ಅನುಪಾತದಲ್ಲಿ ಕೆಡುಕಿನ ಅನುಪಾತವೇ ಹೆಚ್ಚು. ಹಾಗಾದರೆ ಮತ್ತೇತಕ್ಕೆ ಇದರ ವ್ಯಾಮೋಹದ ತುಡಿತ. ಇಲ್ಲಿ ನಾವು ಗಿಡ ಬೆಳೆಸಬೇಕಾದರೆ ನಾಡು ಉಳಿಸಬೇಕಾದರೆ ಈ ಕಾಂಕ್ರೀಟ್ ಕಾಡನ್ನು ಮೊದಲು ಕಡೆಯಲೇಬೇಕು ಅಥವಾ ಇದು ಹೆಚ್ಚು ಅನಾವಶ್ಯಕವಾಗಿ ಬೆಳೆಯದಂತೆ ಇನ್ನಾದರೂ ತಡೆಯಲೇಬೇಕು.
An aerial
ಎಲ್ಲೆಡೆ ಹಸಿರು, ಮನುಷ್ಯನಿಗೆ, ಇಡೀ ಪ್ರಾಣಿ ಸಂಕುಲಕ್ಕೆ ಉಸಿರಾಡಲು ಶುದ್ಧಗಾಳಿಯನ್ನು ನೀಡುತ್ತಿದೆ. ಈಗ ಆ ಹಸಿರು ಇಲ್ಲ ಮನುಷ್ಯನಿಗೆ ಸರಿಯಾಗಿ ಉಸಿರಾಡಲು ಶುದ್ಧ ಗಾಳಿಯೂ ಇಲ್ಲ. ಇತ್ತೀಚಿನ ದಿನಗಳಲ್ಲಿನ ವರದಿ ಇದು; ದೀಪಾವಳಿ ಹಬ್ಬದ ನಂತರ ದೇಶದ ರಾಜಧಾನಿ ದೆಹಲಿಯಲ್ಲಿ ಉಸಿರಾಡಲು ತೊಂದರೆಯಾಗಿ ಕೆಲ ದಿನಗಳವರೆಗೆ ಸಾರ್ವಜನಿಕ ನಿರ್ಬಂಧ ಏರಲಾಗಿತ್ತು. ಈ ಪರಿಸ್ಥಿತಿಗಳಿಗೆ ಕಾರಣ ಮನುಷ್ಯ ಎಲ್ಲಾ ಕಡೆ ಸಮವಾಗಿ ನೆಲೆ ನಿಲ್ಲುವುದರ ಬದಲು ತನ್ನ ಆಸೆಗಳ ಹೊಂಡಕ್ಕೆ ಅನಿವಾರ್ಯವಾಗಿ ಮುಗಿಬಿದ್ದು ಒಂದೆಡೆ ನೆಲೆಸಲಾಗಿ ಜನಸಾಂದ್ರತೆಯ ಒತ್ತಡದ ಚಟುವಟಿಕೆಗಳಿಂದ ಈ ರೀತಿಯ ಅಪಾಯಗಳು ಹೆಚ್ಚಾಗುತ್ತಿದೆ. ಈ ಮನುಷ್ಯ ಒಂದೆಡೆ ನೆಲೆ ಸೇರಲು ಆಯಾಯ ಜಿಲ್ಲಾವಾರು, ತಾಲ್ಲೂಕುವಾರು, ಗ್ರಾಮವಾರು ನಗರ, ಪಟ್ಟಣ, ಅಭಿವೃದ್ಧಿ ಪ್ರಾಧಿಕಾರಗಳಿಂದ ಅನುಮತಿ ಪಡೆದು; ಮನೆನಿವೇಶನ ಖಾಲಿಜಾಗಗಳನ್ನು ಸೃಷ್ಟಿಸಲು ನೂರಾರು ಅಥವಾ ಸಾವಿರಾರು ಕೃಷಿ ಭೂಮಿಗಳನ್ನು ವ್ಯವಹಾರಿಕವಾಗಿ ಮಾರ್ಪಡಿಸುತ್ತಿರುವ ಈ ಒಂದು ಬೆಳವಣಿಗೆಯೇ ಹೆಚ್ಚು ಪ್ರಮುಖವಾಗಿದೆ. ಕೃಷಿಕರೂ ಸಹ ದಡ್ಡರಾಗಿದ್ದಾರೆ. ಒಂದು ಎಕರೆಗೆ ಲಕ್ಷ, ಕೋಟಿ ಹಣ ಸಿಗುತ್ತದೆ ನಮಗೂ ಒಂದು ನಿವೇಶನ ಸಿಗುತ್ತದೆ ಕಾರು ಬಂಗಲೆ ಸಿಗುತ್ತದೆ ಹೀಗೆ ಹಾಗೇ ಎಂದು ವ್ಯಾಮೋಹಕ್ಕೆ ಬಲಿಯಾಗಿ ತಮ್ಮ ಕೃಷಿ ಭೂಮಿಗಳನ್ನು ವ್ಯವಹಾರಿಕ ಉದ್ದೇಶಗಳಿಗೆ ಮಾರುತ್ತಿದ್ದಾರೆ. ಕೊಂಡ ಉದ್ಯಮಿಗಳು ಮಂಜೂರಾತಿಗೆ ಭ್ರಷ್ಟಾಚಾರದ ಹಾದಿ ಹಿಡಿದು ದುಪ್ಪಟ್ಟು ಹಣ ಕಬಳಿಸುತ್ತಿದ್ದಾರೆ.
ನಿವೇಶನಗಳನ್ನು ಸೃಷ್ಟಿಸುವ ಖಾಸಗಿ ಉದ್ಯಮಿಗಳ; ನಿಮ್ಮ ಕನಸ್ಸಿನ ಮನೆಯನ್ನು ಸಾಕಾರಗೊಳಿಸಲು ಇಂದೇ ಸುಲಭ ಕಂತುಗಳೊಂದಿಗೆ ನೊಂದಾಯಿಸಿಕೊಳ್ಳಿ ಎನ್ನುವ ಜಾಹಿರಾತು ವ್ಯಂಗ್ಯವಾಗಿ ಕಾಣುತ್ತಿದೆ. ಮುಂದಾಗುವ ಅಪಾಯದ ಕರೆಯೋಲೆಯಾಗಿದೆ. ಆದರೆ ಅದೇಕೆ? ಇದು ಎಲ್ಲರಿಗೂ ಅರಿವಾಗುತ್ತಿಲ್ಲ. ನಾಳೆಯ ದಿನಗಳಲ್ಲಿ ಪರಿಸರ ಹಾಳುಮಾಡಿ ಕಟ್ಟಿದ ಮನೆಯೇ ನಮ್ಮ ಸಮಾಧಿಗಳಾಗುತ್ತವೆ ಎಂದು ಏಕೆ ಮನುಷ್ಯನಿಗೆ ತಿಳಿಯುತ್ತಿಲ್ಲ. ಹಣ ಚೆಲ್ಲಿದರೆ ಏನು ಬೇಕಾದರೂ ಸಾಧ್ಯವಾಗುವ ಈ ಭ್ರಷ್ಟಾಚಾರದ ಜಗತ್ತಿನಲ್ಲಿ ಕೆರೆಕಟ್ಟೆಗಳು, ಸಣ್ಣ ಪುಟ್ಟ ಬೆಟ್ಟಗಳು, ಹೀಗೆ ಮನುಷ್ಯನ ಕಣ್ಣು ಬಿದ್ದ ಅದೆಂಥಾ ಜಾಗಗಳಾದರೂ ಸರಿಯೇ ಎಲ್ಲವೂ ಮನೆ, ಮಳಿಗೆ, ರಸ್ತೆ ಹೀಗೆ ನಾನಾವಿಧವಾಗಿ ಹೊಸರೂಪು ಪಡೆದುಕೊಳ್ಳುತ್ತಿವೆ. ಅರಣ್ಯವನ್ನು ನಾಶಗೊಳಿಸಿ ಏನೂ ಬೇಕಾದರೂ ಸುಲಭವಾಗಿ ನಿರ್ಮಾಣಮಾಡಬಹುದು ಆದರೆ ಕಾಂಕ್ರೀಟ್ ಕಟ್ಟಡಗಳನ್ನು ಕೆಡುಗಿ ರಸ್ತೆ ಅಗಲೀಕರಣ ಕಷ್ಟಸಾಧ್ಯವಾಗಿದೆ. ಬಹುದೊಡ್ಡ ವ್ಯಾಜ್ಯಗಳಾಗಿ ನಿಂತಿದೆ. ನೋಡಿ ಎಂತಹ ವಿಪರ್ಯಾಸಗಳಲ್ಲಿ ಮನುಷ್ಯ ಬದುಕುತ್ತಿದ್ದಾನೆ.
ಭೂ ವಿಜ್ಞಾನವೇ ಹೀಗೇಳುತ್ತದೆ; ಭೂಮಿಯು ಒಂದು ಜ್ಯಾಮಿತಿಯಲ್ಲಿ ತನ್ನ ಮೂಲ ಸ್ವರೂಪದ ವಿಕಾಸವನ್ನು ಹೊಂದಿದೆ. ಬೆಟ್ಟ-ಗುಡ್ಡಗಳು, ನದಿ-ಸಾಗರಗಳು, ಪರ್ವತ-ಕಣಿವೆಗಳು, ಅರಣ್ಯ ಸಂಪೂನ್ಮೂಲ, ಭೂ-ಗರ್ಭನಿಧಿಶೇಷಗಳು ಹೀಗೆ ಎಲ್ಲಾ ನಿಸರ್ಗ ಅಂಶಗಳೂ ಸಹ ಜ್ಯಾಮಿತಿಯ ಸಮತೋಲನೆಯಲ್ಲಿ ರಚನೆಯಾಗಿದೆ. ಆದರೆ ಮನುಷ್ಯ ಈ ಕಾಂಕ್ರೀಟ್ ಕಾಡಿನ ಆಸೆಯಿಂದಾಗಿ ಈ ಭೂಮಿಯ ಜ್ಯಾಮಿತಿಯನ್ನು ಅವ್ಯವಸ್ಥಿತಗೊಳಿಸುತ್ತಿದ್ದಾನೆ. ಒಂದು ಬೆಟ್ಟವನ್ನು ನಾಶಮಾಡಿ ರಸ್ತೆ ನಿರ್ಮಾಣ ಮಾಡುವುದರಿಂದ, ಅರಣ್ಯಗಳನ್ನು ನಾಶಮಾಡಿ ನಗರೀಕರಣಗೊಳಿಸುವುದರಿಂದ, ಕಲ್ಲಿನ ಗಣಿಗಾರಿಕೆ, ಲೋಹಗಳ ಗಣಿಗಾರಿಕೆ ಮಾಡುವುದರಿಂದ, ದೊಡ್ಡ ದೊಡ್ಡ ನದಿಗಳಿಗೆ ಅಣೆಕಟ್ಟುಗಳನ್ನು ಹೆಚ್ಚಾಗಿ ಕಟ್ಟಿ ಅದು ಒಮ್ಮೆಲೆ ಭೋರ್ಗರೆಯುವಂತೆ ಮಾಡಿ ಅದರ ವೇಗದಲ್ಲಿ ವ್ಯತ್ಯಾಸವೇರ್ಪಡಿಸುವುದರಿಂದ ಇನ್ನೂ ಅನೇಕ ಚಟುವಟಿಕೆಗಳಿಂದ ಭೂಮಿಯು ಸೌರಮಂಡಲದಲ್ಲಿ ತನ್ನ ಕಕ್ಷೆಯಲ್ಲಿ ಹಿಡಿತ ತಪ್ಪುತ್ತದೆ. ಹಲವು ಕ್ಷುದ್ರಗ್ರಹಗಳ, ಧೂಮಕೇತುಗಳ ಹೊಡೆತಕ್ಕೆ ಅಥವಾ ಘರ್ಷಣೆಗೆ ಸಿಲುಕುತ್ತದೆ. ಇದರಿಂದಾಗಿ ಭೂಮಿಯು ನಾಶವಾಗಿ ನಾವೆಲ್ಲ ಕ್ಷಣಮಾತ್ರದಲ್ಲಿ ಮಾಯವಾಗಿಬಿಡುತ್ತೇವೆ. ಈ ಮಾಯವಾಗುವ ಅಪಾಯ ತಿಳಿಯದೇ ಈ ಕಾಂಕ್ರೀಟ್ ಕಾಡುಗಳನ್ನು ನಿರ್ಮಾಣಮಾಡುತ್ತಿರುವುದು ಶತಮೂರ್ಖತನ. ಕೇವಲ ಇಬ್ಬರಿಗೆ ಒಂದು ದೊಡ್ಡ ಮನೆ ಕಟ್ಟುವುದು ಜೊತೆಗೆ ಶ್ರೀಮಂತಿಕೆಯ ತೋರ್ಪಡಿಕೆಗೆ, ವ್ಯವಹಾರಿಕ ಉದ್ದೇಶದಿಂದ ಹಲವು ಮನೆನಿವೇಶನಗಳನ್ನು ನಿರ್ಮಿಸಿ ಕಾಂಕ್ರೀಟ್ ಕಾಡುಗಳನ್ನು ಬೆಳೆಸುವುದು ಅಪಾಯವೇ ಹೊರತು ಸೂಕ್ತ ಅವಶ್ಯಕತೆಗೆ ಮನೆಗಳ ನಿರ್ಮಾಣ ತಪ್ಪಲ್ಲ. ಈ ಅತೀ ಎನ್ನುವುದನ್ನು, ಹೆಚ್ಚುವರಿ ಎನ್ನುವುದನ್ನು ಮನುಷ್ಯ ಮೊದಲು ಬಿಡಬೇಕು. ಹೆಂಡತಿಗೆ ಒಂದು ಮನೆ, ಮಕ್ಕಳಿಗೆ ಇನ್ನೊಂದು ಮನೆ, ಮೊಮ್ಮಕ್ಕಳಿಗೆ ಮತ್ತೊಂದು ಮನೆ ಹೀಗೆ ಕುಟುಂಬವನ್ನು ವಿಭಕ್ತಗೊಳಿಸಿಕೊಂಡ ಕಾಂಕ್ರೀಟ್ ಕಾಡಿನ ನಿರ್ಮಾಣ ಅಪಾಯ. ಅವಿಭಕ್ತ ಕುಟುಂಬದಲ್ಲಿ ಜೀವಿಸಿ ಹೊಂದಾಣಿಕೆ, ಸಹಬಾಳ್ವೆಯಿಂದ ಬದುಕಿ ಎಲ್ಲರೂ ಸಮಯೋಚಿತವಾಗಿ ಒಂದೆಡೆ ನೆಲೆಸುವುದರಿಂದ ಒಳಿತಿದೆಯಲ್ಲವೇ. ತೋರ್ಪಡಿಕೆಯ ಶ್ರೀಮಂತಿಕೆ ನಮ್ಮನ್ನು ಈ ಸಮಾಜವನ್ನು ನಾಶಮಾಡುವುದಂತೂ ಖಂಡಿತ.
ಅರ್ಥಶಾಸ್ತ್ರದಲ್ಲಿ ಒಂದು ಸಿದ್ಧಾಂತವಿದೆ “ಸುಸ್ಥಿರ ಅಭಿವೃದ್ಧಿ” ಎಂದು. ಇಂದಿನ ಪೀಳಿಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸೂಕ್ತ ರೀತಿಯಲ್ಲಿ ದಕ್ಷವಾಗಿ ಬಳಸಿಕೊಂಡು ಭವಿಷ್ಯದ ಪೀಳಿಗೆಗಾಗಿ ಸಂಪನ್ಮೂಲಗಳನ್ನು ಸಂರಕ್ಷಿಸಿಡುವುದು ಅಥವಾ ಮುಂದಿನವರಿಗೆ ಎಲ್ಲವನ್ನೂ ಒಳಿತಾಗಿ ಸಾಗಿಸುವುದು ಎಂದು. ಈ ಸುಸ್ಥಿರ ಅಭಿವೃದ್ಧಿಯನ್ನು ಕೇವಲ ಪಾಠಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ ಎನಿಸುತ್ತಿದೆ. ಯಾರೂ ಸಹ ಇದನ್ನು ಸರಿಯಾಗಿ ಅರ್ಥಮಾಡಿಕೊಂಡಂತೆ ಕಾಣುತ್ತಿಲ್ಲ ಏಕೆಂದರೆ ಅರ್ಥಮಾಡಿಕೊಂಡವರು ಪಾಲಿಸಬೇಕಲ್ಲವೇ! ಈ ಸುಸ್ಥಿರ ಅಭಿವೃದ್ಧಿಯ ಸಿದ್ಧಾಂತವನ್ನು ಅನುಸರಿಸದೇ ಸಾಗುತ್ತಿರುವುದಕ್ಕೆ ಕಾಂಕ್ರೀಟ್ ಕಾಡಿನ ಬೆಳವಣಿಗೆ ಸೂಕ್ತ ನಿದರ್ಶನವಾಗಿದೆ.
ಕಾನೂನುಗಳು ರಚನೆಯಾಗಿರುವುದು ಅದನ್ನು ಮುರಿದು, ತುಳಿದು ನಡೆಯುವುದಕ್ಕಲ್ಲ, ಅನುಸರಿಸಿ ನೀತಿ ನಿಯಮಾನುಸಾರವಾಗಿ ನಡೆಯುವುದಕ್ಕೆ. ಸಾಮಾಜಿಕ, ರಾಜಕೀಯ, ಆರ್ಥಿಕ ವ್ಯವಸ್ಥೆಗಳನ್ನು ಭ್ರದ್ರಪಡಿಸುವುದಕ್ಕೆ, ಪ್ರತಿಯೊಬ್ಬ ನಾಗರಿಕನಿಗೂ ಒಳಿತಾಗಲಿ ಎಂದು. ಇಂದು ಲಂಚ ನೀಡಿ ಕಾನೂನುಗಳನ್ನು ತಮ್ಮಂತೆ ಮಾಡಿಕೊಳ್ಳುವ ಎಲ್ಲರಿಂದಲೂ ಕಾಂಕ್ರೀಟ್ ಕಾಡಿನ ಬೆಳವಣಿಗೆ ಸುಲಭವಾಗಿದೆ. ಒಂದು ಚಿಕ್ಕದಾಗಿ ಮಳೆ ಬಂದರೂ ಮನೆಮನೆಗೂ ನೀರು ನುಗ್ಗಿ, ರಸ್ತೆಗಳೆಲ್ಲವೂ ಮರೆಯಾಗಿ, ಸಣ್ಣ ಹೊಂಡಗಳೇ, ರಸ್ತೆ ಗುಂಡಿಗಳೇ, ಮನೆಯ ಮುಂದಿನ ಆವರಣಗಳೇ ಕೆರೆ ಕಟ್ಟೆಗಳಾಗುತ್ತಿರುವುದು ಎಲ್ಲೆಡೆ ಕಾಂಕ್ರೀಟ್ ಕಾಡುಗಳು ಚಿಗುರೊಡೆಯುತ್ತಿರುವುದರಿಂದ. ನಾವು ಕಟ್ಟಿದ ಕಾಂಕ್ರೀಟ್ ಕಾಡುಗಳು ಸ್ಮಶಾನ ರೂಪ ಪಡೆಯುವ ಮುನ್ನ ಸ್ವಲ್ಪವಾದರೂ ಬದಲಾವಣೆ ಇರಲಿ. ಸರ್ಕಾರದಿಂದ ಸೂಕ್ತವಲ್ಲದ ಜಾಗಗಳ ಬಳಕೆಗೆ ಗಟ್ಟಿಯಾದ ಕಾನೂನುಬದ್ಧ ನಿರ್ಬಂಧವಿರಲಿ. ಕಾನೂನುಗಳು ಎಂದಿಗೂ ಸಾರ್ವಜನಿಕರ ಆಸೆಗಳಿಗೆ ಕುಣಿಯಬಾರದು; ಅಧಿಕಾರಿಗಳೂ ಸಹ ಕಾನೂನುಗಳನ್ನು ತಮ್ಮ ಮನೋಇಚ್ಛೆ ಬಳಸಬಾರದು.
ನಮ್ಮ ಶಿಕ್ಷಣ ಪದ್ಧತಿಯಲ್ಲಿ ನಾವು ತಿಳಿಯುವ , ಸಾಮಾಜಿಕ, ರಾಜಕೀಯ, ಆರ್ಥಿಕ, ವಿಜ್ಞಾನ ಪ್ರಜ್ಞೆ ಅಥವಾ ಜ್ಞಾನಗಳೆಲ್ಲವೂ ಕೇವಲ ವ್ಯವಹಾರಿಕ ಉದ್ದೇಶಕ್ಕೆ ದುರುಪಯೋಗವಾಗಬಾರದು. ಆಗಲೇ ತಿಳಿಸಿದ ಹಾಗೆ ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆಯಾಗಲಿ, ಭೂ ವಿಜ್ಞಾನ ಮಾಹಿತಿಯಾದ ಭೂಮಿಯ ಜ್ಯಾಮಿತಿಯ ಪರಿಕಲ್ಪನೆಯಾಗಲಿ ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಸರಿಯಾದ ರೀತಿಯಲ್ಲಿ ಅನ್ವಯವಾಗದಿದ್ದರೆ ಪ್ರಯೋಜನ ಏನು ಬಂತು. ಶಿಕ್ಷಣ ಪದ್ಧತಿಯ ಜ್ಞಾನ, ಪೂರ್ತಿ ಅನ್ವಯವಾಗುತ್ತಿಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ ಆದರೆ ಭಾಗಷಃ ಬಹುಪಾಲು ಅನರ್ಥವೇ ಹೆಚ್ಚು. ಇಂತಹ ಅನೇಕ ಸನ್ನಿವೇಶಗಳ ಅನರ್ಥಗಳನ್ನು ಹೊತ್ತ ಮಾನವ ಕಾಂಕ್ರೀಟ್ ಕಾಡುಗಳ ನಿರಂಕುಶ ಪ್ರಭುವಾಗಲು ತವಕಿಸುತ್ತಿರುವುದು ಕೆಟ್ಟ ಬೆಳವಣಿಗೆಯಾಗಿದೆ.
ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್)