ಚಾಮರಾಜನಗರ: ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣವೇ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮವಾಗಿರುವುದರಿಂದ ಯಾವುದೇ ಕಾರಣಕ್ಕೂ ಖಾಸಗಿ ಕ್ಲಿನಿಕ್ ಹಾಗೂ ಅಸ್ಪತ್ರೆಗಳಿಗೆ ಹೋಗಬೇಡಿ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ತಾಲೂಕಿನ ಯರಗನಹಳ್ಳಿ, ಅರಕಲವಾಡಿ, ಹೊನ್ನಹಳ್ಳಿ ಹಾಗೂ ಮಂಗಳ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ  ನಡೆದ  ಟಾಸ್ಕ್‌ಪೋರ್ಸ್ ಸಮಿತಿಯ ಸಭೆಯಲ್ಲಿ ಪ್ರತಿ ಪಂಚಾಯಿತಿಗೆ 2 ಸಾವಿರ ಮಾಸ್ಕ್‌ಗಳ ವಿತರಣೆ  ಹಾಗೂ  ಕೋವಿಡ್‌ನಿಂದ ಮೃತಪಟ್ಟ ನಾಲ್ಕು ಪಂಚಾಯಿತಿ ವ್ಯಾಪ್ತಿಯ 13 ಮಂದಿಗೆ ತಲಾ 10 ಸಾವಿರ ರೂ.ಗಳ ವೈಯಕ್ತಿಕ ಪರಿಹಾರ ನೀಡಿ ಮಾತನಾಡಿದರು.

ಕೋರೊನಾ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರ, ಮೈಕೈನೋವು ಇತರೇ ಲಕ್ಷಣಗಳಿದ್ದರೆ ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ವೈದ್ಯರಿಂದ ಪರೀಕ್ಷೆ ಮಾಡಿಸಿ ಸೋಂಕಿನ ಬಗ್ಗೆ ಧೃಡಪಡಿಸಿಕೊಂಡು ಆರಂಭದಲ್ಲಿಯೇ ಚಿಕಿತ್ಸೆ ಪಡೆದುಕೊಂಡರೆ ಖಂಡಿತ ಗುಣವಾಗುತ್ತದೆ. ಈ ಮಾರ್ಗವನ್ನು ಅನುಸರಿಸುವುದನ್ನು ಬಿಟ್ಟು ಖಾಸಗಿ ಕ್ಲಿನಿಕ್ ಹಾಗೂ ತಾಲೂಕಿನ ವ್ಯಾಪ್ತಿಯಲ್ಲಿರುವ ಖಾಸಗಿ ಅಸ್ಪತ್ರೆಗಳಿಗೆ ದಾಖಲಾದರೆ ಕೋವಿಡ್ ಪರೀಕ್ಷೆ ಇಲ್ಲದೇ  ಅವರು ಇತರೇ  ಔಷಧಿಗಳನ್ನು ನೀಡಿ, ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಜೊತೆಗೆ ಮನೆ ಮಂದಿಗೆಲ್ಲ ಸೋಂಕು ಹರಡುವಂತೆ ಮಾಡುತ್ತಾರೆ ಎಂದು ಹೇಳಿದರು.

ಸೋಂಕು ದೃಢಪಟ್ಟರೆ, ಶ್ರೀಮಂತರು, ಬಡವರು ಎನ್ನದೇ ಎಲ್ಲರೂ ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದು  ಚಿಕಿತ್ಸೆ ಪಡೆದುಕೊಂಡರೆ  15 ದಿನಗಳಲ್ಲಿ ಗುಣಮುಖರಾಗಿ ಮನೆ ಸೇರಬಹುದು ಎಂದರು. ಈಗ ಕೋವಿಡ್ ಅಸ್ಪತ್ರೆಯಲ್ಲಿ ಮೃತಪಟ್ಟಿರುವ ಬಹಳಷ್ಟು ಮಂದಿ ಖಾಸಗಿ ಕ್ಲಿನಿಕ್ ಹಾಗೂ ಇತರೇ ಅಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು ಅಂತಿಮ ಹಂತದಲ್ಲಿ ಜಿಲ್ಲಾ ಆಸ್ಪತ್ರೆ ಬಂದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಟಾಸ್ಕ್‌ಪೋಸ್ ಸಭೆಯಲ್ಲಿ ಅಂಕಿ ಅಂಶಗಳ ಸಹಿತ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ತಡವಾಗಿ ಆಸ್ಪತ್ರೆ ಬರಲು ಕಾರಣವನ್ನು ಸಹ ಪತ್ತೆ ಮಾಡಿದ್ದಾರೆ. ಜೊತೆಗೆ ಸಭೆಯಲ್ಲಿ ಈ ವಿಚಾರವನ್ನು ಜನರಿಗೆ ಮನವರಿಕೆ ಮಾಡಿಕೊಡಲು  ಮನವಿಯನ್ನು ಸಹ ಮಾಡಿದ್ದಾರೆ ಎಂದು ಹೇಳಿದರು.

ಪ್ರತಿಯೊಬ್ಬರೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ನಗರ ಸರ್ಕಾರಿ ಕೋವಿಡ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಿ, ಇಲ್ಲವೇ ಮೈಸೂರಿನಲ್ಲಿ ಕೋವಿಡ್‌ಗಾಗಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಹೈಟೆಕ್ ಅಸ್ಪತ್ರೆಗಳಿಗೆ ದಾಖಲಾಗಿ ಎಂದು ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

By admin