ಮೈಸೂರು: ತುಳಿತಕ್ಕೊಳಪಟ್ಟ ಅಶಕ್ತ ಸಮಾಜಗಳಿಗೆ ದನಿಯಾದವರು ದೇವರಾಜ ಅರಸು ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು.
ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ರವರ ಪ್ರತಿಮೆ ನಿರ್ಮಾಣ ಸಮಿತಿ ಆಶ್ರಯದಲ್ಲಿ ಮೈಸೂರಿನ ಡಿ.ದೇವರಾಜ ಅರಸು ರಸ್ತೆಯಲ್ಲಿ ದೇವರಾಜ ಅರಸು ರವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಡಿ ದೇವರಾಜ ಅರಸು ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಹಿಂದುಳಿದ ವರ್ಗಗಳು, ದಲಿತರು,ಅಶಕ್ತ ಮತ್ತು ತುಳಿತಕ್ಕೊಳಪಟ್ಟ ಸಮಾಜಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರಮಿಸಿದರು. ಉಳುವವರಿಗೆ ಭೂಮಿ ಕಾನೂನು ಜಾರಿಗೆ ತಂದು ನೊಂದವರ ಪಾಲಿನ ದೇವರಾಗಿ ಉಳಿದರು. ದೇವರಾಜ ಅರಸು ರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾವನೂರು ವರದಿಯನ್ನು ಜಾರಿ ಮಾಡಿಸುವಲ್ಲಿ ಅವಿರತವಾಗಿ ಶ್ರಮಿಸಿದರು. ಬಹುಮುಖ್ಯವಾಗಿ ಪದವಿ, ಸ್ನಾತಕೋತ್ತರ ಪದವಿ ಅಧ್ಯಯನ ಮುಗಿಸಿ ಉದ್ಯೋಗವಿಲ್ಲದೆ ಪರದಾಡುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರತಿ ಮಾಹೆಯೂ ಪ್ರೋತ್ಸಾಹಧನ ನೀಡುವ ಮೂಲಕ ನಿರುದ್ಯೋಗಿ ಯುವಕರಿಗೂ ಆಸರೆಯಾಗಿದ್ದರು.
ಕಾಲಾಂತರದಲ್ಲಿ ಅವರಿಗೆ ಸರ್ಕಾರಿ ಉದ್ಯೋಗಗಳು ದೊರೆಯುವಂತಾಯಿತು.ಇನ್ನೂ ಜೀತ ಪದ್ದತಿಯಂತ ಕೊಳಕು ಸಂಸ್ಕೃತಿಯನ್ನು ಕಿತ್ತೊಗೆಯುವ ಕೆಲಸ ಮಾಡಿ ಎಲ್ಲರೂ ಸಮಾನರು ಎಂದು ಸಂದೇಶ ಸಾರಿದರು. ಜೊತೆಗೂಡಿ ವ್ಯವಸಾಯಕ್ಕಾಗಿ ಇನ್ನಿತರ ಬದುಕಿನ ಉದ್ದಾರಕ್ಕೋಸ್ಕರ ತೆಗೆದುಕೊಂಡಿದ್ದ ಬಡಜನರ ಸಾಲಗಳನ್ನು ಮನ್ನಾ ಮಾಡುವ ಮೂಲಕ ಋಣ ಮುಕ್ತರನ್ನಾಗಿ ಮಾಡಿ ನೆರವಾಗಿದ್ದರು. ಹೀಗೆ ಹತ್ತು ಹಲವಾರು ವಿಶೇಷ ಯೋಜನೆಗಳ ಮೂಲಕ ಹಿಂದುಳಿದ ವರ್ಗಗಳ ಉದ್ಧಾರಕ್ಕಾಗಿ ಹಾಗೂ ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿ ಜನಮಾನಸದಲ್ಲಿ ಸದಾ ಪ್ರಾತಃಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ತನ್ವೀರ್ ಸೇಠ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪ ಅಮರ್ ನಾಥ್, ಡೈರಿ ವೆಂಕಟೇಶ್, ಎಂ ಜಿ ಆರ್ ಅರಸ್, ಜಾಕೀರ್ ಹುಸೇನ್, ರೈಲ್ವೆ ಕುಮಾರ್ ಮತ್ತಿತರರು ಇದ್ದರು.