ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)

ಭಾರತದ ಸ್ವಾತಂತ್ರ್ಯದ ನಂತರದಲ್ಲಿ ಭದ್ರಬುನಾದಿಯನ್ನು ಹಾಕಿಕೊಟ್ಟದ್ದು ಸಂವಿಧಾನ.ಇದರ ಒಂದೊಂದು ಎಳೆ ಹಿಡಿದು ಭಾರತ ದೇಶ ವಿಶ್ವದಲ್ಲಿ ಸಾರ್ವಭೌಮ ರಾಷ್ಟ್ರ ಎಂದು ಹೆಗ್ಗಳಿಕೆ ಪಡೆಯಿತು.ಭಾರತೀಯ ಸಮಾಜದ ಪ್ರತಿಯೊಂದು ವ್ಯವಸ್ಥೆಯು ಹಲವು ಬಗೆಯಲ್ಲಿ ವ್ಯವಸ್ಥಿತ ಆಯಕಟ್ಟನ್ನು ಹೊಂದುತ್ತಲೇ ಬಂದಿತು.ಪ್ರಾದೇಶಿಕವಾಗಿ, ಭಾಷಿಕವಾಗಿ, ರಾಜ್ಯಗಳ ವಿಂಗಡನೆ, ಅಧಿಕಾರದ ಕೇಂದ್ರೀಕರಣ ಮತ್ತು ವಿಕೇಂದ್ರಿಕರಣ ರೂಪುಗೊಂಡಿತು.ಹಾಗೂ ಜೊತೆಯಲ್ಲೇ ವ್ಯವಹಾರಿಕ ಲೋಕವು ಕೂಡ ಜಾಗತೀಕರಣ ,ಖಾಸಗೀಕರಣ,ಉದಾರೀಕರಣಕ್ಕೆ ಒಳಗಾಗಿ ಬಹು ವಿಸ್ತಾರ, ಎತ್ತರ ಅಭಿವೃದ್ಧಿಯನ್ನೇ ಕಂಡಿತು.ದೇಶದ ಒಳಗಿನ ವ್ಯವಹಾರಕ್ಕೆ ಸೂಕ್ತವಾಗಿ ಹೊರಗಿನ ವ್ಯಾಪಾರ ಬಲಗೊಂಡಿತು.ವಿದೇಶಗಳ ನಡುವಿನ ಕೊಡುಕೊಳ್ಳುವಿಕೆಯಲ್ಲಿ ಸಮರ್ಥವನ್ನು ಸಾಧಿಸಿತು.ಸೈನಿಕ ವ್ಯವಸ್ಥೆಯಲ್ಲಿ ವಿಶ್ವದ ಇತರ ಪರಿಣಾಮಕಾರಿ ದೇಶಗಳನ್ನು ಎದುರಿಸಿ ನಿಲ್ಲುವಷ್ಟು ಪ್ರಬಲತೆಯನ್ನು ಸಾಧಿಸಿತು. ಸಾಂಪ್ರದಾಯಿಕಗಳು ಸ್ವಲ್ಪ ಸ್ವಲ್ಪವೇ ಮರೆಯಾಗುತ ವೈಜ್ಞಾನಿಕತೆಯ ಬೇರು ಬಿಟ್ಟು ಪ್ರಾಯೋಗಿಕ ವೈಚಾರಿಕ ಬದಲಾವಣೆಗಳು ಹೆಚ್ಚಾದವು.ವರ್ತಮಾನಕ್ಕೆ ತಕ್ಕಂತೆ ಸಂವಿಧಾನದ ತಿದ್ದುಪಡಿ ಅನ್ವಯ ರಾಜಕೀಯ ಸ್ಥಿತಿಗತಿಗಳು ಉಂಟಾದವು. ಈ ಮೊದಲಾದ ಬೆಳವಣಿಗಾ ಅಂಶಗಳ ಜೊತೆಗೆ ಈಗಿನ ಬೆಳವಣಿಗೆ ಮತ್ತು ಬದಲಾವಣೆ ಹೇಗಿದೆ ಎಂದರೆ ನಾವು ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿಯೇ ಇಲ್ಲ ಎಂಬಂತೆ ಕಾಣಿಸುತ್ತಿದೆ.ಒಂದು ದೃಷ್ಟಿಕೋನದಲ್ಲಿ ಇದು ಒಳ್ಳೆಯದೆ.ಇನ್ನೊಂದು ದೃಷ್ಟಿಯಲ್ಲಿ ಇತಿಹಾಸವನ್ನು ಮರೆಯಬಾರದು.

ನಮ್ಮಲ್ಲಿ ಈ ಐಕ್ಯತೆ ಅಂಶವು ತುಂಬಾ ಬದಲಾವಣೆ ಆಗಿದೆ.ಪ್ರತಿಯೊಬ್ಬರಲ್ಲೂ ರಾಷ್ಟ್ರೀಯತೆಯ ಪ್ರೇಮ ಅಲ್ಪ ಸ್ವಲ್ಪ ಜೀವವಾಡುತ್ತಿದೆಯಷ್ಟೇ.ಇಲ್ಲವೇ ಕುರಿಮಂದೆಯ ಹಾಗೆ ಬೆನ್ನಟ್ಟಿ ಯಾರೋ ಒಂದು ವಿಷಯದ ಬಗ್ಗೆ ಸೆಳೆದರೆ ಅತ್ತಕಡೆ ಹೋಗುತ್ತಿದ್ದೇವೆ.ಇನ್ಯಾರೋ ಮಧ್ಯದಲ್ಲಿ ಬಂದು ಇನ್ನೊಂದು ವಿಷಯ ತೆಗೆದರೆ ಇತ್ತಕಡೆ ನಮ್ಮೆಲ್ಲರ ಗಮನ ತಕ್ಷಣ ಹೋಗುತ್ತದೆ.ಇಲ್ಲಿ ಭಾರತೀಯ ಪ್ರಜೆಗಳು ವರ್ತಮಾನದಲ್ಲಿ ಮಹಾನ್ ಅಧೀನತೆಗೆ ಒಳಪಟ್ಟಿದ್ದಾರೆ ಅದು ತಿಳಿಯುತ್ತಿಲ್ಲವಷ್ಟೇ.ಎಲ್ಲರೂ ವಿದ್ಯಾವಂತರೇ ಮತ್ತು ವಿಶ್ವದ ಇತರ ದೇಶಗಳೊಂದಿಗೆ ಉತ್ತಮವಾಗಿ ಗುರುತಿಸಿಕೊಳ್ಳುತ್ತಿರುವವರೇ ಆದರೆ ಅದೇಕೋ ಇನ್ನೂ ನಮ್ಮಲ್ಲಿ ಮಂಧತೆ ಮತ್ತು ಅಧೀನಭಾವ ಇನ್ನೂ ಹೋಗಿಲ್ಲ.ಒಮ್ಮೆ ಹೊರಗಿನರ ಶೋಷಣೆಗೆ ಒಳಗಾದೆವು ಆದರೆ ಇಂದು ನಮ್ಮವರ ಶೋಷಣೆಗೆ ನಾವೇ ಎಲ್ಲವೂ ಗೊತ್ತಿದ್ದರು ಒಳಗಾಗುತ್ತಿದ್ದೇವೆ ಜೊತೆಗೆ ಶೋಷಣೆ ಮಾಡುತ್ತಿದ್ದೇವೆ.ಒಂದು ಪಾಶ್ಚಾತ್ಯ ಸಂಸ್ಕೃತಿಯ ಅತಿಯಾದ ಅನುಸರಣೆಯ ಹುಚ್ಚುತನ ಹಾಗೆಯೇ ಇನ್ನೊಂದು ನಮ್ಮ ಸಂಸ್ಕೃತಿಯ ಸಂಪೂರ್ಣ ಮರೆಯುವಿಕೆ ಈ ರೀತಿಯ ಅಧೀನತೆಗೆ ಒಂದು ಬಲಾಢ್ಯ ಕಾರಣ ಎನ್ನಬಹುದು.ಪೋರ್ಚಗೀಸರು ,ಡಚ್ಚರು,ಬ್ರಿಟೀಷರು,ಬರುವ ಮುನ್ನ ಭಾರತ ದೇಶ ರಾಜ ಸಂಸ್ಥಾನಗಳಲ್ಲಿ ಸಾಮಂತರ, ಪಾಳೆಗಾರಿಕೆಗಳ,ಆಡಳಿತದಲ್ಲಿ ಹಂಚಿಹೋಗಿತ್ತು‌.

 

ಹಾಗೂ ನಮ್ಮ ದೇಶೀಯ ಸಂಸ್ಥಾನಗಳಲ್ಲೇ ವೈಷಮ್ಯಗಳು ಮತ್ಸರಗಳು ಏರ್ಪಟ್ಟು ಘೋರ ಯುದ್ಧಗಳೇ ಜರಗುತಿತ್ತು.ನೋಡಿ ಇದೇ ನಮ್ಮ ಭಾರತದ ಪೂರ್ವ ಮೂಲತ್ವ ಸ್ವರೂಪ.ಆನಂತರ ಬ್ರಿಟೀಷರ ಆಗಮನ, ನಮ್ಮ ದೇಶಿಯತೆಯಲ್ಲಿದ್ದ ಈ ದಾಯಾದಿ ಮತ್ಸರವನ್ನು ಅರಿತ ಬ್ರಿಟೀಷರು ಲಾಭ ಪಡೆದರು. ಸುಮಾರು ಆರುನೂರು ವರ್ಷಗಳ ಕಾಲ ಆಳಿದರು.ನಮ್ಮ ಭಾರತವನ್ನು ಪೂರ್ಣವಾಗಿ ಕಬಳಿಸಲು ಮತ್ತು ನಮ್ಮನ್ನು ಅವರ ಅಧೀನತೆಗೆ ತೆಗೆದುಕೊಳ್ಳಲು ಆರಂಭಿಸಿದಾಗ ನಮ್ಮವರಿಗೆ ಸ್ವಾತಂತ್ರ್ಯದ ಅರಿವು ಬಂದಿತು.18  ಮತ್ತು 19 ನೇ ಶತಮಾನದಲ್ಲಿ ಇದರ ಕಾವು ಆರಂಭವನ್ನು ಪಡೆಯಿತು. ತದನಂತರ ನಮ್ಮಲ್ಲಿ ದೇಶೀಯ ಸಂಸ್ಥಾನಗಳ ಶಕ್ತಿಕುಂದಿದಂತೆ ಸಾಮಾನ್ಯರೇ ಸ್ವಾತಂತ್ರ್ಯಕ್ಕೆ ಚಿಂತಿತರಾದರು.ನಮ್ಮ ಸ್ವಾತಂತ್ರ್ಯವು ನಮ್ಮ ಕೈಯಲ್ಲೇ ಎಂದು ತಿಳಿದು ‌ಎಲ್ಲರೂ ಒಗ್ಗಟ್ಟಾದರು.ಬ್ರಿಟೀಷರ ವಿರುದ್ಧ ಬಂಡಾಯ ಹೂಡಿದರು.ಆದರೂ ನಮ್ಮಲ್ಲೇ ಹಲವು ವಿಷ ಬೀಜಗಳು ಇದ್ದುದರ ಪರಿಣಾಮವಾಗಿ ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಒದಗಿಬಂತು.ಹಾಗಾಗಿಯೂ ದಿಟ್ಟವೀರರ ನಿರಂತರ ದೇಶಪ್ರೇಮದಿಂದಾಗಿ ಸ್ವಾತಂತ್ರ್ಯವೆನ್ನುವುದು ನಮಗೆ ದಕ್ಕಿತು.ಎಂಥ ವಿಪರ್ಯಾಸ ನೋಡಿ ,

 

ಹೊರಗಿನವರು ಬರಬೇಕಾಯಿತು ನಮ್ಮಲ್ಲಿನ ಒಗಟ್ಟನ್ನು, ಐಕ್ಯತೆಯನ್ನು ಬಡಿದೆಬ್ಬಿಸಲು.ಅಲ್ಲಿಯವರೆಗೂ ನಮ್ಮ ನಮ್ಮಲ್ಲಿಯೇ ಒಡಕುಗಳಿದ್ದವು.ಅದೇ ರೀತಿ ಈಗ ಸ್ವಾತಂತ್ರ್ಯದ ನಂತರವೂ ಸಹ ಅದೇ ನಮ್ಮ ಪೂರ್ವದ ಮೂಲತ್ವ ಸ್ವರೂಪ ಮತ್ತೆ ಗೋಚರಿಸುತ್ತಿದೆ. ನಮ್ಮ ನಮ್ಮವರಲ್ಲೇ ಬಿರುಕುಗಳು ಮೂಡಿವೆ.ನಮ್ಮವರಲ್ಲೇ ಯುದ್ಧ ಹೂಡಲು ನಿಧಾನಗತಿಯಲ್ಲಿ ನಾವುಗಳೇ ಸಿದ್ಧರಾಗುತ್ತಿದ್ದೇವೆ.ಸಂವಿಧಾನವೆಂಬ ಮಹಾ ತಡೆಗೋಡೆ ಇಲ್ಲದಿದ್ದರೆ.ಇಂದು ನಮ್ಮಲ್ಲಿಯೂ ನಿರಂಕುಶ ಪ್ರಭುತ್ವ ರಾರಾಜಿಸುತಿತ್ತು.ನೋಡಿ ಈ ಕರೋನಾ ವೈರಸ್ ಮೊದಲು ಬಂದಾಗ ಭಯಭೀತರಾದೆವು ಸಮಸ್ಯೆಗೆ ಎಲ್ಲರೂ ಸೇರಿ ಪರಿಹಾರಕ್ಕೆ ಮಣಿದೆವು.ನಂತರ ಮತ್ತೆ ಯಥಾಸ್ಥಿತಿಯಾಗಿ ಜೀವನ ಶೈಲಿಗೆ ತೊಡಗಿದೆವು.ನಂತರ ಅದು ಎರಡನೆ ಅಲೆ ರೂಪಾಂತರ ಪಡೆದು ಮೊದಲು ಬಂದಾಗ ಆಗಿದ ಅನಾಹುತಕ್ಕಿಂತ ಎರಡನೆ ಬಾರಿಯೇ ಮಹಾ ಅನಾಹುತ ತಂದು ಅಪಾರ ಸಾವು ನೋವುಗಳು ಸಂಭವಿಸಿತು.ಮುಂದೆ ಮೂರನೆ ಅಲೆ ನಾಲ್ಕನೇ ಅಲೆಯ ಮುನ್ಸೂಚನೆ ಬೇರೆ ಇದೆ‌ ಎಂದು ಅಧ್ಯಯನಕಾರರು ಎಚ್ಚರಿಸಿದ್ದಾರೆ.ಇದೇ ರೀತಿ ನಮ್ಮ ಸ್ವಾತಂತ್ರ್ಯದ ವಿಚಾರದಲ್ಲೂ ಆಗುತ್ತಿದೆ.ಬ್ರಿಟೀಷರು ಬಂದಿದ್ದು ನಾವು ಗುಲಾಮರಾಗಿದ್ದು ಮೊದಲನೆ ಅಲೆ ಎಂದು ಭಾವಿಸಿ.ಆನಂತರ ಒಗ್ಗೂಡಿದ್ದು ಪರಿಹಾರ ಎಂದು ಭಾವಿಸಿ.ನಂತರ ನಾವೆಲ್ಲರೂ ಅದನ್ನು ಮರೆತು ಮೊದಲಿನಂತೆಯೇ ನಮ್ಮಲ್ಲಿಯೇ ಐಕ್ಯತೆಯ ಒಡಕುಗಳನ್ನು ತಂದುಕೊಳ್ಳುತ್ತಿದ್ದೇವೆ.ಇದರ ಪರಿಣಾಮ ಎರಡನೇ ಅಲೆ ಎಂಬುವುದೇ ನಿಜ.ದಿವಾಳಿತನದಿಂದಾಗಿ ಬೇರೆಯವರ ಆಕ್ರಮಣ ನಮ್ಮ ಮೇಲೆ ಆದರೆ ಮೊದಲು ಸ್ವಾತಂತ್ರ್ಯ ಪಡೆಯುವಾಗ ಆದ ಅಪಾರ ನಷ್ಟಕ್ಕಿಂತ ಈ ಬಾರಿ ಹೆಚ್ಚಿಗೆಯೇ ಆಗಬಹುದು.ಇದೇ ರೀತಿ ನಮ್ಮ ನಮ್ಮಲ್ಲಿಯೇ ಭಿನ್ನಾಭಿಪ್ರಾಯಗಳನ್ನು ತಂದುಕೊಳ್ಳುತ್ತಿದ್ದರೆ‌.ಮುಂದೆಯೂ ಸಹ ನಮ್ಮ ಮೇಲೆ ದಬ್ಬಾಳಿಕೆಗಳು ಹೆಚ್ಚಾಗುತ್ತದೆ ಮತ್ತೆ ಮತ್ತೆ ಕರೋನಾ ಅಲೆಯ ರೀತಿಯಂತೆ ಬರುತ್ತಲೇ ಇರುತ್ತದೆ.

 

ಇಲ್ಲಿ ಐಕ್ಯತೆ ಮಾತ್ರ ನಮ್ಮಲ್ಲಿ ಬಿರುಕು ಕಂಡಿಲ್ಲ‌.ಎಲ್ಲಾ ರೀತಿಯೂ ಎಲ್ಲಾ ವ್ಯವಸ್ಥೆಗಳಲ್ಲೂ ಬಿರುಕು ಮೂಡಿದೆ.ನಮ್ಮಲ್ಲಿ ಸ್ವಾತಂತ್ರ್ಯದ ಸಮಯದಲ್ಲಿ ಇದ್ದ ದೇಶದ ಪರವಾದ,  ಜನತೆಯ ಪರವಾದ ನಿಲುವುಗಳು ವ್ಯಕ್ತಿತ್ವ ದುಡಿಮೆಗಳು ಇಂದಿಲ್ಲ‌.ಕೇವಲ ಆಸ್ತಿ ಅಂತಸ್ತು ಅಧಿಕಾರ ಇಂದ್ರಿಯಾನು ಮೋಹಗಳೇ ಅಧಿಕವಾಗಿದೆ‌.ಶಿಕ್ಷಣ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ರಾಜಕೀಯ, ಸಾಮಾಜಿಕ, ಹೀಗೆ ಎಲ್ಲವೂ ನಿಧಾನಗತಿಯಲ್ಲಿ ಬಿರುಕು ಮೂಡುತ್ತಿವೆ.ಶಿಕ್ಷಣ ಮತ್ತು ವೈದ್ಯ ಕ್ಷೇತ್ರ ಹಣದ ಭೂಮಿಯಾಗಿದೆ.ಮನುಷ್ಯತ್ವ ರೂಢಿಸುವ ಕ್ಷೇತ್ರವು ದೇಶದ ಉಚಿತವಾಗಿರಬೇಕು.ಹಾಗೂ ಈ ಕ್ಷೇತ್ರಗಳಲ್ಲಿ ದುಡಿಮೆ ಪ್ರಾಮಾಣಿಕವಾಗಿರಬೇಕು ಆದರೆ ಈ ಕ್ಷೇತ್ರಗಳನ್ನೇ ತಮ್ಮ ಸ್ವಾರ್ಥಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ.ರಾಜಕೀಯದಲ್ಲಿ ಜಾತಿ ರಾಜಕರಣ ಮಾಹಾನ್ ಒಡಕಿಗೆ ಕಾರಣವಾಗಿದೆ‌.ರಾಜಕೀಯದಲ್ಲಿ ಧಾರ್ಮಿಕ ಮುಖಂಡರ ಅಥವಾ ಗುರುಗಳ ಆಶೀರ್ವಾದವಿರಬೇಕೇ ವಿನಃ ಅಧಿಕಾರ ಇರಬಾರದು.ಇಂದು ಎಲ್ಲವೂ ವಿರುದ್ಧವೇ ನಡೆಯುತ್ತಿದೆ.ಪರೋಕ್ಷವಾಗಿ ರಾಜಕೀಯ ನಡೆಸುವವರು ಕೂಡ ಹೆಚ್ಚಾಗಿದ್ದು ಇದು ಸಂವಿಧಾನದ ಕಣ್ಣಿಗೆ ಮಣ್ಣೆರೆಚಿ ಮೋಸ ಮಾಡುತ್ತಿರುವ ದ್ರೋಹವಾಗಿದೆ.ಈ ದ್ರೋಹದ ಫಲ ನಮ್ಮ ಜನತೆಯ ಹತಾಷೆಯೇ ನಿಜ.ನ್ಯಾಯ ಕೇಳಲು ಹೋದವರೇ ಅನ್ಯಾಯಕ್ಕೆ ಗುರಿಯಾಗುತ್ತಿದ್ದಾರೆ.ಭ್ರಷ್ಟಚಾರದ ಚೂರಿಗೆ ರಕ್ತ ಸುರಿಸುತ್ತಿದ್ದಾರೆ.ಶಾಲೆಗಳಲ್ಲಿ ಕಲಿಸುವ ಪಾಠ ಕೇವಲ ಜೀವನವನ್ನು ಸಾಗಿಸಲು ಉದ್ಯೋಗ ಹೊಂದಲು ಹೇಳಿಕೊಡುವಂತಿದೆ.

 

ಏಕೆಂದರೆ ಅಲ್ಲಿ ಕಲಿಯುವ ಬಹಳಷ್ಟು ವಿಷಯಗಳು ಸಮಾಜದಲ್ಲಿ ಕಂಡುಬರುತ್ತಿಲ್ಲ.ವಿರುದ್ಧ ಮತ್ತು ಬೇಡದ ನಡವಳಿಕೆಗಳೇ ದೇಶದ ಜನತೆಯಲ್ಲಿ ಹೆಚ್ಚಾಗಿದೆ.ಅಭಿವೃದ್ಧಿ ಪೈಪೋಟಿ ಎಂದು ಮುಗಿಬೀಳುವುದಾಗಿದೆ.ಒಮ್ಮೆ ಆದರೂ ಯೋಚಿಸುತ್ತಿದ್ದೇವೆಯೇ !ನಾವು ಪೈಪೋಟಿ ನಡೆಸುತ್ತಿರುವುದು ಯಾವ ಕ್ಷೇತ್ರದಲ್ಲಿ? ಯಾರ ಜೊತೆಯಲ್ಲಿ ?ನಮಗೆ ಅಗತ್ಯವಿದೆಯೇ? ಸುಮ್ಮನೆ ಯಾವುದೋ ಗೋಜಲಿಡಿದು ಹುಚ್ಚರಂತೆ ಒಳ್ಳೆಯದಲ್ಲದ ಸಂಗತಿಗಳಲ್ಲಿ ಮೊದಲು ಸಾಧಿಸಲು ಹೋಗುತ್ತಿರುವುದು ವಿಪರ್ಯಾಸವೇ ಸರಿ.ಈ ರೀತಿಯದ್ದು ಈಗ ಭಾರತದಲ್ಲಿ ಹೆಚ್ಚಿದೆ.ದಯವಿಟ್ಟು ನಾವೆಲ್ಲರೂ ನಮ್ಮ ರಾಷ್ಟ್ರ ಪ್ರೇಮ ಒಂದನ್ನೇ ಗಮನವಿರಿಸಿ ರಾಷ್ಟ್ರಪ್ರೇಮವೇ ಧರ್ಮವಾಗಲಿ.ಈ ರಾಷ್ಟ್ರಧರ್ಮದ ನೆರಳಿನಲ್ಲಿ ಎಲ್ಲರೂ ಜೀವಿಸೋಣ.ಭಾರತವು ಸ್ವಾತಂತ್ರ್ಯ ಹೊಂದಿದಾಗ ಇದ್ದಂತಹ ನಾಯಕರ ಗುಣಶೀಲತೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ.ನಮಗೆ ಮಾತ್ರವಲ್ಲದೇ ಎಲ್ಲರಿಗಾಗಿ ಬದುಕೋಣ.ಈ ಮಾತುಗಳು ಕೇವಲ ಮಾತುಗಳಾಗಿಯೇ ಅಕ್ಷರಗಳಲ್ಲಿ ಉಳಿಯದಿರಲಿ.

 

ನಮ್ಮ ರಾಷ್ಟ್ರಧರ್ಮ ವಿಶ್ವಕ್ಕೆ ಮಾದರಿಯಾಗಬೇಕು.ಆ ನಿಟ್ಟಿನಲ್ಲಿ ಎಲ್ಲರೂ ಕೆಲವು ಬದಲಾವಣೆಗಳಿಗೆ ಅಗತ್ಯವಾಗಿ ತೆರೆದ ಮನಸ್ಸಿನವರಾಗಬೇಕಾಗಿದೆ.ಒಂದು ಕಡೆ ನಾವೆಲ್ಲರೂ ಬಲಾಢ್ಯರೇ ಆದರೆ ಇದರ ನಡುವೆ ನಮ್ಮ ಪೂರ್ವದಲ್ಲಿ ಆದ ತಪ್ಪುಗಳು ಪುನಃ ಪುನರಾವರ್ತನೆ ಆಗುತ್ತಿರುವುದು ಕೂಡ ಅಷ್ಟೇ ಸತ್ಯದ ಅಪಾಯದ ಬೆಳವಣಿಗೆ.

By admin