ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್ -19 ರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಆರೋಗ್ಯ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮೇ 25 ರಿಂದ 29 ರವರೆಗೆ ನಾಲ್ಕು ದಿನಗಳ ಕಾಲ ಸಂಪೂರ್ಣ ಬಂದ್ ಗೆ ಜಿಲ್ಲಾಧಿಕಾರಿ ಅಶ್ವಥಿ ಅವರು ಆದೇಶ ನೀಡಿದ್ದಾರೆ.
ಈ ದಿನಗಳಂದು ವೈದ್ಯಕೀಯ ಸೇವೆ ಮತ್ತು ಮೆಡಿಕಲ್ ಶಾಪ್ ಗಳು, ಹಾಲಿನ ಬೂತು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ, ಸರ್ಕಾರ ಅನುಮತಿಸಿರುವ ಕೃಷಿ ಚಟುವಟಿಕೆಗಳಿಗೆ ಸಂಬಂಧಪಟ್ಟ ಅಂಗಡಿ,ರಸಗೊಬ್ಬರ, ಬಿತ್ತನೆ ಬೀಜ, ಪಶು ಆಹಾರ, ಕೀಟನಾಶಕ, ಕೃಷಿ ಸಲಕರಣೆ, ಕೃಷಿಗೆ ಸಂಬಂಧಪಟ್ಟ ಗೋಡೌ ನ್ ಗೆ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ರ ವರೆಗೆ, ನ್ಯಾಯಬೆಲೆ ಅಂಗಡಿಗಳು, ಸರ್ಕಾರ ಅನುಮತಿಸಿರುವ ಕೈಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳು ಸರ್ಕಾರ ನೀಡಿರುವ ಆದೇಶದಂತೆ ಕೆಲಸ ನಿರ್ವಹಿಸುವಂತೆ ಷರತ್ತುಬದ್ಧ ಅನುಮತಿ ನೀಡಿದೆ. ಹಾಲಿನ ಬೂತು, ನ್ಯಾಯಬೆಲೆ ಅಂಗಡಿ, ಮೆಡಿಕಲ್ ಶಾಪ್, ಕೃಷಿ ಸಂಬಂಧಿತ ಅಂಗಡಿಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು, ಮೀನು-ಮಾಂಸದಂಗಡಿ, ಸಂತೆ ಮಾರುಕಟ್ಟೆಗಳನ್ನು ನಿಷೇಧಿಸಲಾಗಿದೆ.
ಶಾಲೆ ಮತ್ತು ಕಾಲೇಜುಗಳು,ಶೈಕ್ಷಣಿಕ ತರಬೇತಿ ಸಂಸ್ಥೆಗಳು ಇತ್ಯಾದಿಗಳ ಕಾರ್ಯಚಟುವಟಿಕೆಗಳು ಇರುವುದಿಲ್ಲ, ಕೋವಿಡ್ ಕರ್ತವ್ಯ ನಿರತ ಸಿಬ್ಬಂದಿ, ಪೊಲೀಸ್, ಆರೋಗ್ಯ, ಕಂದಾಯ ಇತರೆ ಇಲಾಖೆಯ ಕೋವಿಡ್ ಸಂಬಂಧ ನಿಯೋಜಿತ ಅಧಿಕಾರಿ,ಸಿಬ್ಬಂದಿಗಳನ್ನು ಹೊರತುಪಡಿಸಿ ಇತರೆ ಯಾವುದೇ ವ್ಯಕ್ತಿ ವಾಹನ ಸಂಚಾರವನ್ನು ನಿರ್ಬಂಧಿಸಿದೆ. ಎಲ್ಲಾ ಸಿನಿಮಾ ಹಾಲ್ ಗಳು,ಶಾಪಿಂಗ್ ಮಾಲ್ಗಳು ,ಜಿಮ್ನಾಷಿಯಂಗಳು,ಯೋಗ ಕೇಂದ್ರಗಳು,ಸ್ಪಾಸ್ ಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂಗಳು, ಈಜುಕೊಳಗಳು, ಮನರಂಜನೆ,ಮನರಂಜನಾ ಉದ್ಯಾನವನಗಳು,ಕ್ಲಬ್ ಗಳು, ಚಿತ್ರಮಂದಿರಗಳು, ಬಾರ್ ಗಳು ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್ಗಳು, ಮತ್ತು ಅಂತಹುದೇ ಸ್ಥಳಗಳ ಚಟುವಟಿಕೆಗಳನ್ನು ನಿಷೇಧಿಸಿದೆ.
ಜಿಲ್ಲೆಯಲ್ಲಿ ಎಲ್ಲಾ ತರಹದ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತು ಗುಂಪು ಸೇರಿ ಮಾಡುವಂತಹ ಸಭೆ ಸಮಾರಂಭ ಇನ್ನಿತರೆ ಧಾರ್ಮಿಕ ಚಟುವಟಿಕೆಗಳನ್ನು ನಿರ್ಬಂಧಿಸಿದೆ.
ಜಿಲ್ಲೆಯ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಧಿಸಿದೆ, ಧಾರ್ಮಿಕ ಸ್ಥಳಗಳಲ್ಲಿ ದೈನಂದಿನ ಪೂಜಾ ಕೈಂಕರ್ಯಗಳನ್ನು ಮಾಡಲು ಅವಕಾಶ ಕಲ್ಪಿಸಿದೆ. ಹೋಟೆಲ್ ಮತ್ತು ಉಪಹಾರ ದರ್ಶಿನಿಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಲಾಗಿದೆ. ತುರ್ತು ಸಂದರ್ಭ ಗಳಲ್ಲಿ ವೈದ್ಯಕೀಯ ಸೇವೆ ಪಡೆಯಲು ಓಡಾಡುವ ವ್ಯಕ್ತಿಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ವ್ಯಕ್ತಿಯ ಓಡಾಟವನ್ನು ನಿರ್ಬಂಧಿಸಿದೆ. ಈಗಾಗಲೇ ಅನುಮತಿ ಪಡೆಯಲಾದ ಮದುವೆಗಳಿಗೆ ಕೇವಲ 30 ಜನರ ಭಾಗವಹಿಸುವಿಕೆಗೆ ಅವಕಾಶ ನೀಡಿದೆ.
ಮೇ 24 ರಿಂದ 29, ಅವಧಿಗೆ ಯಾವುದೇ ಮದುವೆ ಅಥವಾ ಇತರೆ ಜನ ಗುಂಪು ಸೇರುವ ಕಾರ್ಯಕ್ರಮಗಳಿಗೆ ಅನುಮತಿ ನಿಷೇಧಿಸಿದೆ. ಮೇ 27 ಗುರುವಾರದಂದು ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆವರೆಗೆ ಸರ್ಕಾರ ಅನುಮತಿಸಿರುವ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಿದೆ. ಸರಕು ಸಾಗಾಣಿಕ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.