
ಚಾಮರಾಜನಗರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಮಾರ್ಚ್ ೧೨ರಂದು ನಡೆದ ಲೋಕ್ ಅದಾಲತ್‌ನಲ್ಲಿ ೪೯೧೨ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ನ್ಯಾಯಾಧೀಶರು ಈ ವಿಷಯ ತಿಳಿಸಿದರು.
ಸರ್ವರಿಗೂ ನ್ಯಾಯ ಒದಗಿಸುವ ಪರಿಕಲ್ಪನೆಯಡಿಯಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಶೀಘ್ರವಾಗಿ ಹಾಗೂ ಖರ್ಚುರಹಿತವಾಗಿ ಪ್ರಕರಣವನ್ನು ಇತ್ಯರ್ಥಪಡಿಸುವ ಸಲುವಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಲೋಕ್ ಅದಾಲತ್‌ನಲ್ಲಿ ಸಿವಿಲ್, ರಾಜಿಯಾಗಬಹುದಾದ ಕ್ರಿಮಿನಲ್ ಹಾಗೂ ಇನ್ನಿತರೆ ಪ್ರಕರಣಗಳಲ್ಲಿ ರಾಜೀ ಸಂಧಾನದ ಮೂಲಕ ೪೬೫೪ ಹಾಗೂ ೨೫೮ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು ೪೯೧೨ ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ ಎಂದರು.
ಜಿಲ್ಲೆಯ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದ ಒಟ್ಟು ೨೨೭೦೧ ಪ್ರಕರಣಗಳ ಪೈಕಿ ರಾಜಿಯಾಗಬಹುದಾದ ೫೦೦೦ ಪ್ರಕರಣಗಳ ಇತ್ಯರ್ಥಕ್ಕೆ ಗುರಿ ಹೊಂದಲಾಗಿತ್ತು. ಚಾಮರಾಜನಗರ ತಾಲೂಕು ನ್ಯಾಯಾಲಯದಲ್ಲಿ ೧೯೬೭, ಕೊಳ್ಳೇಗಾಲ ೧೬೨೭, ಗುಂಡ್ಲುಪೇಟೆ ೯೮೭ ಹಾಗೂ ಯಳಂದೂರು ನ್ಯಾಯಾಲಯದಲ್ಲಿ ೩೩೧ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ವಿಲೇವಾರಿಯಾದ ೪೯೧೨ ಪ್ರಕರಣಗಳಿಂದ ರಾಜಿಯಾದ ಮೊತ್ತ ೬,೯೫,೪೦,೯೪೮ ರೂ. ಗಳನ್ನು ಪರಿಹಾರ ಹಾಗೂ ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಈ ಬಾರಿಯ ಲೋಕ್ ಅದಾಲತ್ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಿರುವುದಲ್ಲದೇ ನ್ಯಾಯಾಲಯಗಳ ಒತ್ತಡ ತಗ್ಗಿದೆ ಎಂದ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರು ಲೋಕ್ ಅದಾಲತ್ ಯಶಸ್ಸಿಗೆ ಸಹಕಾರ ನೀಡಿದ ಜಿಲ್ಲಾಡಳಿತ, ಪೊಲೀಸ್, ವಿವಿಧ ಇಲಾಖೆಗಳು, ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರು, ವಕೀಲರು, ವಿಮಾ ಕಂಪನಿಗಳು, ಬ್ಯಾಂಕ್ ಪ್ರತಿನಿಧಿಗಳಿಗೆ ಜಿಲ್ಲಾ ನ್ಯಾಯಾಧೀಶರು ಅಭಿನಂದನೆಗಳನ್ನು ಸಲ್ಲಿಸಿದರು.
ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರದ ಸಂದರ್ಭದಲ್ಲಿ ಕೆಲಸದಿಂದ ವಜಾಗೊಂಡಿದ್ದ ಸಾರಿಗೆ ಇಲಾಖೆಯ ೧೫ ಮಂದಿ ಚಾಲಕರು ಹಾಗೂ ನಿರ್ವಾಹಕರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಸದರಿ ಪ್ರಕರಣ ಲೋಕ್ ಅದಾಲತ್‌ನಲ್ಲಿ ಇತ್ಯರ್ಥಗೊಂಡು ಮರುನೇಮಕಗೊಂಡಿರುವುದು ಹಾಗೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳು ದಾಂಪತ್ಯದಲ್ಲಿ ಮುಂದುವರೆಯಲು ರಾಜೀಯಾಗಿರುವುದು ಈ ಬಾರಿಯ ಲೋಕ್ ಅದಾಲತ್‌ನ ವಿಶೇಷವಾಗಿದೆ ಎಂದು ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಇದೇ ವೇಳೆ ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎಂ. ಶ್ರೀಧರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಕಾರ್ಯದರ್ಶಿ ವಿರೂಪಾಕ್ಷ ಅವರು ಸುದ್ದಿಗೋಷ್ಠಿಯಲ್ಲಿ ಇದ್ದರು.
