ಚಾಮರಾಜನಗರ: ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮೆಗಾ ಲೋಕ್ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ ೩೫೨೨ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ೨೩೯ ಪ್ರಕರಣ ಸೇರಿದಂತೆ ಒಟ್ಟು ೩೭೬೧ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಸದಾಶಿವ ಎಸ್. ಸುಲ್ತಾನ್‌ಪುರಿ ಅವರು ತಿಳಿಸಿದರು.

ಜಿಲ್ಲಾ ನ್ಯಾಯಾಲಯದ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

 ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸರ್ವರಿಗೂ ನ್ಯಾಯ ಪರಿಕಲ್ಪನೆಯಡಿ ಜನಸಾಮಾನ್ಯರ ಅನುಕೂಲಕ್ಕಾಗಿ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಜಿಲ್ಲಾ ನ್ಯಾಯಾಲಯ ಹಾಗು ಎಲ್ಲಾ ತಾಲೂಕುಗಳ ನ್ಯಾಯಾಲಯಗಳಲ್ಲಿ ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ೨೦೨೧ರ ಸಾಲಿನಲ್ಲಿ ೪ನೇ ಬಾರಿ ಏರ್ಪಡಿಸಿದ ಲೋಕ್ ಆದಾಲತ್ ಇದಾಗಿದೆ. ಅಲ್ಲದೇ ಈ ಅದಾಲತ್‌ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ಸಂಖ್ಯೆ ದಾಖಲೆಯಾಗಿದೆ ಎಂದರು.

 ಲೋಕ್ ಅದಾಲತ್‌ನಲ್ಲಿ ಎಲ್ಲಾ ಬಗೆಯ ಸಿವಿಲ್ ಹಾಗೂ ರಾಜಿಯಾಗಬಹುದಾದ ಕ್ರಿಮಿನಲ್ ಮತ್ತು ಇನ್ನಿತರೆ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ವಿಲೇವಾರಿಯಾಗಿರುವ ೩೭೬೧ ಪ್ರಕರಣಗಳಿಂದ ಒಟ್ಟು ೫ ಕೋಟಿ ೪೧ ಲಕ್ಷ ೨೪ ಸಾವಿರದ ೫೧೯ ರೂ. ಸಂಗ್ರಹವಾಗಿದ್ದು, ಈ ಮೊತ್ತವನ್ನು ಭೂಸ್ವಾಧೀನ ಹಾಗೂ ಅಪಘಾತ ಪ್ರಕರಣಗಳ ವಿಮಾ ಪರಿಹಾರ ನೀಡಲು ಬಳಸಲಾಗುತ್ತದೆ. ಇತ್ಯರ್ಥವಾದ ಪ್ರಕರಣಗಳಿಂದ ನ್ಯಾಯಾಲಯದ ಹೊರೆ ತಗ್ಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.

 ಲೋಕ್ ಅದಾಲತ್‌ನಿಂದ ಜನಸಾಮಾನ್ಯರ ಸಮಯ, ಶ್ರಮ, ಹಣ ಉಳಿತಾಯವಾಗಿದೆ. ಪ್ರಕರಣಗಳನ್ನು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಇತ್ಯರ್ಥಪಡಿಸಲಾಗಿದೆ. ಮೊದಲನೇ ಲೋಕ್ ಅದಾಲತ್‌ನಲ್ಲಿ ೩೨೭೧, ೨ನೇ ಅದಾಲತ್‌ನಲ್ಲಿ ೩೬೫೯, ೩ನೇ ಅದಾಲತ್‌ನಲ್ಲಿ ೨೨೮೯ ಹಾಗೂ ಪ್ರಸ್ತುತ ಆಯೋಜಿಸಲಾಗಿದ್ದ ೪ನೇ ಅದಾಲತ್ ನಲ್ಲಿ ೩೭೬೧ ರಾಜಿಯಾಗಬಹುದಾದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.

 ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳು, ನ್ಯಾಯಾಲಯದ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು, ವಿಮಾ ಕಂಪನಿಗಳು, ಇತರರು ಲೋಕ್ ಅದಾಲತ್ ಯಶಸ್ವಿಗೆ ಕಾರಣರಾಗಿದ್ದು, ಅದಾಲತ್ ಸೂಸೂತ್ರವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಸದಾಶಿವ ಎಸ್. ಸುಲ್ತಾನ್‌ಪುರಿ ಅವರು ತಿಳಿಸಿದರು.

 ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ್ ಅವರು ಮಾತನಾಡಿ ಮೆಗಾ ಲೋಕದ ಅದಾಲತ್ ನಡೆಸುವ ಕುರಿತು ಜಿಲ್ಲೆಯಾದ್ಯಂತ ಸ್ಥಳೀಯವಾಗಿ ಎಲ್ಲರಿಗೂ ಅರಿವು ಮೂಡಿಸಲಾಗಿತ್ತು. ಇದರ ಪರಿಣಾಮದಿಂದ ಲೋಕ್ ಅದಾಲತ್ ಯಶಸ್ವಿಯಾಗಿದೆ. ರಾಜಿಯಾಗಬಹುದಾದ ಅಪಘಾತ ಪ್ರಕರಣಗಳ ಇತ್ಯರ್ಥಕ್ಕಾಗಿ ಸಂಬಂಧಪಟ್ಟ ವಿಮಾ ಕಂಪನಿಗಳನ್ನು ಸತತವಾಗಿ ಸಂಪರ್ಕಿಸಲಾಗಿತ್ತು. ಅಲ್ಲದೆ ಈ ಅದಾಲತ್‌ನಿಂದ ರೈತರಿಗೂ ಸಹ ಸಾಕಷ್ಟು ಅನುಕೂಲವಾಗಿದೆ ಎಂದರು.