ಗುಂಡ್ಲುಪೇಟೆ: ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯ ಇಂದು(ಡಿ.30) ನಡೆಯಲಿದ್ದು, ತಾಲ್ಲೂಕು ಆಡಳಿತದ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಕಾಲೇಜು, ಜೆಎಸ್‍ಎಸ್ ಕಾಲೇಜು, ಸೆಂಟ್ ಜಾನ್ಸ್ ಶಾಲೆ ಸೇರಿದಂತೆ ಮೂರು ಕಡೆಗಳಲ್ಲಿ 34 ಗ್ರಾಮ ಪಂಚಾಯಿತಿಯ 486 ಅಭ್ಯರ್ಥಿಗಳ ಭವಿಷ್ಯ ಬುಧವಾರ ನಿರ್ಧಾರವಾಗಲಿದೆ.
3 ಕೇಂದ್ರದಲ್ಲಿ ಎಣಿಕೆ ಕಾರ್ಯ: ಜೆಎಸ್‍ಎಸ್ ಕಾಲೇಜಿನಲ್ಲಿ 11 ಗ್ರಾಮ ಪಂಚಾಯಿತಿಗೆ ಮತ ಎಣಿಕೆ ನಡೆಯಲಿದ್ದು, ಇದಕ್ಕೆ ಒಂದು ದೊಡ್ಡ ಹಾಲ್, ಎರಡು ಕೊಠಡಿಯಲ್ಲಿ 25 ಟೇಬಲ್ ಅಳವಡಿಸಲಾಗಿದೆ. ದೊಡ್ಡಹುಂಡಿ ಭೋಗಪ್ಪ ಕಾಲೇಜಿನಲ್ಲಿ 13 ಗ್ರಾಮ ಪಂಚಾಯಿತಿಗಳಿಗೆ ಎಣಿಗೆ ನಡೆಯಲಿದ್ದು, 4 ಕೊಠಡಿಯಲ್ಲಿ 22 ಟೇಬಲ್ ಹಾಕಲಾಗಿದೆ. ಅದೇ ರೀತಿಯಲ್ಲಿ ಸೆಂಟ್ ಜಾನ್ಸ್ ಶಾಲೆಯಲ್ಲಿ 10 ಗ್ರಾಮ ಪಂಚಾಯಿತಿಗೆ ಮತ ಎಣಿಕೆ ಜರುಗಲಿದ್ದು, ಒಂದು ದೊಡ್ಡ ಹಾಲ್ ಮತ್ತು ಒಂದು ಸಣ್ಣ ಕೊಠಡಿ ತೆರೆಯಲಾಗಿದೆ ಎಂದು ತಹಸೀಲ್ದಾರ್ ನಂಜುಂಡಯ್ಯ ಮಾಹಿತಿ ನೀಡಿದರು.
ಆಯಾಯ ಕ್ಷೇತ್ರ ಮತ್ತು ಪಂಚಾಯಿತಿಗಳನ್ನು ಈಗಾಗಲೇ ವಿಂಗಡಣೆ ಮಾಡಲಾಗಿದೆ. ಏಜೆಂಟ್ ಮತ್ತು ಅಭ್ಯರ್ಥಿಗಳಿಗೆ ಮತ ಎಣಿಕೆ ಸ್ಥಳಕ್ಕೆ ಅವಕಾಶವಿದ್ದು, ನಿಗಧಿತ ಸ್ಥಳದಲ್ಲಿ ಮಾತ್ರ ಕುಲಿತುಕೊಳ್ಳಬೇಕು. ಮೊಬೈಲ್ ನಿಷೇಧಿಸಲಾಗಿದೆ. ಎಣಿಗೆ ನಂತರ ಫಲಿತಾಂಶವನ್ನು ಮೈಕ್ ಮೂಲಕ ಪ್ರಕಟ ಮಾಡಲಾಗುವುದು. ಕಡ್ಡಾಯವಾಗಿ ಗುರುತಿನ ಚೀಟಿ ತರಬೇಕು. ಹಾಗೂ ಮಾಸ್ಕ್ ಧರಿಸಿರಬೇಕು ಎಂದು ತಹಸೀಲ್ದಾರ್ ತಿಳಿಸಿದರು.
ಸೂಕ್ತ ಬಂದೋಬಸ್ತ್: ಪಟ್ಟಣದ ಮೂರು ಮತ ಎಣಿಕೆ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಿಲ್ಲ. ಕೇಂದ್ರಗಳತ್ತ ಆಗಮಿಸುವ ಸಾರ್ವಜನಿಕರಿಗೆ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಮತದಾನದ ವೇಳೆ ಸಹಕಾರ ನೀಡಿದಂತೆ ಎಣಿಕೆ ಸಂದರ್ಭದಲ್ಲಿಯೂ ಸಹಕಾರ ನೀಡುವಂತೆ ತಹಸೀಲ್ದಾರ್ ನಂಜುಂಡಯ್ಯ ಕೋರಿದ್ದಾರೆ.
ಒಂದಕ್ಕೆ ಎರಡು ಪಟ್ಟು ಬೆಟ್ಟಿಂಗ್: ಪ್ರತಿ ಗ್ರಾಮದ ಪಡಶಾಲೆಯಲ್ಲಿಯೂ ಗ್ರಾಪಂ ಚುನಾವಣೆ ಸೋಲು-ಗೆಲುವಿನ ಲೆಕ್ಕಾಚಾರ ಹೆಚ್ಚಾಗಿದ್ದು, ಹಲವು ಗ್ರಾಮಗಳಲ್ಲಿ ಬೆಟ್ಟಿಂಗ್ ಜೋರಾಗಿದೆ. ಗ್ರಾಪಂ ಸ್ಥಳೀಯರಿಗೆ ಪ್ರತಿಷ್ಠೆ ಕಣವಾಗಿದ್ದು, ತಮ್ಮವರೇ ಗೆಲ್ಲುತ್ತಾರೆ ಎಂದು ಹಳ್ಳಿಗಳಲ್ಲಿ ಲಕ್ಷಗಟ್ಟಲೇ ಬೆಟ್ಟಿಂಗ್ ನಡೆಯುತ್ತಿದೆ. ಕೆಲವು ಜಿದ್ದಾಜಿದ್ದಿ ವಾರ್ಡ್‍ಗಳಲ್ಲಿ ಒಂದಕ್ಕೆ ಎರಡು ಪಟ್ಟು ಬೆಟ್ಟಿಗೆ ಕಟ್ಟುತ್ತಿದ್ದಾರೆ.
ವರದಿ: ಬಸವರಾಜು ಎಸ್ ಹಂಗಳ