ಬೆಟ್ಟದಪುರ: ರಾಜ್ಯದಲ್ಲಿ ರೈತರು ಸ್ವಾವಲಂಬಿಗಳಾಗಲು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಚಟುವಟಿಕೆಗಳಿಗೆ ಸಾಲ ನೀಡುತ್ತಿದ್ದು, ರೈತರು ಇದರ ಸದ್ಭಳಕೆ ಮಾಡ್ಕೊಂಡು ಆರ್ಥಿಕ ಅಭಿವೃದ್ಧಿ ಹೊಂದುವಂತೆ ಸಂಘದ ಅಧ್ಯಕ್ಷ ಎಸ್. ಪಿ. ಮಂಜುನಾಥ್ ತಿಳಿಸಿದರು. ಪಿರಿಯಾಪಟ್ಟಣ ತಾಲೂಕಿನ ಸಂಗರ ಶೆಟ್ಟಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022- 23 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರ ಸಂಘಗಳಲ್ಲಿ ಪ್ರತಿಯೊಂದು ಲೆಕ್ಕವನ್ನು ಪಾರದರ್ಶಕವಾಗಿ ಇಡುವ ದೃಷ್ಟಿಯಿಂದ ಗಣಕೀಕೃತಗೊಳಿಸಲಾಗಿದೆ. ಸಂಘದ ನೂತನ ಕಟ್ಟಡವನ್ನು ಪೂರ್ಣಗೊಳಿಸಲು ಎಲ್ಲಾ ನಿರ್ದೇಶಕರು, ಸದಸ್ಯರು, ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ರೈತರಿಗೆ ಬೇಕಾದ ರಸಗೊಬ್ಬರ, ಕೃಷಿ ಸಲಕರಣೆಗಳ ಮಾರಾಟ ಮಾಡಲಾಗುವುದು ಎಂದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಮೂರ್ತಿ ಮಾತನಾಡಿ ರೈತರಿಗೆ ಬೆಳೆ ಸಾಲ, ವಾಹನ ಸಾಲ, ಇತರೆ ಎಲ್ಲಾ ಸೇರಿದಂತೆ 3 ಕೋಟಿ ರೂ ಸಾಲ ನೀಡಿದ್ದೇವೆ 1 ಲಕ್ಷದ 90 ಸಾವಿರ ರೂಪಾಯಿ ನಿವ್ವಳ ಲಾಭಾಂಶ ಬಂದಿದೆ ಎಂದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಸ್. ಬಿ. ಸ್ವಾಮಿಗೌಡ, ನಿರ್ದೇಶಕರಾದ ಎಸ್.ಎನ್ .ಶಶಿಧರ್, ಕಾಂತರಾಜು, ಎಸ್‌.ಸಿ .ಸ್ವಾಮಿ ಗೌಡ, ಎಸ್‌.ಬಿ. ದಸರಥ, ಹೆಚ್.ಆರ್. ಬೇಬಿ, ರೂಪ, ಮಾದೇವಚಾರಿ, ಕುಮಾರ್ ನಾಯಕ್, ಗ್ರಾಮ ಪಂಚಾಯತಿ ಸದಸ್ಯ ಸುಬ್ರಹ್ಮಣ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್ .ಮೂರ್ತಿ ಹಾಜರಿದ್ದರು.