ಮೈಸೂರು: ಕೊರೋನಾ ಎರಡನೇ ಅಲೆಯಿಂದ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಎದುರಾಗಿರುವ ಕಾರಣ ಅದನ್ನು ಹೋಗಲಾಡಿಸುವ ಸಲುವಾಗಿ ಶಾಸಕ ಸಾ.ರಾ.ಮಹೇಶ್ ಅವರು ಕೆ.ಆರ್.ನಗರದಲ್ಲಿರುವ ತಮ್ಮ ಒಡೆತನದ ಗಾರ್ಮೆಂಟ್ಸ್ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸುವ ಮೂಲಕ ಕೋವಿಡ್ ಸೋಂಕಿತರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
ನೂತನ ಕೋವಿಡ್ ಕೇರ್ ಸೆಂಟರ್ ನ್ನು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್ ಲೋಕಾರ್ಪಣೆ ಮಾಡಿದ್ದಾರೆ. ಈ ಕೋವಿಡ್ ಕೇರ್ ಸೆಂಟರ್ ಇನ್ನೂರು ಹಾಸಿಗೆಗಳನ್ನು ಹೊಂದಿದ್ದು ಕಟ್ಟಡವು ಎರಡು ಅಂತಸ್ತು ಹೊಂದಿದೆ. ಇನ್ನು ಇಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ಶುದ್ದ ಕುಡಿಯುವ ನೀರು, ಪ್ಯಾನ್, ಆಮ್ಲಜನಕ, ಮನರಂಜನೆಗೆ ಟಿವಿ, ಹೈಟೆಕ್ ಶೌಚಾಲಯ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.


ಈ ಬಗ್ಗೆ ಮಾತನಾಡಿ ಮಾಹಿತಿ ನೀಡಿದ ಶಾಸಕ ಸಾ.ರಾ.ಮಹೇಶ್ ಅವರು, ಕೋವಿಡ್ ಕೇರ್ ಸೆಂಟರ್ ನಲ್ಲಿ ಏಳು ಮಂದಿ ತಜ್ಞ ವೈದರನ್ನು ನೇಮಕ ಮಾಡಿಕೊಳ್ಳಲಾಗಿದ್ದು 60 ಸಾವಿರ ವೇತನವನ್ನು ಸರ್ಕಾರ ನೀಡಲಿದ್ದು, ಉಳಿದ 40  ಸಾವಿರ ರೂಪಾಯಿಗಳನ್ನು ಸಾ.ರಾ. ಸ್ನೇಹ ಬಳಗದ ವತಿಯಿಂದ ಭರಿಸಲಾಗುತ್ತದೆ. ಕೋವಿಡ್ ಕೇರ್ ಸೆಂಟರ್‌ನಲ್ಲಿ ಎಲ್ಲಾ ಮೂಲಭೂತ ಸವಲತ್ತುಗಳನ್ನು ಒದಗಿಸಿದ್ದು ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆಯವರು ಉತ್ತಮವಾಗಿ ನಿರ್ವಹಣೆ ಮಾಡಿಕೊಂಡು ಹೋಗಬೇಕೆಂದು ತಿಳಿಸಿದರು.
ಇನ್ನು ಇಲ್ಲಿಗೆ ಮೂರು ಆಂಬುಲೆನ್ಸ್ ನೀಡಿದ್ದು ಅವುಗಳು ನಿರಂತರವಾಗಿ ತಾಲೂಕಿನ ಕೊರೋನಾ ಪೀಡಿತರ ಸೇವೆಗೆ ಸನ್ನದ್ಧವಾಗಿದ್ದು ಅಗತ್ಯವಿದ್ದರೆ ಕೇಂದ್ರಕ್ಕೆ ಬೇಕಿರುವ ಸಹಾಯ ಮತ್ತು ಸಹಕಾರವನ್ನು ನೀಡಲಾಗುತ್ತದೆಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜತೆಗೆ ನಾವು ಕೈಜೋಡಿಸಿ ಕಾರ್ಯ ನಿರ್ವಹಿಸಿದರೂ ಕೂಡ ಜನರು ಸ್ವಯಂಪ್ರೇರಿತರಾಗಿ ನಿರ್ಬಂಧ ಹಾಕಿಕೊಂಡು ಸಾಮಾಜಿಕ ಅಂತರ ಮತ್ತಿತರ ನಿಯಮ ಪಾಲಿಸದ ಹೊರತು ಕೊರೋನಾ ತಡೆಯಲು ಸಾಧ್ಯವಿಲ್ಲ. ಇದನ್ನು ಪ್ರತಿಯೊಬ್ಬರು ಅರಿಯಬೇಕೆಂದರು. ಇದನ್ನು ಅರಿತು ಸಾರ್ವಜನಿಕರು ಸಹಕಾರ ನೀಡಬೇಕೇಂದು ಶಾಸಕರು ಮನವಿ ಮಾಡಿದರು.
ಈ ನಡುವೆ ಸರ್ಕಾರದ ವಿರುದ್ಧ ಹರಿಹಾಯ್ದ ಅವರು ಕೊರೋನಾ ಎರಡನೇ ಅಲೆ ಅಪ್ಪಳಿಸುವ ಬಗ್ಗೆ ತಜ್ಞರು ಮುಂಚಿತವಾಗಿ ಎಚ್ಚರಿಕೆ ನೀಡಿದ್ದರೂ ಸರ್ಕಾರ ಮುನ್ನೆಚ್ಚರಿಕೆ ವಹಿಸದ ಕಾರಣ ಸಮಸ್ಯೆ ಉಲ್ಬಣವಾಗಿದೆ ಎಂದರು.
ತಾಲೂಕಿನ ಯಾವುದೇ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಸಂಬಂಧಿಸಿದ ಮಾತ್ರೆಗಳಿಗೆ ಕೊರತೆಯಾಗದಂತೆ ತಾಲೂಕು ಆರೋಗ್ಯಾಧಿಕಾರಿಗಳು ನಿಗಾ ವಹಿಸಬೇಕು ಮತ್ತು ಯಾವುದೇ ಸಮಸ್ಯೆ ಮತ್ತು ದೂರುಗಳಿದ್ದರೆ ಕೂಡಲೆ ನನ್ನ ಗಮನಕ್ಕೆ ತರುವಂತೆ ಹೇಳಿದರು.

By admin