ಮೈಸೂರು: ನಗರದಲ್ಲಿ ಕೋವಿಡ್ ಲಾಕ್ ಡೌನ್  ಮಾರ್ಗ ಸೂಚಿಯನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೈಸೂರು ನಗರ ಪೊಲೀಸರು ವಾಹನ ಸಂಚಾರ ನಿರ್ಬಂಧ ಉಲ್ಲಂಘಿಸಿದ  129 ವಾಹನಗಳನ್ನು ವಶಪಡಿಸಿಕೊಂಡು, ಮಾಸ್ಕ್ ಧರಿಸದ 128 ಪ್ರಕರಣ ದಾಖಲಿಸಿ  24 ಸಾವಿರ ರೂ. ದಂಡ ವಿಧಿಸಿದ್ದಾರೆ.

ಕೋವಿಡ್-೧೯ ಹರಡುವಿಕೆಯ ೨ನೇ ಅಲೆಯ ಹಿನ್ನಲೆಯಲ್ಲಿ ಸರ್ಕಾರವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದು, ಸರ್ಕಾರವು  ರಾಜ್ಯದಲ್ಲಿ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಸಹ ಹೊರಡಿಸಿದ್ದರೂ ಅದನ್ನು ಉಲ್ಲಂಘನೆ ಮಾಡುತ್ತಿರುವುದು ನಗರದಲ್ಲಿ ನಡೆಯುತ್ತಲೇ ಇದೆ. ಮೈಸೂರು ನಗರ ವ್ಯಾಪ್ತಿಯ ಎಲ್ಲಾ ಸ್ಥಳಗಳಲ್ಲಿ ಓಡಾಡುವ ಸಾರ್ವಜನಿಕರನ್ನು ಪೊಲೀಸರು ಪರಿಶೀಲಿಸಿದ್ದು, ಈ ವೇಳೆ ಸರ್ಕಾರದ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಅನಾವಶ್ಯಕವಾಗಿ ಓಡಾಡುತ್ತಿದ್ದ ಸಾರ್ವಜನಿಕರ 123 ದ್ವಿ ಚಕ್ರ ವಾಹನಗಳು, 3 ಆಟೋ ರಿಕ್ಷಾ, 3 ಕಾರುಗಳು  ಸೇರಿದಂತೆ ಒಂದೇ ದಿನದಲ್ಲಿ ಒಟ್ಟು 129 ವಾಹನಗಳನ್ನು  ವಶಪಡಿಸಿಕೊಂಡು  ಮುಂದಿನ ಕ್ರಮ ಕೈಗೊಂಡಿದ್ದಾರೆ

ಇನ್ನೊಂದೆಡೆ ಕೋವಿಡ್-19 ಪ್ರಮುಖ ನಿಯಮಗಳಾದ ಮಾಸ್ಕ್ ಧರಿಸುವಿಕೆ ಉಲ್ಲಂಘನೆ ಸಂಬಂಧ ನಗರದಲ್ಲಿ ಒಟ್ಟು 128 ಪ್ರಕರಣಗಳನ್ನು ದಾಖಲಿಸಿ, ರೂ. 24ಸಾವಿರ ರೂ. ದಂಡವನ್ನು ಸ್ಥಳದಲ್ಲಿಯೇ  ವಿಧಿಸಲಾಗಿದೆ. ಇದಲ್ಲದೆ, ಕೋವಿಡ್-19 ನಿಯಮಗಳು ಹಾಗೂ ಲಾಕ್‌ಡೌನ್ ನಿಯಮಗಳ ಜಾರಿ ಸಂಬಂಧ ಮೈಸೂರು ನಗರ ಪೊಲೀಸರು ಮೇಲ್ಕಂಡಂತೆ ಪ್ರತಿ ನಿತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕೋವಿಡ್-19 ಹರಡುವಿಕೆ ನಿಯಂತ್ರಣದಲ್ಲಿ ನಗರದ ಪೊಲೀಸರಿಗೆ ಸಾರ್ವಜನಿಕರು ಕೋವಿಡ್-19 ನಿಯಮಗಳನ್ನು  ಪಾಲಿಸುವ ಮೂಲಕ ಸಹಕಾರ ನೀಡಬೇಕೆಂದು ಪೊಲೀಸ್ ಆಯುಕ್ತರವರಾದ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.

By admin