ಮೈಸೂರು 01. : ಸಿಡಿಲ ಸಂತ ವೀರವೇದಾಂತಿ ಸ್ವಾಮಿ ವಿವೇಕಾನಂದರು ಹಿಂದೂ ವೇದಾಂತ ಚಳುವಳಿ ಅಥವಾ ಶ್ರೀರಾಮಕೃಷ್ಣ ಚಳುವಳಿ ಪ್ರೇರಣೆಯಾಗಿ ತಮ್ಮ ಗುರುದೇವರ ಆಧ್ಯಾತ್ಮಿಕ  ತತ್ವ ವಿಚಾರಧಾರೆಗಳನ್ನು ಲೋಕೋಪಕಾರಿಯಾಗುವಂತೆ ವೇದಾಂತ ವಿಚಾರಧಾರೆಗಳು ಭಗವಂತನ ಸಖ್ಯ ಜನಸಾಮಾನ್ಯರಿಗೆ ಅತ್ಯಂತ ಆತ್ಮೀಯವಾಗುವಂತೆ ಅಸಂಖ್ಯ ಆಧ್ಯಾತ್ಮಿಕ ಜಿಜ್ಞಾಸುಗಳಿಗೆ ಮತ್ತು ಜನಸಾಮಾನ್ಯರಿಗೆ ತಾನು ಮತ್ತು ಭಗವಂತ ಒಂದೇ ಎನ್ನುವ ಅಮೃತತ್ವ ಜ್ಞಾನ ತಿಳಿಸುವ ಸಲುವಾಗಿ ವಿಶ್ವವಿಡೀ ತಿರುಗಾಡಿ ವೇದಾಂತವನ್ನು ಸಾರಿ ಹಿಂದುತ್ವವನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದು ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ತನ್ನ ಸಿಂಹವಾಣಿಯನ್ನು ಮೊಳಗಿಸಿದ ಬಳಿಕ ಇತರ ರಾಷ್ಟ್ರಗಳಿಗೂ ಭೇಟಿ ನೀಡಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಮೇಲೆ ಭಾರತದ ಮೇಲೆ ಇದ್ದಂತಹ ತಪ್ಪುಕಲ್ಪನೆಗಳನ್ನು ತಮ್ಮ ನಿಜವಾದ ಜ್ಞಾನದ ಮೂಲಕ ಸಶಕ್ತ ಜ್ಞಾನ ಶಾಸ್ತ್ರ ಭರಿತ ಆಧ್ಯಾತ್ಮಿಕ ಸಂಪನ್ನವಾದ ವಿಶ್ವ ವೈಶಾಲ್ಯವಾದ ವಿಚಾರವನ್ನು ತಿಳಿಸಿ ಅವಿರತ ಅವಿಶ್ರಾಂತವಾಗಿ ಈ ನೆಲಕ್ಕಾಗಿ ದುಡಿದು ಹೋರಾಡಿ ಓಡಾಡಿ, 1896ಡಿಸೆಂಬರ್ 16 ರಂದು ಸ್ವಾಮೀಜಿ ಲಂಡನ್ ನಿಂದ ತಾಯ್ನಾಡಿಗೆ ಹೊರಟು ಸ್ವತಂತ್ರರಾಗಿ ಇನ್ನು ತಾಯಿನಾಡಿನ ಸೇವೆಗೆ ಅವರ ಮನಸ್ಸು ಹಾತೊರೆಯುತ್ತಿತ್ತು. ಸ್ವಾಮಿ ವಿವೇಕಾನಂದರು 1896 ಡಿಸೆಂಬರ್‍ 30 ರಂದು ತಾಯ್ನಾಡಿಗೆ ಮರಳಿದ್ದು ಆಧುನಿಕ ಭಾರತದ ಇತಿಹಾಸದಲ್ಲೊಂದು ಮಹಾ ಘಟನೆಗೆ ಸಾಕ್ಷಿಯಾಯಿತು. ಏಕೆಂದರೆ ಏಕೀಕೃತ ಭಾರತ ಅವರನ್ನು ಗೌರವಿಸಲು ಮೇಲೆದ್ದಿತು.

ಆದರ್ಶ ಪೂರಿತ ಸ್ವಾಮಿ ವಿವೇಕಾನಂದರ ಚಿತ್ರ

ಹಿಂದೂ ಧರ್ಮವನ್ನು ಪಾಶ್ಚಿಮಾತ್ಯ ದೇಶಗಳಿಗೆ ಯಶಸ್ವಿಯಾಗಿ ಪರಿಚಯಿಸಿ ವ್ಯಾಖ್ಯಾನಿಸುವ ಮಹಾಕಾರ್ಯದಲ್ಲಿ ಸುಮಾರು 4ವರ್ಷಗಳ ಕಾಲ ಸ್ವಾಮೀಜಿ ತೊಡಗಿದ್ದರೆಂಬ ವಿಚಾರವನ್ನು ಭಾರತೀಯ ಜನತೆ ಅರಿತು ಬಾಡುತ್ತಿರುವ ಸನಾತನ ಧರ್ಮದ ಕೀರ್ತಿಯನ್ನು ಪುನರುಜ್ಜೀವನಗೊಳಿಸಲು ಮತ್ತು ಅದರ ಬಾವುಟವನ್ನು ಇಡೀ ನಾಗರಿಕ ಜಗತ್ತಿನ ಉದ್ದಗಲಕ್ಕೂ ಎತ್ತಿಹಿಡಿಯಲು ಮತ್ತೆ ಹುಟ್ಟಿದ ಒಬ್ಬ ಪ್ರಾಚೀನ ಶಕ್ತಿಶಾಲಿ ಆಚಾರ್ಯನಂತೆ ಸ್ವಾಮೀಜಿಯವರನ್ನು ಅಂದೆ ಪ್ರಪಂಚವು ಭಾವಿಸಿತು.

ಸರ್ವಧರ್ಮ ಸಮ್ಮೇಳನದಲ್ಲಿ ಅವರು ವಿಜಯವಾದಾಗಿನಿಂದ ಭಾರತದಲ್ಲಿ ನವೀನ ಶಕ್ತಿಗಳು ಕ್ರಿಯಾಶೀಲವಾದವು. ಸ್ವಾಮೀಜಿಯವರ ಉಪನ್ಯಾಸ ಸ್ಫೂರ್ತಿ ವಾಣಿಗಳ ಅಧ್ಯಯನದಿಂದ ಸುಶಿಕ್ಷಿತ ಭಾರತೀಯರು ಕಣ್ಣುಗಳು ತಮ್ಮದೇ ಧರ್ಮದ ಅಂತ ಸತ್ವವನ್ನು ಅದರ ಸೌಂದರ್ಯ ನಿಧಿಗಳಿಗೆ ತೆರೆದುಕೊಂಡವು. ವೇದಾಂತವೊಂದೇ ವಿಶ್ವ ಧರ್ಮದ ಪರಮೋಚ್ಚ ಸ್ಥಾನವನ್ನು ಏರಬಲ್ಲುದು ಎಂಬುದನ್ನು ಕಂಡುಕೊಳ್ಳಲು ಆರಂಭಿಸಿದರು.

ಭಾರತಕ್ಕೆ ಹಿಂತಿರುಗಿ ಬಂದಾಗ ಸ್ವಾಮೀಜಿಯವರ ಹಲವಾರು ಸಾಧನೆಗಳಲ್ಲಿ ಅತ್ಯಂತ ಪ್ರಮುಖವಾದ ಸಾಧನೆಯೆಂದರೆ ತಮ್ಮ ಸೋದರ ಸಂನ್ಯಾಸಿಗಳನ್ನು ಗುರುಭಾಯಿಗಳನ್ನು ಧಾರ್ಮಿಕ ಜೀವನದ ವೈಯಕ್ತಿಕ ಕಲ್ಪನೆಯಿಂದ ವಿಶ್ವ ಸಾರ್ವತ್ರಿಕ ಕಲ್ಪನೆಗೆ ಪರಿವರ್ತಿಸಿದ್ದು ಅದರಲ್ಲಿ ಸಾರ್ವಜನಿಕ ಮನೋಭಾವಕ್ಕೆ ಹಾಗೂ ಸಹಜೀವಿಗಳ ಸೇವೆಗೆ ಪ್ರಮುಖ ಸ್ಥಾನವಿತ್ತರು. ಇದುವರೆಗೆ ಮಠದ ಸನ್ಯಾಸಿಗಳ ಆದರ್ಶವೆಂದರೆ ಸನ್ಯಾಸ ಜೀವನದ ಹಳೆಯ ಕಲ್ಪನೆಗನುಗುಣವಾಗಿ ಸಾಧ್ಯವಾದ ಮಟ್ಟಿಗೆ ಲೋಕದಿಂದ ಅದರ ಆತಂಕ ದುಃಖಗಳಿಂದ ದೂರ ಉಳಿದು ತೀವ್ರ ತಪಸ್ಸು, ಧ್ಯಾನದಿಂದ ವೈಯಕ್ತಿಕ ಮುಕ್ತಿ ಮತ್ತು ಪರಮಾತ್ಮ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸುವುದಾಗಿತ್ತು.

ಸ್ವಾಮಿ ವಿವೇಕಾನಂದರು ಸನ್ಯಾಸಿಗಳು ಹೊಸಬೆಳಕನ್ನು ಇತರರಿಗೆ ಒಯ್ಯಬೇಕು ದರಿದ್ರರಲ್ಲಿ, ಅಸಹಾಯಕರಲ್ಲಿ, ರೋಗಿಗಳಲ್ಲಿ ದೇವರನ್ನು ಕಾಣುತ್ತಾ ತಮ್ಮ ಸ್ವಂತ ನಿದರ್ಶನದಿಂದ ಅವರ ಸೇವೆ ಮಾಡುವುದು ಹೇಗೆಂಬುದನ್ನು ಅವರು ತೋರಬೇಕು ಮತ್ತು ಅದೇ ಕೆಲಸಕ್ಕೆ ಇತರರಿಗೆ ಸ್ಫೂರ್ತಿ ನೀಡಬೇಕು ಇದು ಇವತ್ತಿನ ಯುಗದ ಅಗತ್ಯ ಎಂದು ಸ್ವಾಮಿ ವಿವೇಕಾನಂದರು ಹೇಳಿದರು.

ತಮ್ಮ ಬದುಕುಗಳನ್ನು ಇತರರಿಗೆ ನೆರವಾಗುವ ಸಲುವಾಗಿ ಮತ್ತು ಸೇವೆ ಸಲ್ಲಿಸುವ ಸಮಾಜಕ್ಕೆ ಚಾರಿತ್ರ್ಯವನ್ನು ನಿರ್ಮಿಸುವ ಸನ್ಯಾಸಿಗಳ ಹೊಸ ವ್ಯವಸ್ಥೆಯೊಂದನ್ನು ಸೃಷ್ಟಿಸುವುದು ತಮ್ಮ ಜೀವನದ ಧ್ಯೇಯವೆಂದು ಘೋಷಿಸಿದರು. ಹೀಗೆ ಸ್ವಾಮಿ ವಿವೇಕಾನಂದರು ತಮ್ಮ ಗುರುದೇವರ ಸಂದೇಶವನ್ನು ಹೊಸ ಬೆಳಕಿನಲ್ಲಿ ವ್ಯಾಖ್ಯಾನಿಸುತ್ತಾ ಅವರ ಧ್ಯೇಯವನ್ನು ಈಡೇರಿಸುವುದರಲ್ಲಿ ತಮ್ಮ ಪರಮ ಕರ್ತವ್ಯವನ್ನು ತೋರಿಸಿದರು. ಅವರು ತಮ್ಮ ಪ್ರೀತಿಯುತ ಸೇವೆಯ ಮೂಲಕ ಜನಸಮೂಹದ ಸ್ಥಿತಿಯನ್ನು ಉತ್ತಮಪಡಿಸುವುದು ಮತ್ತು ಜಗತ್ತಿನಾದ್ಯಂತ ಶ್ರೀರಾಮಕೃಷ್ಣರ ಜೀವದಾಯಕ ವಿಚಾರಗಳನ್ನು ಹರಡುವುದು ಈ ಮೂಲಕ ಧಾರ್ಮಿಕ ಪುನರುತ್ಥಾನ ವನ್ನುಂಟುಮಾಡುವುದರಲ್ಲಿ ನಿರತರಾದರು.

ತ್ಯಾಗ ಮತ್ತು ಸೇವೆ ಪರಸ್ಪರ ಪೂರಕವಾಗಿ ಹೊಂದಿಕೊಂಡಿರುವ ಆದರ್ಶದ ಬದುಕಿನ ಕಲ್ಪನೆ ಎಂಬುದನ್ನು ತಮ್ಮ ಸೋದರ ಸಂನ್ಯಾಸಿಗಳಲ್ಲಿ  ಬೆಳಗಿಸಿದರು. ಕಠಿಣ ನೈತಿಕ ಶಿಸ್ತು, ಧ್ಯಾನ, ಅಧ್ಯಯನ, ಅಂತೆಯೆ ಮಾನವ ಅಸ್ತಿತ್ವದ ಅತ್ಯುನ್ನತ ಗುರಿಯ ಸಾಧನೆಗಾಗಿ ಮಾನವತೆಯ ವೇದಿಕೆಯ ಮೇಲೆ ತಮ್ಮ ಆತ್ಮಸಮರ್ಪಣೆ ಮಾಡಿದರು.

ಅದೇ ಸಂದರ್ಭದಲ್ಲಿ ಸ್ವಾಮೀಜಿಯವರು ಸಹಜೀವಿಗಳ ಉನ್ನತಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧರಿದ್ದಾಗ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಕ್ಷಾಮ ಬಂದು ಹಳ್ಳಿಗಳಲ್ಲಿ ಉಪವಾಸದಿಂದ ಸಾಯುತ್ತಿದ್ದ ಜನರಿಗಾಗಿ ಕ್ಷಾಮ ಪರಿಹಾರ ಕಾರ್ಯವನ್ನು ಆರಂಭಿಸಿದರು. ಸ್ವಾಮೀಜಿಯ ಇತರ ಗುರುಭಾಯಿಗಳು ಮತ್ತು ಸ್ವಾಮೀಜಿಯವರ ಬದುಕು ಬೋಧನೆಗಳಿಂದ ಸ್ಫೂರ್ತಿ ಪಡೆದ ಯುವಕರ ಪ್ರತಿಭಾನ್ವಿತ ತಂಡ ಶೀಘ್ರವಾಗಿ ವ್ಯವಸ್ಥೆಯನ್ನು ಸೇರಿಕೊಂಡಿತು. ಆ ತಂಡ ಇತರರಿಗಾಗಿ ತಮ್ಮ ಪ್ರಾಣಗಳನ್ನು ತ್ಯಾಗ ಮಾಡಲು ಅಸ್ತಿತ್ವಕ್ಕಾಗಿ ಹೋರಾಟದ ಸಾಧನ ಸಾಮಗ್ರಿಗಳನ್ನು ಒದಗಿಸಲು ಅವರು ತಮ್ಮ ಸ್ವಂತ ಕಾಲುಗಳ ಮೇಲೆ ನಿಲ್ಲುವಂತೆ ಮಾಡಲು ಪವಿತ್ರಗ್ರಂಥಗಳ ಅತ್ಯುನ್ನತ ಸಂದೇಶವನ್ನು ಪ್ರತಿಯೊಬ್ಬರಿಗೂ ಬೀರಲು ಅವರು ಧೈರ್ಯದಿಂದ ಸಿದ್ಧರಾಗಿ ನಿಂತರು. ಕಾಲ ಕ್ರಮೇಣದಲ್ಲಿ ವಿವಿಧ ಮಠ ಕೇಂದ್ರಗಳು ಸೇವಾ ಗೃಹಗಳು ಹಾಗೂ ಪ್ಲೇಗ್ ಕ್ಷಾಮ ಪ್ರವಾಹ ಸಂದರ್ಭಗಳಲ್ಲಿ ಪರಿಹಾರ ಕೇಂದ್ರಗಳು ಅವರ ಗುರುಭಾಯಿಗಳ ಮತ್ತು ಶಿಷ್ಯರ ಅದೀನದಲ್ಲಿ ಅವರ ಸಹಕಾರದೊಡನೆ ಅಸ್ತಿತ್ವಕ್ಕೆ ತಂದರು.

1897ಮೇ 1 ರಂದು ತ್ಯಾಗ ಮತ್ತು ಸೇವೆಯ ಆದರ್ಶದ ಅಡಿಯಲ್ಲೇ ರಾಮಕೃಷ್ಣರ ಸಂನ್ಯಾಸಿ ಮತ್ತು ಸಾಮಾನ್ಯ ಶಿಷ್ಯರ ನಡುವೆ ಸಹಕಾರ ಪ್ರಯತ್ನವನ್ನು ರೂಪಿಸುವ ಸಲುವಾಗಿ ತಮ್ಮ ಸೋದರ ಸಂನ್ಯಾಸಿಗಳ ಆಧ್ಯಾತ್ಮಿಕ ಮತ್ತು ಜನೋಪಕಾರಿ ಚಟುವಟಿಕೆಗಳನ್ನು ಕ್ರಮಬದ್ಧವಾದ ರೀತಿಯಲ್ಲಿ ವ್ಯವಸ್ಥೆಪಡಿಸುವ ಆಲೋಚನೆ ಸ್ವಾಮಿ ವಿವೇಕಾನಂದರಲ್ಲಿ ಬಹಳ ಕಾಲದಿಂದ ಉಳಿದಿತ್ತು. ಆ ಹಿನ್ನೆಲೆಯಲ್ಲಿ ಸಂಘವೊಂದನ್ನು ಸ್ಥಾಪಿಸುವ ಉದ್ದೇಶದಿಂದ ಸ್ವಾಮೀಜಿ ಸಭೆಯನ್ನು ಕರೆದರು ರಾಮಕೃಷ್ಣರ ಎಲ್ಲ ಸನ್ಯಾಸಿ ಮತ್ತು ಗೃಹಸ್ಥ ಶಿಷ್ಯರಾದ ಬಲರಾಮ ಬೋಸರೆಂಬ ಭಕ್ತರೊಬ್ಬರ ಮನೆಯಲ್ಲಿ ಮಧ್ಯಾಹ್ನ ಸಭೆ ಸೇರಿದ್ದ ಭಕ್ತರ ಸರ್ವಸಮ್ಮತಿಯೊಂದಿಗೆ “ರಾಮಕೃಷ್ಣ ಮಿಷನ್ ಸಂಘ” ಎಂಬ ಹೆಸರಿನಲ್ಲಿ ರೂಪುಗೊಂಡಿತು.

ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ ॥ ಎಂಬ ಋಗ್ವೇದ ವಾಣಿಯನ್ನು ಮೂಲ ಮಂತ್ರವಾಗಿಸಿಕೊಂಡು ತನ್ನ ಮೋಕ್ಷ ಮತ್ತು ಜಗತ್ತಿನ ಹಿತ ಎರಡೂ ಒಟ್ಟಿಗೆ ಸಾಗಬೇಕೆಂಬುದನ್ನು ತೋರಿಸಿಕೊಟ್ಟರು.

೧. ಸಮುದಾಯದ ಭೌತಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಅನುಕೂಲವಾಗುವ ರೀತಿಯಲ್ಲಿ ಜ್ಞಾನ ಅಥವಾ ವಿಜ್ಞಾನಗಳನ್ನು ಬೋಧಿಸಲು ವ್ಯಕ್ತಿಗಳು ಸಮರ್ಥರಾಗುವಂತೆ ತರಬೇತಿ ಕೊಡುವುದು.

೨. ಕಲೆಗಳು ಮತ್ತು ಕೈಗಾರಿಕೆಗಳನ್ನು ಒತ್ತಾಸೆಯಿಂದ ಪ್ರೋತ್ಸಾಹಿಸುವುದು.

೩. ಶ್ರೀರಾಮಕೃಷ್ಣರ ಜೀವನ ವಿಧಾನ ತೋರಿದ ರೀತಿಯಲ್ಲಿ ವೇದಾಂತ ಸಂಬಂಧಿ ಮತ್ತು ಇತರ ಧಾರ್ಮಿಕ ಭಾವನೆಗಳನ್ನು ಸಾಮಾನ್ಯ ಜನರ ನಡುವೆ ಪರಿಚಯಿಸಿ ಹರಡುವುದು.

ಹೀಗೆ ಸ್ವಾಮಿ ವಿವೇಕಾನಂದರು ಅನುಷ್ಠಾನ ವೇದಾಂತಿಯಾಗಿ ಪ್ರತಿಯೊಬ್ಬರು ಉಪನಿಷತ್ ಸಿದ್ಧಾಂತಗಳನ್ನು ದೈನಂದಿನ ಜೀವನದಲ್ಲಿ ಕಾರ್ಯರೂಪಕ್ಕೆ ತರಬೇಕೆಂದು ಬಯಸಿದರು. ಸ್ವತಃ ಸ್ವಾಮಿ ವಿವೇಕಾನಂದರು ಈ ಆದರ್ಶವನ್ನು ಜೀವನದಲ್ಲಿ ಆಚರಿಸಿದರು. ಅವರ ಕ್ರಿಯೆಯ ಪ್ರಭಾವಕ್ಕೆ ಪ್ರವಾಹದ ರೀತಿಯಲ್ಲಿ ಧುಮುಕಿದರು ತನ್ಮೂಲಕ ತಮ್ಮ ಹೆಜ್ಜೆಗಳನ್ನು ಹಿಂಬಾಲಿಸಿ ಅತ್ಯಂತ ಕಷ್ಟಕರ ಸನ್ನಿವೇಶಗಳಲ್ಲಿ ಕೂಡ ದುಃಖಿಯಾದ ಮನುಕುಲದ ಸೇವೆ ಸಲ್ಲಿಸುವಂತೆ ಇತರರಿಗೆ ಸ್ಫೂರ್ತಿ ನೀಡಿದರು.

ತಮ್ಮ ದೇಶ ಬಾಂಧವರ ಹೃದಯಗಳಲ್ಲಿ ಭಾರತದ ಹೆಸರು ಕೇಳಿದ ಮಾತ್ರಕ್ಕೆ ಹೆಮ್ಮೆಯಿಂದ ರೋಮಾಂಚನವಾಗುವಂತೆ ತಮ್ಮ ಪೂರ್ವಿಕರಿಂದ ಬಳುವಳಿಯಾಗಿ ಪಡೆದಿರುವ ಸಂಸ್ಕೃತಿಯ ಮೌಲ್ಯ ಮತ್ತು ಅದರ ಅರ್ಥಪೂರ್ಣತೆಯನ್ನು ತಿಳಿಸಿದರು.  ಭಾರತದ ರಾಷ್ಟ್ರೀಯತೆ ವಿಕಾಸ ಪ್ರಕ್ರಿಯೆಯಲ್ಲಿ ನವೀನ ವಿಚಾರಗಳನ್ನು ಅಳವಡಿಸಿಕೊಳ್ಳಬೇಕಾದರು ಪ್ರಾಚೀನದ ಮಹತ್ವವನ್ನು ಆಧರಿಸಿರಬೇಕೆಂದು ಸ್ಪಷ್ಟವಾಗಿ ಸೂಚಿಸಿದರು. ನಮ್ಮ ರಾಷ್ಟ್ರದ ಭವಿಷ್ಯವನ್ನು ನಿರ್ಮಿಸಬೇಕಾದರೆ ಮೊದಲು ನಾವು ನಮ್ಮ ಜನಾಂಗದ ಪ್ರಾಚೀನ ಸಂಸ್ಕೃತಿಯ ಮಹತ್ವವನ್ನು ಆಳವಾಗಿ ಅರಿಯಬೇಕು. ಪ್ರಾಚೀನರ ಆಸ್ತಿ ಧಾರ್ಮಿಕ ಆಸ್ತಿ ಎಂದು  ಅವರು ಎತ್ತಿ ತೋರಿದರು.

ಆದ್ದರಿಂದ ಭಾರತದ ಮೂಲಭೂತ ಸಮಸ್ಯೆ ಎಂದರೆ ಇಡೀ ದೇಶವನ್ನು ಆಧ್ಯಾತ್ಮಿಕ ಆದರ್ಶದ ಸುತ್ತ ಸಂಘಟಿಸುವುದು. ಧರ್ಮವೆಂದರೆ ಶಾಶ್ವತ ಜೀವದಾಯಕ ತತ್ತ್ವಗಳು ಧರ್ಮವು ಮೂಢನಂಬಿಕೆಗಳ ಮತ್ತು ಸ್ಥಳೀಯ ರೂಢಿಗಳ ರಾಶಿಯಲ್ಲ. ಅವೆಲ್ಲ ನಿರ್ದಯ ಹಸ್ತದಿಂದ ಕಿತ್ತೆಸೆಯಬೇಕಾದ ಕಳೆಗಳು ಎಂದು ತಿಳಿಸಿದರು.

ಆದ್ದರಿಂದ ವ್ಯಕ್ತಿಯೊಬ್ಬ ಸಮಗ್ರ ದೇಶದ ಒಳಿತನ್ನು ಬಯಸುವವನಾದರೆ ಅವನ ಜೀವನ ಕ್ಷೇತ್ರ ಯಾವುದೇ ಆಗಿರಲಿ, ಅವನು ಶೀಲ ನಿರ್ಮಾಣಕ್ಕೆ ಪ್ರಯತ್ನಿಸಬೇಕು, ಧೈರ್ಯ, ಶಕ್ತಿ, ಆತ್ಮಗೌರವದಂತ ಗುಣಗಳನ್ನು ಬೆಳೆಸಿಕೊಳ್ಳಬೇಕು. ತ್ಯಾಗ ಮತ್ತು ಸೇವೆಗಳ ರಾಷ್ಟ್ರೀಯ ಆದರ್ಶಗಳನ್ನು ಪಾಲಿಸಬೇಕು ಎಂದು ಒತ್ತಿ ಹೇಳಿದರು.

ಹೀಗೆ ತನ್ನ ಅಚ್ಚುಕಟ್ಟಾದ ಅದಮ್ಯವಾದ ಸೇವೆಯಿಂದ ಬೀಜಾಣುವಿನಿಂದ ಇವತ್ತಿನ ರಾಮಕೃಷ್ಣ ಮಿಷನ್ ವಿಶ್ವದಾದ್ಯಂತ  ಬೆಳೆದು ಬಂದು ದಿವ್ಯತ್ರಯರ ಅಡಿದಾವರೆಗಳಲ್ಲಿ ಬೆಳಕು ಕಂಡಿರುವುದಕ್ಕೆ 125 ವರ್ಷಗಳನ್ನು ಪೂರೈಸಿದೆ ಈಗಲೂ ಸಹ ಅವಿರತ ಅವಿಶ್ರಾಂತವಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಬಂದಿದೆ ಕೊರೊನಾ ಮಹಾಮಾರಿಯ ಈ ಸಂದರ್ಭದಲ್ಲೂ ಮನುಕುಲಕ್ಕೆ ತನ್ನ ಶಕ್ತಿಮೀರಿ ಸಹಾಯ ಹಸ್ತ ಚಾಚುತ್ತಾ ಬಂದಿದೆ ಎಂದು ತಿಳಿಸಲು ಹರ್ಷವೆನಿಸುತ್ತದೆ. ಮೈಸೂರಿನಲ್ಲಿಯು ಸ್ವಾಮಿ ವಿವೇಕಾನಂದರು ಆಗಮಿಸಿ ಯಾದವಗಿರಿಯಲ್ಲಿ ಶ್ರೀರಾಮಕೃಷ್ಣ ಆಶ್ರಮವನ್ನು ಶ್ರೀರಾಮಕೃಷ್ಣ ವಿದ್ಯಾಶಾಲೆ ಬಿ.ಎಡ್ ಕಾಲೇಜುಗಳನ್ನು ಸ್ಥಾಪಿಸಿರುವುದು ಸನ್ಯಾಸಿಗಳು ಅದನ್ನು ಮುನ್ನಡೆಸಿಕೊಂಡು ಯಶಸ್ವಿಯಾಗಿ ಹೋಗುತ್ತಿರುವುದು ಪ್ರಸ್ತುತ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಅವರು ಮೈಸೂರಿನ ಆಶ್ರಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತ ಇತರ ಎಲ್ಲಾ ಸೋದರ ಸಂನ್ಯಾಸಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಾ ಇರುವುದು ನಿಜಕ್ಕೂ ಸಂತೋಷಕರ ಸಂಗತಿ.

ವರದಿ: ಪುರುಷೋತ್ತಮ್  ಅಗ್ನಿ. ಎಸ್ 

 

By admin