ಸರಗೂರು ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರಕ ಡಾ.ಬಾಬು ಜಗಜೀವನ್ ರಾಮ್ ಅವರ 115 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ ಮಾತನಾಡಿದರು.

ಸರಗೂರು: ಶ್ರೇಷ್ಠ ದಾರ್ಶನಿಕರ ಆಶಯಗಳು ಆಯಾ ಸಮುದಾಯಕ್ಕೆ ತಲುಪಬೇಕು ಎಂಬ ಉದ್ದೇಶದಿಂದ ಸರಕಾರ ಹಲವು ಜಯಂತಿ ಆಚರಣೆಗೆ ಕರೆ ನೀಡಿದೆ. ಆದರೆ, ಇಂದು ಸರಕಾರಿ ಆಯೋಜಿತ ಜಯಂತಿಗಳು ಕಾಟಾಚಾರಕ್ಕೆ ಸೀಮಿತವಾಗಿದ್ದು, ಯಾವ ಪುರುಷಾರ್ಥಕ್ಕೆ ಈ ಆಚರಣೆಗಳು ಎಂಬ ಕೂಗು ಕೇಳಿಬಂದಿತು.
ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ನಡೆದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರಕ ಡಾ.ಬಾಬು ಜಗಜೀವನ್ ರಾಮ್ ಅವರ ೧೧೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಹೊರತುಪಡಿಸಿದರೆ ಸಾರ್ವಜನಿಕರು ಒಂದೆರಡು ಮಂದಿ ಮಾತ್ರ ಭಾಗವಹಿಸಿದುದು ಇದಕ್ಕೆ ಪುಷ್ಠಿ ನೀಡಿತು.


ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಿವಣ್ಣ ಮಾತನಾಡಿ, ದಾರ್ಶನಿಕರ ವಿಚಾರಧಾರೆಗಳು ಜಯಂತಿ ಆಚರಣೆ ಕಾರ್ಯಕ್ರಮಗಳಲ್ಲಿ ಜನರಿಗೆ ಸುಲಭವಾಗಿ ತಲುಪುವಂತಾಗಬೇಕು. ಆದರೆ, ಅಧಿಕಾರಿಗಳು ಜಯಂತಿ ಕಾರ್ಯಕ್ರಮ ಮಾಡುವುದಾಗಿ ಪೂರ್ವಭಾಗಿ ಸಭೆ ಮಾಡಿದ್ದೀರಿ ಅಷ್ಟೆ. ಅತ್ತ ಜನರನ್ನು ಸೇರಿಸುವ ಕೆಲಸ ಮಾಡಿಲ್ಲ. ಇತ್ತ ಪ್ರಚಾರವನ್ನೂ ಮಾಡಿಲ್ಲ. ಇದರಿಂದ ಸಾರ್ವಜನಿಕರು ಭಾಗಿಯಾಗಿಲ್ಲ. ಹೀಗಾದರೆ ದಾರ್ಶನಿಕರ ಆದರ್ಶಗಳು ಸಾರ್ವಜನಿಕರಿಗೆ ಹೇಗೆ ತಲುಪಲು ಸಾಧ್ಯ. ಇನ್ನು ಮುಂದೆ ಇಂಥ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ತಮ್ಮ ಆಕ್ರೋಶವ್ಯಕ್ತಪಡಿಸಿದರು. ಇದಕ್ಕೆ ಬಿ.ಮಟಕೆರೆ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕುರ್ಣೇಗಾಲ ಬೆಟ್ಟಸ್ವಾಮಿ ಸಾಥ್ ನೀಡಿದರು.


ಬಿ.ಮಟಕೆರೆ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕುರ್ಣೇಗಾಲ ಬೆಟ್ಟಸ್ವಾಮಿ ಮಾತನಾಡಿ, ದೇಶದಲ್ಲಿ ತಲೆದೋರಿದ ಆಹಾರ ಸಮಸ್ಯೆ ಹೋಗಲಾಡಿಸಿ, ಹಸಿರು ಕ್ರಾಂತಿಗೆ ಕಾರಣರಾದರು. ಅಂತಹ ಮಹಾನ ನಾಯಕರ ಆದರ್ಶಗಳನ್ನು ಪಾಲಿಸಬೇಕು. ಅಸ್ಪ್ರಶ್ಯತಾ ನಿವಾರಣಾ ಹೋರಾಟದ ಮಹಾನ್ ದಲಿತನಾಯಕರಾಗಿದ್ದರು ಎಂದು ಗುಣಗಾನ ಮಾಡಿದರು.


ಬಾಬು ಜಗಜೀವನ್ ರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲ. ಸಮಾಜ ಸೇವಕರೂ ಆಗಿದ್ದರು. ಬಡ ಕುಟುಂಬದಲ್ಲಿ ಜನಿಸಿದ ಇವರು ಸಮಾಜದ ಏಳಿಗೆಗಾಗಿ ದುಡಿದವರು. ಇದಲ್ಲದೆ ಹಸಿರು ಕ್ರಾಂತಿಹರಿಕಾರರೂ ಹೌದು. ಹೀಗಾಗಿ ಇಂಥ ಮಹಾನೀಯರ ವಿಚಾರಧಾರೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಾಯಕ ಪ್ರಸಾದ್, ತಹಶೀಲ್ದಾರ್ ಚಲುವರಾಜು, ಜೆಡಿಎಸ್ ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ದಸಂಸ ಸಂಚಾಲಕ ಇಟ್ನ ರಾಜಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಮಹದೇವಯ್ಯ, ಎಪಿಎಂಸಿ ವಸಂತಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.