ಮೈಸೂರು: ನಗರದಲ್ಲಿ ಸಂಚಲ ಮೂಡಿಸಿದ್ದ ದೇವು ಅಲಿಯಾಸ್ ದೇವೇಂದ್ರ ಕೊಲೆ ಪ್ರಕರಣದಲ್ಲಿ ೧೧ ಮಂದಿಯನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿರುವ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ, ನಗರ ಪಾಲಿಕೆ ಮಾಜಿ ಸದಸ್ಯ ಮಹದೇಶ್ ಅಲಿಯಾಸ್ ಅವ್ವ ಮಹದೇಶ್ ಹಾಗೂ ಅವರ ಸೋದರ ಮಂಜು ಸೇರಿದಂತೆ ೧೮ ಮಂದಿಯನ್ನು ಆರೋಪದಿಂದ ಖುಲಾಸೆಗೊಳಿಸಿದೆ.
ಮೇ ೨೦೧೬ರಲ್ಲಿ ದೇವು ಅವರನ್ನು ಗುಂಪೊಂದು ಕೊಲೆ ಮಾಡಿದ್ದ ಆರೋಪದ ಮೇರೆಗೆ ೨೯ ಮಂದಿ ವಿರುದ್ಧ ದೋಷಾರೋಪ ಪಟ್ಟಿಯನ್ನು ಜೆ.ಎಲ್.ಪುರ ಠಾಣೆ ಪೊಲೀಸರು ಸಲ್ಲಿಸಿದ್ದರು.ತಪ್ಪಿತಸ್ಥರು: ಪವನ್ ಕುಮಾರ್, ಮಣಿಕಂಠ, ಮಂಜು, ಟಿ.ಪರಮೇಶ, ವಿಜಯಕುಮಾರ್, ನವೀನ್ ಕುಮಾರ್, ಸುನಿಲ್ ಕುಮಾರ್, ಎನ್.ನವೀನ್, ಮಹದೇವ, ಶಿವಕುಮಾರ, ಇಲಯಪೀರ್ ಸಾಬ್

ಖುಲಾಸೆಗೊಂಡವರು: ಕೆ.ನಂದಕುಮಾರ್, ಸಿ.ರಾಕೇಶ್, ಶಿವರಾಜು, ಪದ್ಮನಾಭ, ಪಿ.ಕಾರ್ತೀಕ್, ಎಚ್.ಬಿ.ಕಾರ್ತೀಕ್ ನಾಗೇಂದ್ರ, ಶಶಿಕುಮಾರ, ಕೆ.ಎಲ್.ಸುನಿಲ್, ಆರ್.ಪ್ರಮೋದ್, ಸಿ.ಎಸ್.ಶ್ರೀಧರ್, ಕೆ.ಎಂ.ರಘು, ಚಂದು, ರಾಮು, ಸಿ.ಮಹದೇಶ್, , ಗುರುದತ್, ಸಿ.ಮಂಜು, ಸಂತೋಷ್.ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯುಟರ್ ಸುದೀಪ್ ಬಂಗೇರಾ ವಾದ ಮಂಡಿಸಿದ್ದರು. ಶಿಕ್ಷೆಯ ಪ್ರಮಾಣವನ್ನು ಮಾರ್ಚ್ ೪ರಂದು ನ್ಯಾಯಾಲಯ ಪ್ರಕಟಿಸಲಿದೆ.
:ಘಟನೆ ವಿವರ:
ಕೊಲೆ ನಡೆದ ದಿನ ದೇವು ಅವರು ತಮ್ಮ ಸ್ನೇಹಿತರಾದ ಅಶೋಕ್, ರಮೇಶ್ ಹಾಗೂ ಶ್ರೀಕಾಂತ್ ಅವರ ಜೊತೆ ತಮ್ಮ ಮನೆಯ ಮುಂದಿನ ರಸ್ತೆಯಲ್ಲಿದ್ದ ಬೆಳ್ಳಂ ಬೆಳ್ಳಿಗೆ ಮಾರಿಗುಡಿ ದೇವಸ್ಥಾನದ ಬಳಿ ಕುಳಿತಿದ್ದರು. ಇದೇ ವೇಳೆ ಬೊಲೆರೋ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬಂದ ಸುಮಾರು ೧೦ ರಿಂದ ೧೧ ಮಂದಿ ಕೈಯಲ್ಲಿ ಲಾಂಗ್ ಹಿಡಿದು ಧಡದಡನೆ ಇಳಿದಿದ್ದಾರೆ. ಲಾಂಗ್ ಸಮೇತ ಇಳಿದ ಅಪರಿಚಿತರನ್ನು ಕಂಡ ದೇವು ಹಾಗೂ ಸ್ನೇಹಿತರು ಒಬ್ಬೊಬ್ಬರು ಒಂದೊಂದು ರಸ್ತೆಯಲ್ಲಿ
ಓಡಲಾರಂಬಿಸಿದರು. ಇದೇ ವೇಳೆ ವಾಹನಗಳಲ್ಲಿ ಬಂದಿದ್ದ ಯುವಕರು ದೇವುನನ್ನು ಅಟ್ಟಿಸಿಕೊಂಡು ಬಂದಿದ್ದಾರೆ. ಧೃಢಕಾಯ ಶರೀರ ಇರುವದರಿಂದ್ದ ಕಾರಣ ದೇವುಗೆ ಹೆಚ್ಚಿಗೆ ಓಡಲಾಗಲಿಲ್ಲ. ಆದರೂ ಶಕ್ತಿ ಮೀರಿ ಓಡುತ್ತಿದ್ದ ವೇಳೆ ಮಾರಿಗುಡಿ ದೇವಸ್ಥಾನದ ಬಳಿ ಎಡವಿ ಬಿದ್ದಿದ್ದರು. ದೇವುನನ್ನು ಸುತ್ತುವರಿದ ಅಪರಿಚಿತ ಯುವಕರು ಮೊದಲಿಗೆ ಆತನ ಮುಂಗಾಲಿಗೆ ಲಾಂಗ್ನಿಂದ ಹಲ್ಲೆ ನಡೆಸಿದ್ದಾರೆ.


ನಂತರ ಅಷ್ಟೂ ಜನರೂ ಸೇರಿ ತಮ್ಮ ಕೈಯಲ್ಲಿದ್ದ ಲಾಂಗ್ಗಳಿಂದ ದೇವು ಅವರ ತಲೆ, ಕತ್ತು, ಭಾಗಗಳಿಗೆ ಮನಸೋ ಇಚ್ಛೆ ಥಳಿಸಿ ಇರಿದು ತಕ್ಷಣವೇ ಅಲ್ಲಿಂದ ತಮ್ಮ ವಾಹನಗಳಲ್ಲಿ ಪರಾರಿಯಾಗಿದ್ದರು.ತಕ್ಷಣವೇ ಸ್ಥಳಕ್ಕಾಗಮಿಸಿದ್ದ ಇನ್ಸ್ಪೆಕ್ಟರ್ ತಿಮ್ಮೇಗೌಡ ಹಾಗೂ ಸಿಬ್ಬಂದಿ ಘಟನಾ ಸ್ಥಳದ ಮಹಜರು ನಡೆಸಿದ್ದರು. ಈ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನಾ ಸ್ಥಳಕ್ಕೆ ಅಂದಿನ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಉಪ ಪೊಲೀಸ್ ಆಯುಕ್ತ ಶೇಖರ್, ಡಿ.ಎನ್.ಬಿರ್ಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.