ಮೈಸೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಸ್.ಶಿವರಾಂ(೮೩) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇತ್ತೀಚಿಗೆ ಕಾರಿನಲ್ಲಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಶಿವರಾಂ ಅವರ ತಲೆಗೆ ಸ್ವಲ್ಪ ಪೆಟ್ಟಾಗಿತ್ತು. ಬಳಿಕ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದಾಗ ವರದಿಯಲ್ಲಿ ಯಾವುದೇ ಸಮಸ್ಯೆಗಳೂ ಪತ್ತೆಯಾಗಿರಲಿಲ್ಲ. ಕಳೆದ ಮಂಗಳವಾರ ರಾತ್ರಿ ಮನೆಯಲ್ಲಿ ಅಯ್ಯಪ್ಪಸ್ವಾಮಿ ಪೂಜೆ ನಡೆಸಲಾಗಿದ್ದು, ಪೂಜೆ ಮಾಡಲು ಶಿವರಾಂ ಅವರು ಪೂಜೆ ಮನೆಗೆ ಹೋದಾಗ ಕೆಳಗೆ ಬಿದ್ದಿದ್ದಾರೆ. ಈ ವೇಳೆ ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ಆಸ್ಪತ್ರೆಗೆ ದಾಖಲಿಸಿದ ವೇಳೆ ಮಿದುಳಿನಲ್ಲಿ ರಕ್ತಸ್ರಾವವಾಗಿರುವುದು ಕಂಡು ಬಂದಿತ್ತು. ವಯಸ್ಸಾದ ಕಾರಣ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗಿರಲಿಲ್ಲ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಅವರು ಕೋಮಾಗೆ ಜಾರಿದ್ದು, ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅಣ್ಣ ರಾಮನಾಥನ್ ಅವರ ಮೂಲಕ ಚಿತ್ರರಂಗದ ಪರಿಚಯ ಮಾಡಿಕೊಂಡ ಶಿವರಾಮ್, ನಿರ್ದೇಶಕನಾಗಿ ಅಭಿನಯಕ್ಕೆ ಇಳಿದವರು. ಸಹಾಯಕ ನಿರ್ದೇಶಕನಾಗಿದ್ದ ವೇಳೆ ಆಕಾಶವಾಣಿಯಲ್ಲೂ ಶಿವರಾಮ್ ಕಾರ್ಯನಿರ್ವಹಿಸಿದ್ದರು.
೧೯೬೫ ರಲ್ಲಿ ಬೆರೆತ ಜೀವ ಸಿನಿಮಾ ಮೂಲಕ ಶಿವರಾಂ ಚಿತ್ರರಂಗ ಪ್ರವೇಶಿಸಿದ್ದರು. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟರ ಜೊತೆ ಶಿವರಾಂ ಬಣ್ಣ ಹಚ್ಚಿದ್ದರು.
ಕಿರುತೆರೆ ಹಾಗೂ ಹಿರಿತೆರೆಯ ಹಲವಾರು ಚಿತ್ರ ಹಾಗೂ ದಾರಾವಾಹಿಗಳಲ್ಲಿ ಶಿವರಾಂ ಅವರು ನಟಿಸಿದ್ದ ಇವರು, ೧೯೩೮ರಲ್ಲಿ ಚೂಡಸಂದ್ರ ಹಳ್ಳಿಯಲ್ಲಿ ಜನಿಸಿದ್ದರು. ೬ ದಶಕಗಳ ಕಾಲ ಸುಮಾರು ೨೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಚಿತ್ರರಂಗದಲ್ಲಿ ಅವರು ಶಿವರಾಮಣ್ಣ ಎಂದೇ ಎಲ್ಲರಿಗೂ ಪರಿಚಿತರಾಗಿದ್ದ ಇವರು, ಪೋಷಕ ನಟನಾಗಿ, ಹಾಸ್ಯನಟನಾಗಿ ನಟಿಸಿದ್ದರು. ಚಿತ್ರರಂಗದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜತೆಯೂ ಶಿವರಾಂ ಕೆಲಸ ಮಾಡಿದ್ದರು. ಹಲವು ದಿಗ್ಗಜ ನಟರೊಂದಿಗೆ ಶಿವರಾಂ ತೆರೆ ಹಂಚಿಕೊಂಡಿದ್ದರು.