ಮೈಸೂರು: ಗ್ರಾಮೀಣ ಪ್ರದೇಶಗಳಿಗೆ ವೈದ್ಯರ ತಂಡ ಭೇಟಿ ನೀಡುತ್ತಿದ್ದು ಇದೀಗ ಮನೆಮುಂದೆಯೇ ಆರೋಗ್ಯ ಕೇಂದ್ರ ನಿರ್ಮಾಣಗೊಂಡ ವಾತಾವರಣ ನಿರ್ಮಾಣವಾಗಿದೆ.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ರೋಗದ ಲಕ್ಷಣವಿದ್ದರೂ ತಪಾಸಣೆಗಾಗಿ ವೈದ್ಯರ ಬಳಿಗೆ ತೆರಳದೆ ತಮಗೆ ತೋಚಿದ ಮಾತ್ರೆಗಳನ್ನು ಸೇವಿಸುವ ಪರಿಪಾಠ ಹೆಚ್ಚಿನ ಜನರಲ್ಲಿದೆ. ಇದರಿಂದಾಗಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಇದನ್ನು ತಡೆಯುವ ಸಲುವಾಗಿ ಸರ್ಕಾರ ಇದೀಗ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯ ಕ್ರಮ ಜಾರಿಗೆ ತಂದಿದೆ.

ಈ ಕಾರ್ಯಕ್ರಮದಡಿಯಲ್ಲಿ ನಂಜನಗೂಡು ತಾಲ್ಲೂಕು ವರುಣಾ ಕ್ಷೇತ್ರಕ್ಕೆ ಸೇರುವ ತಗಡೂರು ಗ್ರಾಮದಲ್ಲಿ ವೈದ್ಯರ ತಂಡ  ಮನೆಗೆ ತೆರಳಿ ಕೋವಿಡ್ ಪರೀಕ್ಷೆ ನಡೆಸಿ ಔಷಧಿ ನೀಡುತ್ತಿದೆ. ಗ್ರಾ.ಪಂ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಮಹೇಶ್ ಹಾಗೂ ಉಪಾಧ್ಯಕ್ಷೆ ರತ್ನಮ್ಮ ಶಂಕರೇಗೌಡರವರು ಚಾಲನೆ ನೀಡಿದರು.

ಮಹಾಮಾರಿ ಕೊರೋನಾ ಹಳ್ಳಿಹಳ್ಳಿಗೆ ವ್ಯಾಪಕವಾಗಿ ಹರಡುತ್ತಿದ್ದು, ಹಳ್ಳಿಯ ಜನರ ಬದುಕನ್ನು ಹಾಳುಮಾಡಿ ಅನೇಕ ಬಲಿ ತೆಗೆದುಕೊಂಡಿದೆ, ಆದ ಕಾರಣ ಈ ಮಹಾಮಾರಿ ಕೊರೊನಾವನ್ನು ತಡೆಗಟ್ಟಲು ಸರ್ಕಾರ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವೈದ್ಯರು ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಪರೀಕ್ಷೆ ಮಾಡಿ, ಸೂಕ್ತ ಔಷಧೋಪಚಾರ ನೀಡಲಿದ್ದು, ಈ ಸೌಲಭ್ಯವನ್ನು ಹಳ್ಳಿಯ ಜನರು ಸದು ಪಯೋಗಪಡಿಸಿಕೊಂಡು ವೈದ್ಯರು ನೀಡುವ ಸಲಹೆ ಹಾಗೂ ಅವರು ನೀಡುವ ಔಷಧಿಗಳನ್ನು ತೆಗೆದುಕೊಂಡು ಕೊರೋನಾ ಮುಕ್ತ ಗ್ರಾಮವನ್ನಾಗಿಸಲು ಹಾಗೂ ಆರೋಗ್ಯವಂತರಾಗಲು ಸಹಕಾರ ನೀಡಬೇಕೆಂದು ಗ್ರಾಮಸ್ಥರಲ್ಲಿ ಗ್ರಾಪಂ ಅಧ್ಯಕ್ಷರು ಮನವಿ ಮಾಡಿದರು.

ಆರೋಗ್ಯ ಕೇಂದ್ರದ ಅಧಿಕಾರಿ ಡಾ. ಚಾಂದಿನಿ ಮಾತನಾಡಿ ಕೋವಿಡ್‌ನ ಲಕ್ಷಣಗಳನ್ನು ಗುರ್ತಿಸಿ ಅಂತಹವರಿಗೆ ಸ್ಥಳದಲ್ಲಿಯೇ ಪರೀಕ್ಷೆ ಮಾಡಿ ಔಷಧಿ ನೀಡಲಾಗುವುದಲ್ಲದೆ, ಪಾಸಿಟಿವ್ ಬಂದ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋವಿಡ್ ಸೆಂಟರ್‌ಗಳಿಗೆ ಕಳುಹಿಸಿಕೊಡುತ್ತೇವೆ ಎಂದು ಹೇಳಿದರು.

ಈ ವೇಳೆ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಶಬಾನಾಬಾಬು, ಸದಸ್ಯರಾದ ಮಹೇಶ್, ಸ್ವಾಮಿ, ಸಂಪತ್, ಮಾದಶೆಟ್ಟಿ, ಕುಮಾರ, ಸುರೇಶ್, ಪ್ರಮೀಳ, ಚಿಕ್ಕಸ್ವಾಮಿ, ಬಸವರಾಜು, ಚಂದ್ರವತಿ, ಆಕಾಶ್, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದ ಮುಖಂಡರು ಇದ್ದರು.

By admin