ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಕಾವೇರಿ ಕೊಳ್ಳ ಪ್ರಾಂತ್ಯ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚು ಸ್ಥಾನ; ಸಚಿವ ಸೋಮಶೇಖರ್
* ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರಾದ ಅರುಣ್ ಸಿಂಗ್ ಅವರಿಗೆ ಗ್ರಾಮ ಸ್ವರಾಜ್ಯ ಸಮಾವೇಶದ ಬಗ್ಗೆ ಮಾಹಿತಿ ರವಾನೆ
* ಬಿಜೆಪಿ ಪ್ರಧಾನ ಕಚೇರಿಯಲ್ಲಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ ಸಚಿವ ಸೋಮಶೇಖರ್
* ಮೈಸೂರು ವಿಭಾಗದಲ್ಲಿ 7 ದಿನದಲ್ಲಿ 5 ಜಿಲ್ಲೆಗಳಿಗೆ ಪ್ರವಾಸ, 9 ಸಮಾವೇಶ ಆಯೋಜನೆ
* ಒಟ್ಟು 1210 ಕಿಲೋಮೀಟರ್ ದೂರ ಕ್ರಮಿಸಿ ಕಾರ್ಯಕ್ರಮ ಆಯೋಜನೆ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಆಗಿರುವ ಶ್ರೀ ಅರುಣ್ ಸಿಂಗ್ ಅವರನ್ನು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಹಕಾರ ಹಾಗೂ ಮೈಸೂರು ಉಸ್ತುವಾರಿ ಸಚಿವರಾದ ಶ್ರೀ ಎಸ್. ಟಿ. ಸೋಮಶೇಖರ್ ಅವರು ಭೇಟಿ ಮಾಡಿ ಅಭಿನಂದಿಸಿದರು. ಇದೇ ವೇಳೆ ಭಾರತದ ಸಂವಿಧಾನ ಕೃತಿಯನ್ನು ನೀಡಿ ಗೌರವಿಸಿದರು. ಜೊತೆಗೆ ಗ್ರಾಮ ಸ್ವರಾಜ್ಯ ಸಮಾವೇಶದ ಬಗ್ಗೆ ಮಾಹಿತಿ ನೀಡಿ, ಕಾವೇರಿ ಕೊಳ್ಳದ ಪ್ರಾಂತ್ಯ ಹಾಗೂ ಹಳೇ ಮೈಸೂರು ಭಾಗದಲ್ಲಿ ಪ್ರಸಕ್ತ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನವನ್ನು ಗೆಲ್ಲಲಿದ್ದಾರೆ ಎಂದು ತಿಳಿಸಿದರು.

ಕಂದಾಯ ಸಚಿವರಾದ ಆರ್. ಅಶೋಕ್ ಅವರ ನೇತೃತ್ವದಲ್ಲಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮವನ್ನು ಮೈಸೂರು ವಿಭಾಗದಲ್ಲಿ ನಡೆಸಲಾಗಿದ್ದು, ತಮ್ಮನ್ನು ಸಹಿತ ಪೌರಾಡಳಿತ ಸಚಿವರಾದ ನಾರಾಯಣ್ ಗೌಡ ರವರು, ಆಹಾರ ಸಚಿವರಾದ ಗೋಪಾಲಯ್ಯ ಅವರು, ಬಿಜೆಪಿ ಉಪಾಧ್ಯಕ್ಷರಾದ ವಿಜಯೇಂದ್ರ ಅವರು, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್ ಅವರು ಹಾಗೂ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರ ತಂಡದೊಂದಿಗೆ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬರಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಸಚಿವರು, ಕಾರ್ಯಕ್ರಮದ ಬಗ್ಗೆ ಅರುಣ್ ಸಿಂಗ್ ಅವರಿಗೆ ಹಲವು ಮಾಹಿತಿಗಳನ್ನು ನೀಡಿದರು.

ಮೈಸೂರು ವಿಭಾಗದಲ್ಲಿ 28-11-2020ರಿಂದ 02-12-2020ರವರೆಗೆ ಒಟ್ಟು 5 ಜಿಲ್ಲೆಗಳಲ್ಲಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮಕ್ಕಾಗಿ ಪ್ರವಾಸ ಮಾಡಿದ್ದೇವೆ. ಒಟ್ಟು 9 ಸಮಾವೇಶಗಳನ್ನು ನಡೆಸಿದ್ದು, 40 ಮಂಡಲಗಳು ಭಾಗಿಯಾಗಿವೆ. ಈ ಕಾರ್ಯಕ್ರಮಗಳಲ್ಲಿ 3946 ಶಕ್ತಿ ಮತ್ತು ಮಹಾ ಶಕ್ತಿ ಕೇಂದ್ರದ ಪ್ರಮುಖರು ಭಾಗವಹಿಸಿದ್ದರು. ಒಟ್ಟಾರೆಯಾಗಿ 1210 ಕಿಲೋಮೀಟರ್ ದೂರವನ್ನು ಕ್ರಮಿಸಿದಂತಾಗಿದೆ ಎಂದು ಸಚಿವರಾದ ಸೋಮಶೇಖರ್ ಅವರು ಮಾಹಿತಿ ನೀಡಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರಿಗೆ ವರದಾನ
ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಜ್ಯ ಸರ್ಕಾರದಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ. ರೈತರಿಗೆ ನನ್ನ ಬೆಳೆ ನನ್ನ ಹಕ್ಕು ಎಂಬ ಅಂಶವನ್ನು ಮನದಟ್ಟು ಮಾಡಿಕೊಡಲಾಗಿದೆ. ಈ ಮೂಲಕ ರೈತ ತನ್ನ ಬೆಳೆಯನ್ನು ರಾಜ್ಯದ ಯಾವ ಮೂಲೆಯಲ್ಲಿ ಬೇಕಿದ್ದರೂ ಮಾರಾಟ ಮಾಡಬಹುದಾಗಿದೆ ಎಂಬುದನ್ನೂ ತಿಳಿಸಿಕೊಡಲಾಗಿದ್ದು, ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಸಚಿವರು ಮಾಹಿತಿ ನೀಡಿದರು.

ಮೈಸೂರು ಮೃಗಾಲಯಕ್ಕೆ 3.65 ಕೋಟಿ ದೇಣಿಗೆ
ಕೊರೋನಾ ಸಂದರ್ಭಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು ಮೃಗಾಲಯಕ್ಕೆ ಸಚಿವರು ಹಾಗೂ ನನ್ನ ಕ್ಷೇತ್ರದ ಮತದಾರರಿಂದ ದೇಣಿಗೆ ಸಂಗ್ರಹಿಸಿ 3.65 ಕೋಟಿ ರೂಪಾಯಿಯನ್ನು ಸ್ವಯಂಪ್ರೇರಿತರಾಗಿ ನೀಡಿದ್ದಾಗಿ ಸಚಿವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಆತ್ಮನಿರ್ಭರ ಅನುಷ್ಠಾನದಲ್ಲಿ ಕರ್ನಾಟಕ ಸಹಕಾರ ಇಲಾಖೆ ನಂ.1
ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಲಾಗಿರುವ ಆತ್ಮನಿರ್ಭರ ಯೋಜನೆಯಡಿ 20 ಲಕ್ಷ ಕೋಟಿಯಲ್ಲಿ ಕರ್ನಾಟಕದ ಪಾಲು 4750 ಕೋಟಿ ರೂಪಾಯಿಯಲ್ಲಿ ಮೊದಲನೇ ವರ್ಷದಲ್ಲಿ ಸುಮಾರು 635 ಕೋಟಿ ರೂಪಾಯಿ ಆರ್ಥಿಕ ನೆರವನ್ನು ಕರ್ನಾಟಕಕ್ಕೆ ಸಿಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈ ಮೂಲಕ ಸಾಲಸೌಲಭ್ಯವನ್ನು ವಿತರಿಸಿ ಆರ್ಥಿಕ ಬಲ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಅರುಣ್ ಸಿಂಗ್ ಅವರಿಗೆ ಸಚಿವರು ಮಾಹಿತಿ ನೀಡಿದರು.

ಹೀಗೆ ಆತ್ಮನಿರ್ಭರ ಯೋಜನೆಯಡಿ ರಾಜ್ಯದ ಪಾಲು ಕೇಳಿದ ರಾಜ್ಯಗಳಲ್ಲಿ ಕರ್ನಾಟಕವೇ ಮುಂದಿದೆ. ಈ ನಿಟ್ಟಿನಲ್ಲಿ ರಾಜ್ಯದ ಸಹಕಾರ ಇಲಾಖೆ ನಂ. 1 ಸ್ಥಾನದಲ್ಲಿದೆ ಎಂದು ಸಹ ಸಚಿವರು ತಿಳಿಸಿದರು.
ಸಹಕಾರ ಇಲಾಖೆ ಮೂಲಕ ಆಶಾ ಕಾರ್ಯಕರ್ತೆಯರಿಗೆ 12.75 ಕೋಟಿ ಪ್ರೋತ್ಸಾಹ ಧನ

ಕೋವಿಡ್ 19ರ ಸಂಕಷ್ಟದ ಕಾಲದಲ್ಲಿ ಲಾಭದಲ್ಲಿರುವ ಸಹಕಾರ ಸಂಸ್ಥೆಗಳಿಂದ ಹಾಗೂ ಎಪಿಎಂಸಿಗಳಿಂದ ದೇಣಿಗೆ ಸಂಗ್ರಹಿಸಿ 53 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದೇವೆ. ಇನ್ನು ಕೊರೋನಾ ವಾರಿಯರ್ಸ್ ಗಳಾದ 42540 ಆಶಾ ಕಾರ್ಯಕರ್ತೆಯರಿಗೂ ಸಹ ತಲಾ 3000 ದಂತೆ ಒಟ್ಟು 12.75 ಕೋಟಿ ರೂಪಾಯಿಯನ್ನು ವಿತರಣೆ ಮಾಡಿದ್ದೇವೆ. ಇದು ನೂರಕ್ಕೆ ನೂರರಷ್ಟು ಯಶಸ್ವಿಯಾಗಿದ್ದಕ್ಕೆ ಸಂತಸವಿದೆ ಎಂದು ಸಚಿವರು ತಿಳಿಸಿದರು.
ಇದಲ್ಲದೆ ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಸ್ವತಃ ನಾನೇ 27 ಜಿಲ್ಲೆಗಳಿಗೆ ಪ್ರವಾಸ ಮಾಡಿ ಸ್ವತಃ ಪರಿಶೀಲನೆ ನಡೆಸಿದ್ದೇನೆ. ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.

53 ಕೋಟಿ ರೂ. ದೇಣಿಗೆ
ಕೊರೋನಾ ಸಂಕಷ್ಟ ಕಾಲದಲ್ಲಿ ಸಹಕಾರ ಇಲಾಖೆ ವಿವಿಧ ಸಹಕಾರ ಸಂಘಗಳು ಹಾಗೂ ಎಪಿಎಂಸಿ ವತಿಯಿಂದ ಬರೋಬ್ಬರಿ 53 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.

4 ವಿಭಾಗ ಮೂಲಕ ಆರ್ಥಿಕ ಸ್ಪಂದನಕ್ಕೆ ಚಾಲನೆ
ಕೋವಿಡ್ ಸಂಕಷ್ಟ ಕಾಲದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಾಗರಿಕರಿಗೆ ಆರ್ಥಿಕ ಬಲ ತುಂಬುವ ನಿಟ್ಟಿನಲ್ಲಿ ಆತ್ಮನಿರ್ಭರ ಯೋಜನೆಯಡಿ ರಾಜ್ಯ ಸರ್ಕಾರ ಹಾಗೂ ಸಹಕಾರ ಇಲಾಖೆ ನೇತೃತ್ವದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಇತ್ತೀಚೆಗೆ ಮುಖ್ಯಮಂತ್ರಿಗಳು ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ಚಾಲನೆ ನೀಡಿದರು. ಇದರ ಮೂಲಕ 39,300 ಕೋಟಿ ರೂಪಾಯಿ ಸಾಲ ವಿತರಣೆ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಒಟ್ಟು 4 ವಿಭಾಗಗಳಲ್ಲಿ ಅನುಷ್ಠಾನಕ್ಕೆ ತರುತ್ತಿದ್ದು, ಬೆಂಗಳೂರಿನಲ್ಲಿ ಮೊದಲ ಕಾರ್ಯಕ್ರಮ, ಮೈಸೂರು ವಿಭಾಗದ ಕಾರ್ಯಕ್ರಮವನ್ನು ಮೈಸೂರಿನಲ್ಲಿ, ಕಲಬುರಗಿ ವಿಭಾಗದ ಮೂರನೇ ದಿನದ ಕಾರ್ಯಕ್ರಮವನ್ನು ಬೀದರ್ ನಲ್ಲಿ ಹಾಗೂ ಬೆಳಗಾವಿ ವಿಭಾಗದ ನಾಲ್ಕನೇ ದಿನದ ಕಾರ್ಯಕ್ರಮವನ್ನು ಧಾರವಾಡದಲ್ಲಿ ನಡೆಸಿ ಸಾಲ ಸೌಲಭ್ಯ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಯಾರಿಗೂ ಸಹ ಕೋವಿಡ್ ಸಂಕಷ್ಟದಿಂದ ಸಮಸ್ಯೆಯಾಗಬಾರದು. ಹೀಗಾಗಿ ಎಲ್ಲರಿಗೂ ಸಾಲ ಸಿಗುವಂತೆ ಅಪೆಕ್ಸ್ ಬ್ಯಾಂಕ್ ಹಾಗೂ 21 ಡಿಸಿಸಿ ಬ್ಯಾಂಕ್ ಗಳ ಮುಖಾಂತರ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ರೈತರಿಗೆ 11 ಸಾವಿರ ಕೋಟಿ ರೂ. ಸಾಲ
ಕಳೆದ ವರ್ಷ ರೈತರಿಗೆ 13500 ಕೋಟಿ ರೂಪಾಯಿ ಸಾಲ ನೀಡಲಾಗಿತ್ತು. ಈ ಬಾಡಿ ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದರೂ ಸಹ 24.5 ಲಕ್ಷ ರೈತರಿಗೆ 15300ಕೋಟಿ ರೂ. ಬೆಳೆ ಸಾಲವನ್ನು ನೀಡುವ ಗುರಿ ಹಾಕಿಕೊಂಡಿದ್ದು, ಈಗಾಗಲೇ 15.5 ಲಕ್ಷ ರೈತರಿಗೆ 11 ಸಾವಿರ ಕೋಟಿ ರೂಪಾಯಿ ಬೆಳೆ ಸಾಲ ನೀಡಿದ್ದೇವೆ ಶೀಘ್ರದಲ್ಲಿ ನಾವು ಹಾಕಿಕೊಂಡಿರುವ ಗುರಿಯನ್ನು ಮುಟ್ಟುತ್ತೇವೆ ಎಂದು ಸಚಿವರು ಮಾಹಿತಿ ನೀಡಿದರು.

ಕರ್ನಾಟಕ ಸಹ ಉಸ್ತುವಾರಿಯಾದ ಡಿ.ಕೆ. ಅರುಣಾ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ಹಾಗೂ ರವಿಕುಮಾರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

By admin