ಮೈಸೂರು: ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಪೂರ್ವಾಶ್ರಮದ ಮಾತೃಶ್ರೀ ಶಿವನಾಗಮ್ಮ ಸೋಮವಾರ ಬೆಳಿಗ್ಗೆ ಲಿಂಗೈಕ್ಯರಾಗಿದ್ದಾರೆ.
ಅನಾರೋಗ್ಯದಿಂದ ನಗರದ ಜೆಎಸ್ ಎಸ್ ಆಸ್ಪತ್ರೆಯಲ್ಲಿ ಕಳೆದ ಹದಿನೇಳು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸ್ವರ್ಗಸ್ಥರಾಗಿದ್ದಾರೆ. ಇವರು ವಕೀಲರಾಗಿದ್ದ ದಿವಂಗತ ಎಸ್.ಎಂ.ಪ್ರಭುಸ್ವಾಮಿ ಅವರ ಪತ್ನಿಯಾಗಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಷಡಕ್ಷರಸ್ವಾಮಿ, ಎಸ್.ಪಿ.ಮಂಜುನಾಥ್ ಉದಯ ಶಂಕರ್ ಸೇರಿದಂತೆ ನಾಲ್ವರು ಪುತ್ರರು ಮತ್ತು ಎಸ್.ಪಿ.ಶಶಿಕಲಾ, ಪ್ರೊ. ಎಸ್.ಪಿ.ಉಮಾದೇವಿ ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ವೀರಶೈವ ಸಮಾಜದ ವಿಧಿವಿಧಾನದಂತೆ ಸುತ್ತೂರಿನಲ್ಲಿ ನಡೆಯಲಿದೆ.
ಇವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ಮೃತರ ಆತ್ಮಕ್ಕೆ ಸದ್ಗತಿಯನ್ನು ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿಗಳು ಪ್ರಾರ್ಥಿಸುವುದರೊಂದಿಗೆ ಸಂತಾಪ ಸೂಚಿಸಿದ್ದಾರೆ.