ಚಾಮರಾಜನಗರ: ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಶಂಕರ್ ಅವರನ್ನು ದೊಡ್ಡಮೋಳೆ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.

ಯುವಕ ಅನುರಾಜ್ ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯೆಯನ್ನು ಕಲಿತರೆ ಅದಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ ಎನ್ನುವುದಕ್ಕೆ ಶಂಕರ್ ಅವರು ಉತ್ತಮ ನಿದರ್ಶನ. ಅವರ ಕಷ್ಟಪಟ್ಟು ಓದಿದ ಪರಿಶ್ರಮಕ್ಕೆ ಇಂದು ತಕ್ಕ ಪ್ರತಿಫಲ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪತ್ರಕರ್ತ ಸಿ.ಎಸ್.ನಾಗರಾಜು ಮಾತನಾಡಿ, ವಿದ್ಯೆ ಎನ್ನುವುದು ಕಬ್ಬಿಣದ ಕಡಲೆ ಇದ್ದಂತೆ ಯಾರಿಗೂ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಕಷ್ಟಪಟ್ಟು ಓದಿದಾಗ ಮಾತ್ರ ನಮಗೆ ಅದರ ಪ್ರತಿಫಲ ಸಿಗಲಿದೆ. ತಳ ಸಮುದಾಯದ ಎಲ್ಲ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಸರ್ಕಾರಿ ಕೆಲಸಕ್ಕೂ ಸ್ಪರ್ಧೆ ಇರಲಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚೆಚ್ಚು ಓದಿದಾಗ ಮಾತ್ರ ಉತ್ತಮ ಉದ್ಯೋಗಗಳು ದೊರಕಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಉನ್ನತ ಮಟ್ಟದ ಅಭ್ಯಾಸ ಮಾಡುವ ಮೂಲಕ ಉತ್ತಮ ಉದ್ಯೋಗಗಳನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಕೀಲ ರಂಗಸ್ವಾಮಿ, ಕುಮಾರ್, ಮುತ್ತುರಾಜ್, ಹಾಗೂ ಚಂದುಕಟ್ಟೆಮೋಳೆ ಯಜಮಾನರು ಹಾಗೂ ಗ್ರಾಮಸ್ಥರು ಇದ್ದರು.