ಮೈಸೂರು: ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ನಿಯಮಿತದಿಂದ ಸವಿತಾ ಸಮುದಾಯ ಹಾಗೂ ಅದರ ಉಪ ಜಾತಿಗಳಿಗೆ ೨೦೨೧-೨೨ನೇ ಸಾಲಿನಲ್ಲಿ ವಿವಿಧ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆಯಡಿ ಮೇಲೆ ತಿಳಿಸಿರುವ ಸಮಾಜದವರಿಗೆ ಕುಲಕಸುಬು, ಸಾಂಪ್ರದಾಯಿಕ ವೃತ್ತಿಗಳಾದ ಕ್ಷೌರಿಕ ವೃತ್ತಿ, ಬ್ಯೂಟಿಷಿಯನ್, ಡೋಲು, ವಾದ್ಯ ಮತ್ತು ಬ್ಯಾಂಡ್‌ಸೆಟ್ ಮುಂತಾದ ವೃತ್ತಿಗಳನ್ನು ಹಾಗೂ ಕೌಶಲ್ಯತೆ ಹೊಂದಿರುವ ವೃತ್ತಿಗಳನ್ನು ಕೈಗೊಳ್ಳಲು ಗರಿಷ್ಠ ರೂ.೨.೦೦ಲಕ್ಷಗಳವರೆಗೆ ಆರ್ಥಿಕ ನೆರವು, ಇದರಲ್ಲಿ ಗರಿಷ್ಠ ಶೇ.೧೫ರಷ್ಟು ಸಹಾಯಧನ, ಉಳಿಕೆ ಮೊತ್ತ ವಾರ್ಷಿಕ ಶೇ.೨ರ ಬಡ್ಡಿದರಲ್ಲಿ ಸಾಲ ದೊರಕುವುದು.
ಸ್ವಯಂ ಉದ್ಯೋಗ ಸಾಲ ಯೋಜನೆಯಡಿ ಸ್ವಯಂ ಉದ್ಯೋಗಕ್ಕೆ ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವಾವಲಯ ಮುಂತಾದ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಗರಿಷ್ಠ ರೂ.೨.೦೦ಲಕ್ಷಗಳವರೆಗೆ ಆರ್ಥಿಕ ನೆರವು, ಇದರಲ್ಲಿ ಗರಿಷ್ಠ ಶೇ.೧೫ರಷ್ಟು ಸಹಾಯಧನ, ಉಳಿಕೆ ಮೊತ್ತ ವಾರ್ಷಿಕ ಶೇ.೪ರ ಬಡ್ಡಿದರಲ್ಲಿ ಸಾಲ ದೊರಕುವುದು.
ಸೌಲಭ್ಯ ಪಡೆಯ ಬಯಸುವವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ೯೮,೦೦೦ ರೂ. ಮತ್ತು ಪಟ್ಟಣ ಪ್ರದೇಶದವರಿಗೆ ೧,೨೦,೦೦೦ ರೂ. ಒಳಗಿರಬೇಕು ಮತ್ತು ಅರ್ಜಿದಾರರ ವಯಸ್ಸು ೧೮ ರಿಂದ ೫೫ ವರ್ಷಗಳ ಮಿತಿಯಲ್ಲಿರಬೇಕು.
ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಈ ಮೇಲ್ಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಇಚ್ಚಿಸುವ ಸಮಾಜದವರು ಉಚಿತವಾಗಿ ಅರ್ಜಿ ನಮೂನೆಯನ್ನು ಜಿಲ್ಲಾ ಕಚೇರಿಯಲ್ಲಿ ಅಥವಾ ನಿಗಮದ ವೆಬ್‌ಸೈಟ್ ನಲ್ಲಿ ಪಡೆದು, ಅರ್ಜಿಯೊಂದಿಗೆ ಚಾಲ್ತಿಯಲ್ಲಿರುವ ಜಾತಿ ಆದಾಯ ಪ್ರಮಾಣ ಪತ್ರ, ಆಧಾರ್‌ಕಾರ್ಡ್ ಜೊಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತಾ ಪುಸ್ತಕದ ಪ್ರತಿ, ಪೋಟೋ ಮತ್ತು ಇತರೆ ದಾಖಲಾತಿಗಳೊಂದಿಗೆ ಭರ್ತಿ ಮಾಡಿ ಅರ್ಜಿಯನ್ನು ಮೈಸೂರು ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ೨೦೨೨ನೇ ಜನವರಿ ೧೦ ರೊಳಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ ಸಂಖ್ಯೆ: ೦೮೦-೨೨೩೭೪೮೩೨ ಹಾಗೂ ೦೮೦-೨೯೫೦೬೧೭೪-೫ ಸಂಪರ್ಕಿಸಲು ಅಥವಾ ನಿಗಮದ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ: ೦೮೨೧-೨೩೪೧೧೯೪ ನ್ನು ಸಂಪರ್ಕಿಸುವಂತೆ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
