ಚಾಮರಾಜನಗರ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ಪ್ರತಿ ಮಾಹೆ ನಿಗದಿಪಡಿಸಲಾಗಿರುವ ವೇತನವನ್ನು ನಿಗದಿತ ಅವಧಿಯಲ್ಲಿಯೇ ಪಾವತಿಸುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಕಟ್ಟುನಿಟ್ಟಿನ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಅನುಷ್ಟಾನದ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಗ್ರಾಮ ಪಂಚಾಯಿತಿಗಳು ಹಾಗೂ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ಪ್ರತಿ ಮಾಹೆ ವೇತನ ಪಾವತಿಯಾಗದೇ ಸಫಾಯಿ ಕರ್ಮಚಾರಿಗಳು ತೊಂದರೆಗೀಡಾಗಿರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಯಾವುದೇ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಯಿತಿಗಳು ವೇತನ ಪಾವತಿಯಲ್ಲಿ ವಿಳಂಭ ಧೋರಣೆ ಅನುಸರಿಸಬಾರದು. ಇದನ್ನು ಸಹಿಸಲಾಗುವುದಿಲ್ಲ ಎಂದು ತಿಳಿಸಿದರು.
ವಿದ್ಯಾರ್ಥಿನಿಲಯಗಳಲ್ಲಿ ಕಾರ್ಯನಿರ್ವಹಿಸುವ ಸಫಾಯಿ ಕರ್ಮಚಾರಿಗಳಿಗೆ ನಿಗದಿತ ಅವಧಿಯಲ್ಲಿ ಅಗತ್ಯ ವೇತನ ಪಾವತಿಯಾಗಬೇಕು. ಪಾವತಿಯಾಗುವ ವೇತನದಿಂದ ಕಟಾವಣೆಯಾಗುವ ಇ.ಎಸ್.ಐ ಮತ್ತು ಪಿ.ಎಫ್ ಸಂಬಂಧಿಸಿದವರ ಖಾತೆಗೆ ಕ್ರಮಬದ್ದವಾಗಿ ಜಮೆಯಾಗುತ್ತಿದೆಯೇ ಎಂದು ಅಧಿಕಾರಿಗಳು ಖಾತರಿಪಡಿಸಿಕೊಳ್ಳಬೇಕು. ಅಲ್ಲದೇ ಸಫಾಯಿ ಕರ್ಮಚಾರಿಗಳು ಬ್ಯಾಂಕ್‌ಗಳಿಂದ ಸಾಲಸೌಲಭ್ಯ ಪಡೆಯಲು ಅನುಕೂಲವಾಗುವಂತೆ ವೇತನ ಪ್ರಮಾಣಪತ್ರ ವಿತರಿಸಬೇಕು ಎಂದರು.
ಗೃಹಭಾಗ್ಯ ಯೋಜನೆಯಡಿ ಚಾಮರಾಜನಗರದಲ್ಲಿ ವಸತಿ ವ್ಯವಸ್ಥೆಗಾಗಿ ವಿಶೇಷ ನೇಮಕಾತಿ ಹೊಂದಿರುವ ೧೧ ಮಂದಿ ಪೌರಕಾರ್ಮಿಕರನ್ನು ಗುರುತಿಸಲಾಗಿದ್ದು, ಈ ಸಂಬಂಧ ನಿವೇಶನ ಇಲ್ಲದವರಿಗೆ ಮೊದಲು ಸ್ಥಳ ಒದಗಿಸಿ ಹಕ್ಕುಪತ್ರ ವಿತರಿಸಿ ನಂತರ ಮನೆ ನೀಡಬೇಕು. ನಿವೇಶನ ಇರುವವರಿಗೆ ಮನೆ ನಿರ್ಮಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಈ ಬಗ್ಗೆ ೧೫ ದಿನದೊಳಗೆ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಮೆಶ್ ಅವರು ನಿರ್ದೇಶನ ನೀಡಿದರು.
ಇದೇ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗ್ರಾಯತ್ರಿ ಅವರು ಮೊದಲು ಜಾಗದ ಸರ್ವೆ ಮಾಡಬೇಕು. ಸರ್ವೇಯರ್ ಮೂಲಕ ಸ್ಥಳವನ್ನು ಗುರುತಿಸಿ ಅದು ಗ್ರಾಮಠಾಣಾ ವ್ಯಾಪ್ತಿಗೆ ಬರುವಂತಿದ್ದರೆ ಗ್ರಾಮಸಭೆಯಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು. ಹಕ್ಕುಪತ್ರ ವಿತರಣೆ ನಂತರ ಮನೆ ನಿರ್ಮಾಣಕ್ಕಾಗಿ ಪ್ರಸ್ತಾವನೆ ಕಳುಹಿಸುವಂತೆ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಅನುಷ್ಟಾನದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ ಶಂಕರ್, ಪುಷ್ಪಲತ, ಭಾಗ್ಯ, ಜಿಲ್ಲಾ ಸಮಾಜ ಕಲ್ಯಾನಧಿಕಾರಿ ಮಲ್ಲಿಕಾರ್ಜುನ, ನಗರಸಭೆ ಪೌರಾಯುಕ್ತ ರಾಮದಾಸ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಸುಧಾ, ಎಲ್ಲಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲಾ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
