ಚಾಮರಾಜನಗರ: ಹನೂರು ವಿಧಾನಸಭಾ ಕ್ಷೇತ್ರದ ೯೮ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ೧೯೨ ಕೋಟಿ ರೂ. ವೆಚ್ಚದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ವಸತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ವೀಕ್ಷಣೆ ಮಾಡಿದರು.
ಇದೇ ಡಿಸೆಂಬರ್ ೧೨ರಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹನೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಶಾಸಕರಾದ ಆರ್. ನರೇಂದ್ರ ಅವರೊಂದಿಗೆ ಭೇಟಿ ನೀಡಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಪರಿಶೀಲಿಸಿದರು.
ಪಾಳ್ಯ ಗ್ರಾಮದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಸಚಿವರು ಶುದ್ಧ ನೀರಿನ ಸಂಗ್ರಹ ಘಟಕ, ಶುದ್ಧೀಕರಣ ಕಾರ್ಯಗಾರ, ಪಂಪ್‌ಹೌಸ್ ಸೇರಿದಂತೆ ಇತರೆ ವಿಭಾಗಗಳನ್ನು ವೀಕ್ಷಿಸಿದರು. ಮಳೆಗಾಲದಲ್ಲಿಯೂ ಸಹಾ ಶುದ್ಧ ಕುಡಿಯುವ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದ ಉಸ್ತುವಾರಿ ಸಚಿವರು ಪೂರ್ಣ ಕಾಮಗಾರಿಗೆ ಬಾಕಿ ಇರುವ ಕೆಲಸಗಳನ್ನು ತ್ವರಿತವಾಗಿ ಮುಗಿಸುವಂತೆ ನಿರ್ದೇಶನ ನೀಡಿದರು. ಘಟಕದ ಆವರಣವನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು. ಗಿಡಗಳನ್ನು ಬೆಳಸಿ ಉತ್ತಮ ಪರಿಸರ ಇರುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು. ಇದೇ ವೇಳೆ ಶುದ್ಧೀಕರಣ ಘಟಕದ ಆವರಣದಲ್ಲಿ ಸಚಿವರಾದ ವಿ. ಸೋಮಣ್ಣ ಹಾಗೂ ಶಾಸಕರಾದ ಆರ್. ನರೇಂದ್ರ ಗಿಡನೆಟ್ಟು ನೀರೆದರು. ಬಳಿಕ ಸರಗೂರಿಗೆ ತೆರಳಿ ಕಾವೇರಿ ನದಿ ದಂಡೆಯ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ಜಾಕ್ವೆಲ್ ಮತ್ತು ಪಂಪ್ ಹೌಸ್ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಕೆಲ ಅಗತ್ಯ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.
ಜಿಲ್ಲಾಧಿಕಾರಿಗಳಾದ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಗಂಗಾಧರಯ್ಯ, ಉಪ ವಿಭಾಗೀಯಾಧಿಕಾರಿ ಗೀತಾ ಹುಡೇದಾ ಇತರೆ ಅಧಿಕಾರಿಗಳು ಇದ್ದರು.
