ನಂಜನಗೂಡು: ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ಸನ್ನಿಧಿಯ ಮುಡಿ ವಿಚಾರದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ತಿ.ನರಸೀಪುರ ಸಿವಿಲ್ ನ್ಯಾಯಾಲಯವು ದೇವಾಲಯದ ಪರವಾಗಿ ಐತಿಹಾಸಿಕ ತೀರ್ಪು ನೀಡಿದ್ದು, ಇದರೊಂದಿಗೆ ಕಳೆದ ಇಪ್ಪತೈದು ವರ್ಷಗಳಿಂದ ನಡೆಯುತ್ತಿದ್ದ ವ್ಯಾಜ್ಯಕ್ಕೆ ತೆರೆ ಬಿದ್ದಂತಾಗಿದೆ.
ಶ್ರೀಕಂಠೇಶ್ವರ ದೇವಾಲಯ ಸನ್ನಿಧಿಯ ಮುಡಿ ಹಕ್ಕು ಮತ್ತು ಕೂದಲು ನಯನಜಕ್ಷತ್ರಿಯ ಸಂಘಕ್ಕೆ ಸೇರಬೇಕೆಂದು ಸಂಘವು ಕಳೆದ ಇಪ್ಪತೈದು ವರ್ಷಗಳ ಹಿಂದೆ ತಿ.ನರಸೀಪುರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು ದಾವೆಯನ್ನು ವಜಾ ಮಾಡಿ ಮುಡಿ ಮತ್ತು ಕೂದಲಿನ ಸಂಪೂರ್ಣ ಹಕ್ಕು ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ್ದಾಗಿ ಪ್ರತಿಪಾದಿಸಿದೆಯಲ್ಲದೆ, ಈ ಸಂಬಂಧ ನಯನಜಕ್ಷತ್ರಿಯ ಸಂಘವು ತಮಗೆ ಸೇರಿದ್ದಾಗಿ ಪ್ರತಿಪಾದಿಸಿರುವುದನ್ನು ಸರಾಸಗಟಾಗಿ ತಳ್ಳಿಹಾಕಿ ತೀರ್ಪು ನೀಡಿದೆ.
ಆದರೆ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ನಯನಜಕ್ಷತ್ರಿಯ ಸಂಘಕ್ಕೆ ಮುಡಿ ತೆಗೆಯಲು ಯಾವುದೇ ನಿರ್ಬಂಧ ಹೇರದೆ ನಂಜನಗೂಡಿನ ಎಲ್ಲ ನಯನಜಕ್ಷತ್ರಿಯ ಜನಾಂಗದವರು ಮುಡಿ ಕೆಲಸವನ್ನು ಮಾಡಲು ಅವಕಾಶವಿರುವುದಾಗಿ ಆದೇಶಿಸಲಾಗಿದೆ ಎಂದು ಶ್ರೀಕಂಠೇಶ್ವರ ದೇವಸ್ಥಾನ ಕಾರ್ಯ ನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.