ಚಾಮರಾಜನಗರ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಎಂಟು ಮಂದಿ ವಿಶೇಷಚೇತನರಿಗೆ ತ್ರಿಚಕ್ರ ವಾಹನವನ್ನು ಶಾಸಕರಾದ ಎನ್. ಮಹೇಶ್ ಅವರು ಇಂದು ವಿತರಿಸಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಂದು ಶಾಸಕರಾದ ಎನ್. ಮಹೇಶ್ ಅವರು ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಖರೀದಿಸಿರುವ ೮ ತ್ರಿಚಕ್ರ ವಾಹನಗಳ ಕೀ ಗಳನ್ನು ವಿಶೇಷಚೇತನರಿಗೆ ಹಸ್ತಾಂತರಿಸಿದರು.
ಇದೇ ವೇಳೆ ಮಾತನಾಡಿದ ಶಾಸಕರಾದ ಎನ್. ಮಹೇಶ್ ಅವರು ೨೦೨೧-೨೨ನೇ ಸಾಲಿನ ತಮ್ಮ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ವಿಶೇಷಚೇತನರಿಗೆ ವಾಹನ ಸೌಲಭ್ಯ ಒದಗಿಸುವ ಸಲುವಾಗಿ ೧೦ ಲಕ್ಷ ರೂ. ನಿಗದಿಪಡಿಸಿಕೊಳ್ಳಲಾಗಿತ್ತು. ಈ ಪೈಕಿ ೮ ಮಂದಿ ವಿಶೇಷ ಚೇತನರಿಗೆ ವಾಹನ ಖರೀದಿಸಿ ವಿತರಿಸಲಾಗಿದೆ. ಪ್ರತಿ ವಾಹನಕ್ಕೆ ೭೦,೩೮೪ ರೂ. ವೆಚ್ಚವಾಗಿದೆ ಎಂದರು.
ಒಟ್ಟಾರೆ ೧೦ಲಕ್ಷ ರೂ. ಅನುದಾನದಲ್ಲಿ ೮ ವಾಹನಗಳ ಖರೀದಿಗೆ ೫.೬೫ ಲಕ್ಷ ರೂ. ವೆಚ್ಚವಾಗಿದೆ. ಇನ್ನೂ ೪.೩೫ ಲಕ್ಷ ರೂ. ಉಳಿದಿದೆ. ಈ ಹಣದಲ್ಲಿ ಇನ್ನೂ ೬ ಮಂದಿ ವಿಶೇಷಚೇತನರಿಗೆ ವಾಹನ ಸೌಲಭ್ಯ ವಿತರಿಸಲು ಅವಕಾಶವಿದೆ. ಹೀಗಾಗಿ ತಮ್ಮ ಕ್ಷೇತ್ರದ ಕೊಳ್ಳೇಗಾಲ, ಸಂತೇಮರಹಳ್ಳಿ ಹಾಗೂ ಯಳಂದೂರು ಭಾಗದ ಅರ್ಹ ವಿಶೇಷಚೇತನರನ್ನು ಗುರುತಿಸಿ ಒಂದು ವಾರದೊಳಗೆ ವಾಹನ ಖರೀದಿಸಿ ವಿತರಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ವಿಶೇಷ ಚೇತನರಿಗೆ ನೆರವಾಗುವುದು ಅತ್ಯಂತ ಮಾನವೀಯ ಕಾರ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿಶೇಷ ಚೇತನರು ವಾಹನ ಕೋರಿ ಮನವಿ ಸಲ್ಲಿಸಿದ್ದರು. ಅವರಿಗೆ ಸೌಲಭ್ಯ ನೀಡಲಾಗಿದೆ. ಇಂದು ವಾಹನ ಪಡೆದಿರುವ ವಿಶೇಷಚೇತನರ ಕುಟುಂಬಕ್ಕೆ ಶುಭ ಹಾರೈಸುವುದಾಗಿ ಶಾಸಕರಾದ ಎನ್. ಮಹೇಶ್ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸರಸ್ವತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೆಶಕರಾದ ಗೀತಾಲಕ್ಷ್ಮಿ, ಪ್ರಭಾರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದ, ಇತರರು ಹಾಜರಿದ್ದರು.