ಮೈಸೂರು: ಕೊರೊನಾ ಕಾಲದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಗೌಸಿಯಾ ನಗರದ ೫೫ ವರ್ಷದ ಸೋಂಕಿತರೊಬ್ಬರು ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಯ ವೇಳೆ ಆಸ್ಪತ್ರೆಗೆ ರೋಗಿ ಬಂದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡ ರೋಗಿ ಕಡೆಯವರು ಆಸ್ಪತ್ರೆಯ ಇಬ್ಬರು ವೈದ್ಯರು, ಇಬ್ಬರು ನರ್ಸ್, ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು ಕೊರೊನಾ ಕಾಲದಲ್ಲಿ ವೈದ್ಯರು, ನರ್ಸ್ ಗಳು ಕೆಲಸ ಮಾಡುತ್ತಿದ್ದು, ಅವರ ಸೇವೆಯನ್ನು ನಾವು ನೀವೆಲ್ಲ ಶ್ಲಾಘಿಸಬೇಕಾಗಿದೆ. ಇನ್ಮುಂದೆ ಕೆ.ಆರ್.ಆಸ್ಪತ್ರೆಗೆ ಯಾರು ಬೇಕಾದರೂ ಹೋಗಬಹುದು, ಯಾರು ಬೇಕಾದರೂ ಬರಬಹುದು ಎನ್ನುವ ಪರಿಸ್ಥಿತಿಗೆ ಕಡಿವಾಣ ಹಾಕಲಾಗುವುದು ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಹೆಚ್ಚುವರಿ ಡೀನ್ ಅವರನ್ನು ನೇಮಕ ಮಾಡಲಾಗುವುದು. ಅಲ್ಲದೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿನ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇಲ್ಲ. ರೆಮೆಡಿಸಿವಿರ್ ಇಂಜೆಕ್ಷನ್ ಕೂಡ ಸರ್ಕಾರಿ ಆಸ್ಪತ್ರೆಗೆ ಬರುತ್ತಿದೆ. ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.