ಚಾಮರಾಜನಗರ: ಮುಂಬರಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣಾ ವೇಳೆ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಅನುಷ್ಠಾನ ಮಾಡುವ ಸಂಬಂಧ ಚಾಮರಾಜನಗರ ಜಿಲ್ಲೆಯ ಗಡಿ ಭಾಗಗಳಲ್ಲಿ ಹೊಂದಿಕೊಂಡಿರುವ ಹೊರ ರಾಜ್ಯ ಜಿಲ್ಲೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ವರ್ಚ್ಯುವಲ್ ಮೂಲಕ ಸಭೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚಾಮರಾಜನಗರ ಜಿಲ್ಲೆಯ ಅಧಿಕಾರಿಗಳು ಹಾಗೂ ಗಡಿ ವ್ಯಾಪ್ತಿಯಲ್ಲಿ ಬರುವ ಅಂತರರಾಜ್ಯ ಜಿಲ್ಲೆಗಳ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ವರ್ಚ್ಯುವಲ್ ಮೂಲಕ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಬರಲಿರುವ ವಿಧಾನಸಭಾ ಚುನಾವಣೆಯನ್ನು ನ್ಯಾಯಸಮ್ಮತ, ಪಾರದರ್ಶಕ ಹಾಗೂ ಶಾತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಲು ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ಕೈ ಜೋಡಿಸುವಂತೆ ತಿಳಿಸಿದರು.
ಚಾಮರಾಜನಗರ ಜಿಲ್ಲೆಯು ತಮಿಳುನಾಡು ಹಾಗೂ ಕೇರಳ ರಾಜ್ಯಗಳೊಂದಿಗೆ ಗಡಿ ಪ್ರದೇಶಗಳನ್ನು ಹೊಂದಿದೆ. ಗಡಿ ಭಾಗದಲ್ಲಿ ೧೧ ಚೆಕ್‌ಪೋಸ್ಟ್‌ಗಳನ್ನು ಗುರುತಿಸಲಾಗಿದ್ದು, ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಗಡಿ ಭಾಗಗಳ ಚೆಕ್‌ಪೋಸ್ಟ್‌ಗಳಲ್ಲಿ ರಾಜ್ಯಕ್ಕೆ ಬರುವ ಹಾಗೂ ಇಲ್ಲಿಂದ ಹೊರ ಹೋಗುವ ವಾಹನಗಳ ಮೇಲೆ ನಿಗಾ ಇಡಬೇಕಾಗುತ್ತದೆ. ಇದಕ್ಕಾಗಿ ಗಡಿ ಭಾಗದ ರಾಜ್ಯಗಳ ಗಡಿ ಜಿಲ್ಲೆಗಳಿಂದಲೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚಿಸಿದರು.
ಚೆಕ್‌ಪೋಸ್ಟ್‌ಗಳಲ್ಲಿ ೨೪*೭ ಅವಧಿಯಲ್ಲಿಯೂ ಕಾರ್ಯ ನಿರ್ವಹಿಸಬೇಕಾಗುತ್ತದೆ. ಜಿಲ್ಲೆಯಿಂದ ನಿಯೋಜಿಸಲಾದ ನೋಡಲ್ ಅಧಿಕಾರಿಗಳೊಂದಿಗೆ ಹೊರ ಜಿಲ್ಲೆಗಳ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ಕೈಗೊಳ್ಳಬೇಕಾಗುತ್ತದೆ. ನೇಮಕ ಮಾಡಲಾಗುವ ಹೊರ ಜಿಲ್ಲೆಗಳ ಅಧಿಕಾರಿಗಳ ಮಾಹಿತಿಯನ್ನು ಜಿಲ್ಲಾಡಳಿತ ಪೊಲೀಸ್, ಅಬಕಾರಿ ಇಲಾಖೆಗಳ ಕಚೇರಿಗೆ ಸಲ್ಲಿಸಬೇಕು ಎಂದರು.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು, ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕಾಗುತ್ತದೆ. ಮತದಾನದ ಹಿಂದಿನ ೭೨ ಗಂಟೆಗಳ ಅವಧಿಯಲ್ಲಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರತ ಅಧಿಕಾರಿಗಳು ಅತ್ಯಂತ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಸಂಬಂಧ ಎಲ್ಲಾ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ಉಪವಿಭಾಗಾಧಿಕಾರಿ ಗೀತಾ ಹುಡೇದ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಅಬಕಾರಿ ಉಪ ಆಯುಕ್ತರಾದ ನಾಗಶಯನ, ತಹಶೀಲ್ದಾರರಾದ ರವಿಶಂಕರ್, ಮಂಜುಳಾ, ತಮಿಳುನಾಡು ರಾಜ್ಯದ ನೀಲಗಿರಿ, ಸತ್ಯಮಂಗಲಂ, ಕೃಷ್ಣಗಿರಿ, ಈರೋಡ್, ಧರ್ಮಪುರಿ, ಕೇರಳ ರಾಜ್ಯದ ವೈನಾಡು ಜಿಲ್ಲೆಯ ಪೊಲೀಸ್, ಅಬಕಾರಿ, ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.