ಚಾಮರಾಜನಗರ: ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗಾಗಿ ನೇಮಕವಾಗಿರುವ ಮಾಸ್ಟರ್ ಟ್ರೈನರ್ ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಇಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರ ಸಮ್ಮುಖದಲ್ಲಿ ತರಬೇತಿ ನಡೆಯಿತು.
ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ನಡೆದ ತರಬೇತಿಯಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ನಿಯೋಜಿತರಾಗಿರುವ ಸೆಕ್ಟರ್ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೈನರ್ ಗಳು ಚುನಾವಣಾ ಸಂದರ್ಭದಲ್ಲಿ ನಿರ್ವಹಿಸಬೇಕಿರುವ ಕರ್ತವ್ಯಗಳ ಕುರಿತು ವಿವರವಾಗಿ ಮನವರಿಕೆ ಮಾಡಿಕೊಡಲಾಯಿತು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮಾತನಾಡಿ ವಿಧಾನಸಭಾ ಕ್ಷೇತ್ರವಾರು ನೇಮಕವಾಗಿರುವ ಮಾಸ್ಟರ್ ಟ್ರೈನರ್ ಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ನೇಮಕವಾಗಿರುವ ಪಿಆರ್‌ಒ ಸಹಾಯಕ ಅಧಿಕಾರಿಗಳಿಗೆ ಮತದಾನದಂದು ಕೈಗೊಳ್ಳಬೇಕಿರುವ ಕರ್ತವ್ಯಗಳ ಬಗ್ಗೆ ಪರಿಪೂರ್ಣವಾಗಿ ತರಬೇತಿ ನೀಡಬೇಕು. ತರಬೇತಿ ವೇಳೆ ಯಾವುದೇ ಗೊಂದಲಗಳಿದ್ದರೂ ಪರಿಹರಿಸಬೇಕು ಎಂದರು.
ಸೆಕ್ಟರ್ ಅಧಿಕಾರಿಗಳು ಆಯಾ ಕಾರ್ಯ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗ ನಿರ್ದೇಶನದ ಅನುಸಾರ ಸೂಚಿಸಲಾಗಿರುವ ಕರ್ತವ್ಯ ಗಳನ್ನು ನಿರ್ವಹಿಸಬೇಕು. ಯಾವುದೇ ಲೋಪಗಳಿಗೆ ಅವಕಾಶವಾಗದ ಹಾಗೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರು ಹಾಗೂ ಚುನಾವಣಾ ಸಂಬಂಧಿ ನೇಮಕವಾಗಿರುವ ತರಬೇತಿ ನಿರ್ವಹಣೆಯ ಜಿಲ್ಲಾ ನೋಡಲ್ ಅದಿಕಾರಿ ಲಿಂಗರಾಜ ಅರಸ್, ರಾಜ್ಯಮಟ್ಟದ ಮಾಸ್ಟರ್ ಟ್ರೈನರ್ರ ಗಳಾದ ಗುರುಮಲ್ಲೇಶ್, ಹೇಮಂತ್ ಕುಮಾರ್ ಅಧಿಕಾರಿಗಳಿಗೆ ತರಬೇತಿ ನೀಡಿದರು.
