ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದಲ್ಲಿ ಆರಂಭಿಸಿರುವ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳ ಜಾಗೃತಿ ಮತ್ತು ಪ್ರಾತ್ಯಾಕ್ಷಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಇಂದು ಚಾಲನೆ ನೀಡಿದರು.
ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತ್ತು ವಿವಿ ಪ್ಯಾಟ್ ಗಳು ಹೇಗೆ ಕಾರ್ಯನಿರ್ವಹಿಸಲಿವೆ ಹಾಗೂ ಅದರ ಬಳಕೆ ಹೇಗೆ ಮಾಡಬೇಕೆಂಬ ಜಾಗೃತಿ ಮೂಡಿಸಿ, ಮತದಾರರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಕೇಂದ್ರವನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಜಿಲ್ಲಾಧಿಕಾರಿಯವರೇ ಖುದ್ದು ನಿಂತು ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್ ಕಾರ್ಯನಿರ್ವಹಣೆ ಬಗ್ಗೆ ತಿಳಿಸಿಕೊಟ್ಟರು. ಬಳಕೆ ಮಾಡುವ ವಿಧಾನದ ಬಗ್ಗೆಯೂ ವಿವರಿಸಿದರು.
ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಚಲಾವಣೆ ಮಾಡುವುದು ಹಾಗೂ ಯಾವ ಅಭ್ಯರ್ಥಿಗೆ ಮತ ಚಲಾಯಿಸಲಾಗಿದೆ? ಅಭ್ಯರ್ಥಿಯ ಚಿಹ್ನೆ, ಮತ್ತಿತ್ತರ ವಿವರಗಳು ಸರಿಯಾಗಿ ಇವೆಯೇ ಎಂಬ ಬಗ್ಗೆ ವಿವಿ ಪ್ಯಾಟ್‌ನಲ್ಲಿ ಖಾತರಿಪಡಿಸಿಕೊಳ್ಳುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ವಿದ್ಯುನ್ಮಾನ ಮತಯಂತ್ರ ಹೇಗೆ ಕಾರ್ಯ ನಿರ್ವಹಿಸಲಿದೆ, ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್, ಕಂಟ್ರೋಲ್ ಯೂನಿಟ್ ಎಂದರೆ ಏನು ಎಂಬ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಮತದಾರರು ಯಾರಿಗೆ ಮತ ಚಲಾಯಿಸಿದ್ದಾರೆ? ಅವರು ಮತ ಚಲಾಯಿಸಿದ ಅಭ್ಯರ್ಥಿಯ ಹೆಸರು, ಚಿಹ್ನೆ ವಿವರಗಳು ಸರಿಯಾಗಿ ಇದೆಯೇ ಎಂಬ ಬಗ್ಗೆ ವಿವಿ ಪ್ಯಾಟ್ ನಲ್ಲಿ ಖಾತರಿಪಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳಲ್ಲಿ ತಂಡಗಳನ್ನು ನಿಯೋಜಿಸಲಾಗಿದೆ ಎಂದರು.
ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್ ಯಾವ ರೀತಿ ಕೆಲಸ ಮಾಡಲಿದೆ ಎಂಬ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವ ಸಲುವಾಗಿ ಆಯೋಜಿಸಲಾಗುತ್ತಿರುವ ಜಾಗೃತಿ ಕಾರ್ಯಕ್ರಮವನ್ನು ಸದುಪಯೋಪಡಿಸಿಕೊಳ್ಳಬೇಕು. ಚುನಾವಣೆಯಲ್ಲಿ ಮತದಾರರು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭತ್ವವನ್ನು ಶಕ್ತಿಯುತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಗೀತಾಹುಡೇದ ಇನ್ನಿತರ ಅದಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
