ಚಾಮರಾಜನಗರ:ಜಿಲ್ಲಾ ಪಂಚಾಯತ್ ಮತ್ತು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿಯ ಗುಣಮಟ್ಟ ಹೆಚ್ಚಿಸುವ ಶೈಕ್ಷಣಿಕ ಕಾರ್ಯಾಗಾರ ಇಂದು ನಗರದಲ್ಲಿ ನಡೆಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಗಾರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಕರ ಪಾತ್ರ ಬಹುಮುಖ್ಯ. ವಿದ್ಯಾರ್ಥಿಗಳ ಗ್ರಹಿಕೆ, ಕಲಿಕೆ ಗುರುತಿಸಬೇಕು. ಯಾವ ವಿಷಯದಲ್ಲಿ ವಿದ್ಯಾರ್ಥಿಗಳು ಹಿಂದೆ ಇದ್ದಾರೆ? ಯಾವ ವಿಷಯ ಅವರಿಗೆ ಕಷ್ಟವಾಗುತಿದೆ ಎಂದು ಶಿಕ್ಷಕರು ಅರಿಯಬೇಕು. ಅಂತಹ ವಿಷಯಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಜಿಲ್ಲೆಯಲ್ಲಿ ಈ ವರ್ಷ ಉತ್ತಮವಾದ ಫಲಿತಾಂಶ ಬರಬೇಕು. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರ ಉತ್ತೇಜನ ಇರಬೇಕು. ಪಂಚಾಯಿತಿ ಮಟ್ಟದ ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿ.ಪಂ. ಸಿಇಒ ಕೆ.ಎಂ.ಗಾಯಿತ್ರಿ ಅವರು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಅವರು ಮಾತನಾಡಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಅಧ್ಯಯನ ಸಂಬಂಧ ಗುಂಪು ಚರ್ಚೆಗಳಲ್ಲಿ ಭಾಗಿಯಾಗಬೇಕು. ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಶ್ರಮಿಸಬೇಕು. ಈ ಬಾರಿ ಉತ್ತಮ ಫಲಿತಾಂಶ ನಮ್ಮದಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್, ವಿಷಯ ಪರೀವೀಕ್ಷಕರಾದ ಚಾಣಾಕ್ಷರಾವ್, ಶಿಕ್ಷಕರ ಸಂಘಟನೆಯ ಪ್ರತಿನಿಧಿಗಳಾದ ಎಂ. ವೀರಭದ್ರಸ್ವಾಮಿ, ಎಂ. ಕಿರಣ್‌ರಾಜ್, ವೆಂಕಟೇಶ್, ರಾಜಮ್ಮ, ಮಲ್ಲೇಶ್, ಶಿವಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
