ಚಾಮರಾಜನಗರ: ಮತದಾನದ ಮಹತ್ವ ಸಾರುವ ಸಲುವಾಗಿ ನಗರದಲ್ಲಿಂದು ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ನಡೆಸಿದ ಮೊಂಬತ್ತಿ ಜಾಥಾ ವಿಶೇಷ ಗಮನ ಸೆಳೆಯಿತು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ ವಿದ್ಯಾರ್ಥಿಗಳು, ಅಧಿಕಾರಿಗಳು, ಸಿಬ್ಬಂದಿ ಮೊಂಬತ್ತಿ ಜಾಥಾದಲ್ಲಿ ಪಾಲ್ಗೊಂಡು ಮತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಎಸ್. ಪೂವಿತಾ ಅವರು ಮೊಂಬತ್ತಿ ಜಾಥಾಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್. ಪೂವಿತಾ ಅವರು ಮತದಾನದ ಜಾಗೃತಿಗಾಗಿ ನಾವು ಸಾಕಷ್ಟು ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದ್ದೇವೆ. ಪ್ರತಿಯೊಬ್ಬರೂ ಮತ ಹಾಕುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಇದರ ಅರಿವಿಗಾಗಿ ಇಂದು ವಿದ್ಯಾರ್ಥಿಗಳೊಂದಿಗೆ ಅಧಿಕಾರಿಗಳೂ ಸಹ ಸೇರಿಕೊಂಡು ಮೊಂಬತ್ತಿ ಜಾಥಾ ನಡೆಸುತ್ತಿದ್ದೇವೆ ಎಂದರು.
ಜಿಲ್ಲಾಡಳಿತ ಭವನದಿಂದ ಆರಂಭಗೊಂಡ ಮೊಂಬತ್ತಿ ಜಾಥಾ ಬಿ. ರಾಚಯ್ಯ ಜೋಡಿ ರಸ್ತೆ, ಜೈ ಭುವನೇಶ್ವರಿ ವೃತ್ತದ ಮೂಲಕ ಸಾಗಿ ಚಾಮರಾಜೇಶ್ವರ ದೇವಾಲಯ ಬಳಿ ಮುಕ್ತಾಯವಾಯಿತು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸರಸ್ವತಿ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುನಾಥ ಪ್ರಸನ್ನ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಶಿಕ್ಷಣಾಧಿಕಾರಿ ಮಂಜುನಾಥ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪೂರ್ಣಿಮಾ, ಶ್ರೀಕಂಠರಾಜೇ ಅರಸ್, ಮಹೇಶ್, ಉಮೇಶ್, ಇನ್ನಿತರ ಅಧಿಕಾರಿಗಳು ಜಾಥಾ ಇದ್ದರು.