ಮೈಸೂರು: ಮೈಸೂರ್ ಸೈನ್ಸ್ ಫೌಂಡೇಷನ್(ರಿ) ಕೋವಿಡ್ ಕಾರಣದಿಂದಾಗಿ ಶಾಲೆಯಿಂದ ಮತ್ತು ಕಲಿಕೆಯಿಂದ ವಿದ್ಯಾರ್ಥಿಗಳೂ ವಿಮುಖವಾಗುತ್ತಿರುವ ಈ ಸಮಯದಲ್ಲಿ ಮತ್ತೆ ಮಕ್ಕಳನ್ನು ಕಲಿಕಾ ಚಟುವಟಿಕೆಯಲ್ಲಿ ತೊಡಗಿಸುವ ಸಲುವಾಗಿ ಮನೆಯಲ್ಲಿ ವಿಜ್ಞಾನ ಸರಳ ಪ್ರಯೋಗಗಳು ಎಂಬ ಆನ್‌ಲೈನ್ ಕಾರ್ಯಾಗಾರವನ್ನು ಆರಂಭಿಸಲಾಗಿದೆ.
ಕಾರ್ಯಾಗಾರದಲ್ಲಿ ಇಸ್ರೋ ನಿವೃತ್ತ ವಿಜ್ಞಾನಿ ಸಿ.ಡಿ.ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ಮೂಲವಿಜ್ಞಾನವನ್ನು ಕಲಿಯುವುದರ ಮೂಲಕ ಸಂಶೋಧನೆಯಲ್ಲಿ ತೊಡಗಬೇಕು. ದೇಶಕ್ಕೆ ಒದಗುವುಂತಹ ಹೊಸ ಸಮಸ್ಯೆಗಳಿಗೆ ಬಹಳ ಬೇಗ ಪರಿಹಾರಗಳನ್ನು ಕಂಡು ಹಿಡಿದು ಆಗಬಹುದಾದ ಅನಾಹುತಗಳನ್ನು ತಡೆಯಬೇಕು ಎಂದು ಸಲಹೆ ನೀಡಿದರು.ನಮ್ಮದೇಶ ಬಾಹ್ಯಾಕಾಶತಂತ್ರಜ್ಞಾನದಲ್ಲಿ ವಿಶ್ವದ ಮೊದ ಐದು ದೇಶಗಳಲ್ಲಿ ಒಂದಾಗಿದೆ. ಹಲವಾರು ಸಾಧನೆಗಳನ್ನು ಮಾಡಿ ಮುಂಚೂಣಿ ದೇಶಗಳೊಡನೆ ನಿಲ್ಲುವಂತೆ ಮಾಡಿದೆ ಅದೇ ರೀತಿ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚು ಸಾಧನೆಗಳನ್ನು ಮಾಡಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಶಿಕ್ಷಕಿ ಎಚ್.ಎಸ್.ಮಂಜುಳ ಶಾಸ್ತ್ರಿ ಮಾತನಾಡಿ, ಮನೆಯಲ್ಲೇ ಸಿಗಬಹುದಾದ ವಸ್ತುಗಳಾದ ಕರ್ಪೂರ, ಅರಿಸಿಣ, ಕುಂಕುಮ, ಮಂಜುಗೆಡ್ಡೆ, ದಾರ, ಅಡುಗೆ ಸೋಡ, ಬಲೂನ್, ಪ್ಲಾಸ್ಟಿಕ್ ಕಪ್‌ಗಳು, ಕೊಬ್ಬರಿಎಣ್ಣೆ, ಬಾಚಣಿಗೆ, ಪೇಪರ್, ಬೆಂಕಿ ಪಟ್ಟಣ, ಮೊಂಬತ್ತಿ, ಡ್ರೈ ಸೆಲ್, ನಿಂಬೆಹಣ್ಣಿನರಸ ಇತ್ಯಾದಿ ವಸ್ತುಗಳನ್ನು ಬಳಸಿಕೊಂಡು ರಸಾಯನಶಾಸ್ತ್ರದ ಪರಿಕಲ್ಪನೆಗಳಾದ ಬೆಂಕಿ ಪೆಟ್ಟಿಗೆಯಿಂದ ಕಡ್ಡಿಗೀರಿದಾಗ ಹತ್ತಿಕೊಳ್ಳಲು ಸಹಾಯ ಮಾಡುವ ಕೆಂಪು ರಂಜಕದ ವೈಜ್ಞಾನಿಕ ಅಂಶಗಳು, ಮಂಜುಗೆಡ್ಡೆಯ ಪುಟ್ಟ ಘನಕ್ಕೆ ದಾರವನ್ನು ಅಂಟಿಸುವ ವಿಧಾನ ಮತ್ತು ವೈಜ್ಞಾನಿಕ ಕಾರಣ, ಕ್ಯಾಪಿಲ್ಲರಿಕ್ರಿಯೆ ವಿವರಿಸಲು ಬಣ್ಣ ಬಣ್ಣದ ನೀರು ಸರಂದ್ರ ಕಾಗದದಲ್ಲಿ ಹರಿಯುವ ಪ್ರಯೋಗ, ನೀರಿನ ವಿದ್ಯುದ್ವಭಜನೆಯ ಸರಳ ಪ್ರಯೋಗ, ನಿಂಬೆಹಣ್ಣಿನಿಂದ ರಹಸ್ಯ ಸಂದೇಶ ಕಳುಹಿಸುವ ಪ್ರಯೋಗ, ತಟ್ಟೆಯ ನೀರೆಲ್ಲಿ ಹೋಯಿತು? ಆಮ್ಲಜನಕದ ಹನಕ್ಕೆ ಅಗತ್ಯ ಮತ್ತು ಬಾಟಲಿಯಲ್ಲಿ ನೀರು ಆ ಜಾಗವನ್ನು ಆಕ್ರಮಿಸುವ ಪ್ರಯೋಗ, ಸ್ಥಿವಿದ್ಯುತ್ ನ ಪರಿಣಾಮ ತೋರಿಸಲು ಕುಣಿವ ಕಾಗದದ ಬೊಂಬೆಗಳು ಪ್ರಯೋಗ, ಉತ್ಪತನದ ಪ್ರಯೋಗಇತ್ಯಾದಿ ಪ್ರಯೋಗಗಳನ್ನು ಹಂತಹಂತವಾಗಿ ವಿವರಿಸುತ್ತಾ ಮಾಡಿ ತೋರಿಸಿದರು. ಅದರಂತೆ ವಿದ್ಯಾರ್ಥಿಗಳು ತಮ್ಮ ಮನೆಯಲ್ಲೇ ಪ್ರಯೋಗಗಳನ್ನು ಮಾಡಿ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಹೇಳಿದರು.