ಚಾಮರಾಜನಗರ: ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ನಿಗದಿತ ಅನುದಾನವನ್ನು ಸದ್ಭಳಕೆ ಮಾಡಿ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ. ಸಭಾಂಗಣದಲ್ಲಿಂದು ನಡೆದ ಜಿಲ್ಲಾಮಟ್ಟದ ಅಂಗವಿಕಲ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯ ಆರಂಭದಲ್ಲಿ ವಿಕಲಚೇತನರ ಸಮಸ್ಯೆ, ಕುಂದುಕೊರತೆಗಳನ್ನು ಅಲಿಸಿ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅರ್ಹ ವಿಕಲಚೇತನ ಫಲಾನುಭವಿಗಳಿಗೆ ಸೌಲಭ್ಯಗಳು ತಲುಪುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ವಿಕಲಚೆತನರಿಗೆ ಬಸ್‌ಪಾಸ್ ಸೌಲಭ್ಯ, ಯುಡಿಐಡಿ ಕಾರ್ಡ್, ವಸತಿ, ಸರ್ಕಾರಿ ಇಲಾಖೆಗಳಲ್ಲಿ ರ್‍ಯಾಂಪ್ ವ್ಯವಸ್ಥೆ, ಶೌಚಾಲಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಮೀಸಲಿಟ್ಟಿರುವ ಶೇ. ೫ರಷ್ಟು ಅನುದಾನವನ್ನು ವಿಕಲಚೇತನರ ಅನುಕೂಲಕ್ಕೆ ಅನುಗುಣವಾಗಿ ಬಳಸಬೇಕು. ಎಲ್ಲಾ ತಾಲೂಕುಗಳಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ವಿಕಲಚೇತನರ ಕುಂದುಕೊರತೆ ಆಲಿಸಿ, ಪರಿಶೀಲಿಸಿ ತಾಲೂಕುವಾರು ಪಟ್ಟಿ ಮಾಡಿ ಕ್ರೀಯಾಯೋಜನೆ ತಯಾರಿಸಿ ನಿಗದಿತ ಗುರಿ ಸಾಧಿಸಲು ಕಾರ್ಯೋನ್ಮುಖರಾಗಬೆಕು ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ವಿಕಲಚೇತನರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆಗೆ ಸೌಲಭ್ಯ ಕಲ್ಪಿಸಬೇಕು. ವೈದ್ಯಕೀಯ ಕೇಂದ್ರಗಳಲ್ಲಿ ವಿಕಲಚೇತನರಿಗೆ ಅಂಗವಿಕಲತೆಯ ಪ್ರಮಾಣದ ಬಗ್ಗೆ ಪ್ರಮಾಣಪತ್ರ ನೀಡಲು ಯಾವುದೇ ಮದ್ಯವರ್ತಿಗಳಿಗೆ ಅವಕಾಶವಾಗಬಾರದು. ವೈದ್ಯರು ಸೂಚಿಸಿದ ಔಷಧಿಗಳು ಸಂಬಂಧಪಟ್ಟ ಆಸ್ಪತ್ರೆಗಳಲ್ಲಿ ಲಭ್ಯವಿರುವಂತೆ ಅವಶ್ಯವಾಗಿ ದಾಸ್ತಾನು ಮಾಡಲು ಮುಂದಾಗಬೇಕು ಎಂದು ತಿಳಿಸಿದರು.

ವಿಕಲಚೇತನ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುಇವ ನಿಟ್ಟಿನಲ್ಲಿ ಸಂಘಸಂಸ್ಥೆಗಳು, ವಿಕಲಚೇತನರ ಪುನರ್ವಸತಿ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಬೇಕು. ಆಯಾ ಭಾಗದ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ವಿಕಲಚೇತನರಿಗೆ ದೊರೆಯುವ ಸೌಕರ್ಯಗಳಿಗೆ ಯಾವುದೇ ವಿಳಂಬವಾಗದಂತೆ ಇಲಾಖೆಯ ಮುಖ್ಯಸ್ಥರು ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಕಲಚೇತನರಿಗೆ ಉದ್ಯೋಗ ಮೇಳಗಳಲ್ಲಿ ಹೆಚ್ಚಿನ ಅವಕಾಶ, ಹೊಸದಾಗಿ ತೆರೆಯಲಾಗಿರುವ ಆಸ್ಪತ್ರೆಯಲ್ಲಿ ಉದ್ಯೋಗ, ಜಿಲ್ಲಾಮಟ್ಟದಲ್ಲಿ ಬುದ್ದಿಮಾಂದ್ಯ ಮಕ್ಕಳ ಶಾಲೆ, ವಿಕಲಚೇತನರ ಹಕ್ಕುಗಳ ಸಂರಕ್ಷಣೆ ಕುರಿತು ಜನಪ್ರತಿನಿಧಿಗಳಿಗೆ ಅರಿವು ಕಾರ್ಯಾಗಾರ, ವಿಕಲಚೇತನರಿಗೆ ವಾಹನಗಳ ವಿತರಣೆ, ನಗರ, ಸ್ಥಳೀಯ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ರ್‍ಯಾಂಪ್, ಶೌಚಾಲಯಗಳ ವ್ಯವಸ್ಥೆ, ಯುಡಿಐಡಿ ಕಾರ್ಡ್ ನೀಡಲು ಹೋಬಳಿಮಟ್ಟದಲ್ಲಿ ಶಿಬಿರಗಳ ಆಯೋಜನೆ, ಕೋವಿಡ್ ಸಂದರ್ಭದಲ್ಲಿ ಕೋವಿಡ್ ಕೇರ್ ಕೇಂದ್ರಗಳಲ್ಲಿ ವೀಲ್‌ಚೇರ್‌ಗಳ ಸೌಕರ್ಯ, ವಿಶೇಷ ಕೊಠಡಿ ವ್ಯವಸ್ಥೆ, ವಿಕಲಚೇತನ ಪುನರ್ವಸತಿ ಕಾರ್ಯಕರ್ತರನ್ನು ಮುಂಂಚೂಣಿ ಕಾರ್ಯಕರ್ತರಾಗಿ ಪರಿಗಣಿಸುವಿಕೆ ಸೇರಿದಂತೆ ಸಾಕಷ್ಟು ಕುಂದುಕೊರತೆಗಳು ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿ ಸಲ್ಲಿಕೆಯಾದವು.

ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸೋಮಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನಗರಾಭಿವೃರ್ದಧಿ ಕೋಶದ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ಡಾ. ಕೆ.ಎಂ. ವಿಶ್ವೇಶ್ವರಯ್ಯ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮೀ, ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೃಷ್ಣರಾಜು, ಇತರರು ಸಭೆಯಲ್ಲಿ ಹಾಜರಿದ್ದರು.