*”ಲೌಕಿಕ ಮತ್ತು ಅಲೌಕಿಕದೊಳಗೆ ಅಂಟಿಯೂ ಅಂಟದ ಹಾಗೆ ಇದ್ದ ಶ್ರೀಕೃಷ್ಣ, ಈ ಬಗೆಯವನು”*
*ಲೇಖನ ಅಭಿವ್ಯಕ್ತಿ :- ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)*
ಕೆಲವು ವಿಚಾರಗಳು ತುಂಬಾ ರಹಸ್ಯಮಯವಾಗಿ ಇರುವಾಗ, ಅಂತಹ ವಿಷಯಗಳು ನಮ್ಮ ಅನುಭವಕ್ಕೆ ಬರದೇ ಇದ್ದಾಗ; ಆ ವಿಷಯಗಳನ್ನು ಕೇಳಲು ನಮಗೆ ಆಶ್ಚರ್ಯವೆನಿಸುತ್ತದೆ, ಅನುಮಾನವಾಗಿ ಹೆಚ್ಚು ಗ್ರಹಿಕೆಯಾಗುತ್ತದೆ. ಲೌಕಿಕ ಜಗತ್ತಿನ ಅನುಭವಿಗೆ ಸಾಂಸಾರಿಕ ವಿಷಯಗಳು ಚೆನ್ನಾಗಿ ಕರಗತವಾಗಿರುತ್ತದೆ. ಹೀಗಾಗಿ ಕುಟುಂಬದಲ್ಲಿ ಬರುವ ಪಾತ್ರಗಳ ಸ್ವರೂಪ ಹೀಗೆಯೇ ಇರುತ್ತೆ ಎಂದು ಕೆಲವೊಮ್ಮೆ ಕರಾರುವಕ್ಕಾಗಿ ಊಹಿಸುವಷ್ಟು ಜಾಣನಿರುವ. ಹಾಗೆಯೇ ಅಲೌಕಿಕ ಪ್ರಜ್ಞೆಯುಳ್ಳವನು, ಧಾರ್ಮಿಕ ವಿಧಿವಿಧಾನಗಳಲ್ಲಿ ಅಂದರೆ ದೇವರು, ಆಚಾರ-ವಿಚಾರ, ಇನ್ನು ಮುಂತಾದ ಅಲೌಕಿಕ ವಿಷಯಗಳಲ್ಲೇ ಜೀವನ ಸಾಗಿಸುತ್ತಿರುವವನು ಲೌಕಿಕಕ್ಕಿಂತ ಅಲೌಕಿಕದ ವಿಚಾರಗಳಲ್ಲಿ ಹೆಚ್ಚು ಅರಿವನ್ನು ಸಾಧಿಸಿರುತ್ತಾನೆ. ಅಲೌಕಿಕ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ. ಇನ್ನೊಂದು ವರ್ಗವಿದೆ, ಇದು ಆಧ್ಯಾತ್ಮಿಕ ವರ್ಗ. ಈ ಆಧ್ಯಾತ್ಮಿಕ ವರ್ಗ ಲೌಕಿಕ ಮತ್ತು ಅಲೌಕಿಕತೆಗಳ ಎರಡರ ನಡುವೆ ಸೃಷ್ಟಿಯ ಮೂಲವಿಡಿದು ಮತ್ತು ಸೃಷ್ಟಿಯನ್ನೇ ಆದಿ, ಅಂತ್ಯ, ಮತ್ತು ದೈವತ್ವವಾಗಿ ಪರಿಗಣಿಸಿ ಎಲ್ಲಾ ಆಯಾಮಗಳಲ್ಲೂ ವೇಗವಾಗಿ ಮುಂದೋಗುವಿಕೆಯ ಲಕ್ಷಣವನ್ನು ಹೊಂದಿರುತ್ತದೆ. ಆಧ್ಯಾತ್ಮಿಗಳಿಗೆ ಲೌಕಿಕ ಮತ್ತು ಅಲೌಕಿಕ ವ್ಯಾಪ್ತಿಯೊಳಗೆ ಬರುವ ಎಲ್ಲಾ ವಿಚಾರಗಳ ಅರಿವು ಮತ್ತು ಸಮಸ್ಯೆಗೆ ಪರಿಹಾರ ಗೊತ್ತಿರುತ್ತದೆ. ಇವರು ಲೌಕಿಕದಲ್ಲೂ ಇರುವರು, ಅದೇ ಸಮಯದಲ್ಲಿ ಅಲೌಕಿಕದಲ್ಲೂ ಇರುವರು. ಎರಡೂ ಕಡೆ ಸಂಚಾರ ಮಾಡುವ ಆಧ್ಯಾತ್ಮಿಗಳು ಲೌಕಿಕ ಮತ್ತು ಅಲೌಕಿಕದ ಮೋಹಕ್ಕೆ ಅಥವಾ ಕಾಮಕ್ಕೆ ಅಂಟಿಯೂ ಅಂಟದ ಹಾಗೆ ಇದ್ದು ನಿಜಸ್ಥಿತಿಯನ್ನು ಸಾಧಿಸಿಕೊಳ್ಳುತ್ತಾ ಮುನ್ನಡೆಯುತ್ತಾರೆ. ಸಂಸಾರಿಗಳು ಮತ್ತು ಸನ್ಯಾಸಿಗಳು ಇವರಿಬ್ಬರಿಗೂ ದಾರಿತೋರುವ ಗುರುವಾಗಿರುತ್ತಾರೆ. ಸತ್ಯದ ದರ್ಶನ ಮಾಡಿಸಲಿಕ್ಕಾಗಿ ಸದಾ ಕಾತುರರಾಗಿರುತ್ತಾರೆ. ಸುಖ-ದುಃಖಗಳ ಬಂಧಿಯಿಂದ ಬಿಡುಗಡೆ ಹೊಂದುವ ಬಗೆಯಲ್ಲಿ ಸದಾ ಕ್ರಿಯಾಶೀಲರಾಗಿದ್ದು ತಮ್ಮ ಬಳಿ ಬಂದವರಿಗೆ ಇದರ ಅರಿವನ್ನು ಮೂಡಿಸುತ್ತಾರೆ. ಇನ್ನೊಬ್ಬರ ಏಳಿಗೆಯನ್ನು ಕಾಣುವುದೇ ಇವರ ಸತ್ಯಕಾಯಕವಾಗಿರುತ್ತದೆ. ಈ ಬಗೆಯಲ್ಲಿ ಆಧ್ಯಾತ್ಮಿಯಾಗಿದ್ದವನು ಶ್ರೀಕೃಷ್ಣ ಅಥವಾ ಯಶೋಧ ದೇವಕೀ ನಂದನ. ಕೌರವರು ಮತ್ತು ಪಾಂಡವರು, ಲೌಕಿಕ ಪ್ರಜ್ಞೆಯಲ್ಲಿ ಗಾಢವಾಗಿದ್ದವರು. ಇವರ ನಡುವೆ ಶ್ರೀಕೃಷ್ಣ ಒಬ್ಬ ಆಧ್ಯಾತ್ಮಿಯಾಗಿ ಸಕಲವನ್ನು ತನ್ನ ಹಿಡಿತದಲ್ಲಿ ತಂದಕೊಂಡರೂ ಅರೆಗಳಿಗೆಯೂ ಮೋಹದ ದಾಸನಾಗಲಿಲ್ಲ. ದಾಯಾದಿಗಳ ಕಲಹದಲ್ಲಿ ರಾಜ್ಯಲತಾಂಗಿಯನ್ನು ಕಬಳಿಸಲಿಲ್ಲ. ಕೌರವರಲ್ಲಿದ್ದ ಅಧರ್ಮವನ್ನು ಅಳಿಸಲಿಕ್ಕಾಗಿ ಪಾಂಡವರಲ್ಲಿದ್ದ ಪುಣ್ಯದ ಕರ್ಮಗಳಿಗೆ ಅನುಗುಣವಾಗಿ ರಕ್ಷಿಸಲಿಕ್ಕಾಗಿ ಬಂದವನು ಮಾಧವ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಅರ್ಜುನನಿಗೆ ಭೋಧಿಸದೆಲ್ಲವೂ ಧಾರ್ಮಿಕ ಗ್ರಂಥವಲ್ಲ. ಆಧ್ಯಾತ್ಮಿಯ ಅನುಭವಗಳು. ಆದಿಯೋಗಿ ಸ್ವರೂಪನಾದ ಶ್ರೀಕೃಷ್ಣ ತಿಳಿಸಲೇಬೇಕಾದ ಸತ್ಯಗಳು. ತ್ಯಾಗಪ್ರಿಯನಾದ ಕರ್ಣ ಅಧರ್ಮದವರ ಕಡೆ ನಿಲ್ಲುವಾಗಿ ನಡೆದ ಘೋರ ಘಟನೆಗಳ ಫಲವೇ ಆತನಿಗೊದಗಿದ ದುರಂತ ಎನ್ನುವ ಬ್ರಹ್ಮ ರಹಸ್ಯವ ತಿಳಿಸುವುದು ಯುಗದ ತಿಳುವಳಿಕೆಗೆ ಅಗತ್ಯವಾಗಿತ್ತು. ರಾಧೆಯ ಸಲ್ಲಾಪ ಶ್ರೀಕೃಷ್ಣನಿಗೆ ದೂರವಾದಾಗ ಪ್ರೇಮವೆನ್ನುವುದು ಸದಾ ಹತ್ತಿರದಲ್ಲೇ ಇರುವ ಅನುಭೂತಿ ಮತ್ತು ಅದನ್ನು ಸರಿಯಾಗಿ ಅರ್ಥೈಸಿಕೊಂಡಾಗ ಸಿಗುವ ನಿತ್ಯ ಆನಂದ ಎಂಬುದನ್ನು ತಿಳಿಸಿ ವಿರಾಗಿಯಾಗದೆ ಲೌಕಿಕ ಪ್ರಜ್ಞೆಯನ್ನು ಗೆದ್ದು ತೋರಿಸಿದ್ದು ಶ್ರೀಕೃಷ್ಣನ ಆಧ್ಯಾತ್ಮಿಕ ಸ್ವರೂಪ. ಗುರುಹಿರಿಯರಾಗಿದ್ದ ಭೀಷ್ಮಚಾರ್ಯರು, ದ್ರೋಣಾಚಾರ್ಯರು, ರಾಜ್ಯಲತಾಂಗಿಯಲ್ಲಿ ಎಡವಿದವರಾಗಿ ಬಿಂಬಿತಗೊಳ್ಳುತ್ತಾರೆ. ಯಾವುದರಲ್ಲಿ ತಮ್ಮ ಪಾತ್ರವಿರಬಾರದೋ ಅದರಲ್ಲಿ ಹೆಚ್ಚಿಗೆ ತೊಡಗಿಸಿಕೊಳ್ಳುವ ಅವರುಗಳನ್ನು ಎಚ್ಚರಿಸಿ ತಿದ್ದಿದವನು ಶ್ರೀಕೃಷ್ಣ. ಶ್ರೀಕೃಷ್ಣನಿಗಿಂತಲೂ ಹೆಚ್ಚಿಗೆ ಶಕ್ತಿ ಹೊಂದಿದ್ದ ಲೌಕಿಕ ಮತ್ತು ಅಲೌಕಿಕ ಶೀಲರು ಮಾಯಾವಿಯ ಸಿದ್ಧಾಂತದ ಎದುರು ಕಟಕಟೆಯಲ್ಲಿ ನಿಲ್ಲುತ್ತಾರೆ. ಈ ಸೂಕ್ಷ್ಮತೆಯಲ್ಲಿ ಅರಿವಾಗುವುದು ಲೌಕಿಕ ಮತ್ತು ಅಲೌಕಿಕ ಮಹಾಶಯರಿಬ್ಬರೂ ಸಹ, ಸ್ಥಿತಿಯನ್ನು ಕಾಣದಿರುವುದು. ಇವೆರೆಡರಲ್ಲೂ ತಮ್ಮ ಲೋಭಿತನದ ಮುಂದೆ ಶರಣಾಗಿರುವುದು ಹೆಚ್ಚಿಗೆ ಇರುವುದು ಗುರುತಾಗುತ್ತದೆ. ಆದರೆ ಆಧ್ಯಾತ್ಮಿಕದಲ್ಲಿ ಸ್ಥಿತಿಲಯವು ಉನ್ನತವನ್ನು ಮುಟ್ಟಿರುತ್ತದೆ. ಒಮ್ಮೆ ಶ್ರೀಕೃಷ್ಣನ ಜೀವನ ವೃತ್ತಾಂತವನ್ನು ಪೂರ್ತಿ ತಿಳಿಯಿರಿ. ಅಲ್ಲಿ ಶ್ರೀಕೃಷ್ಣ, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಲಯ ತಪ್ಪಿಲ್ಲ. ಕಳ್ಳನೆನೆಸಿದರೂ ಕಳ್ಳನಲ್ಲ, ಮಾಯಾವಿ ಎನಿಸಿದರೂ ಕಪಟನಲ್ಲ. ಸ್ವಾರ್ಥವೆನಿಸಿದರೂ ಧರ್ಮವಾಯಿತು. ರಾಜ್ಯದ ವಿಜಯವ ಬಯಸಿದರೂ ಅದರ ಕಿರೀಟ ಅವನದಲ್ಲ. ಅವರವರ ಪದವಿಗಳನ್ನು ಅವರಿಗೆ ಕೊಡಿಸದರೂ ಅದರಿಂದ ಕಿಂಚಿತ್ತೂ ಲಾಭ ತೂಯ್ಯಲಿಲ್ಲ. ಯುದ್ಧಗಳ ಮಾಡಿಸಿ ಹಲವರ ಪ್ರಾಣಪಕ್ಷಿ ಹಾರಿಸಿದರೂ; ಕೆಲವರ ಪ್ರಾಣ ಉಳಿಸಿದರೂ ಅವೆರೆಡರ ಫಲವೂ ಅವನಾಗಲಿಲ್ಲ ಅಥವಾ ಕೊಲೆಗಾರನಾಗಲಿಲ್ಲ. ಎಲ್ಲವೂ ಅವರವರ ಕರ್ಮಗಳಿಗೆ ಒಂದೊಂದು ದಾರಿ ಕಂಡಿದ್ದನ್ನು ತನ್ಮೂಲಕ ತೋರಿಸಿಕೊಟ್ಟನಷ್ಟೇ. ಎಲ್ಲದರ ಹೊಕ್ಕು ಸ್ವಲ್ಪವೂ ಇತರ ವಿಷಯಾದಿಗಳಿಗೆ ತನ್ನ ವ್ಯಕ್ತಿತ್ವವನ್ನು ಸುಕ್ಕು ಹಿಡಿಸಿಕೊಳ್ಳಲಿಲ್ಲ. ಇದು ಅವನೊಬ್ಬ ಆಧ್ಯಾತ್ಮಿಯಾದ್ದರಿಂದ ಮಾತ್ರ ಸಾಧ್ಯವಾಯಿತು. ಸಾವಿನ ದಿನವನ್ನು ತಿಳಿದವನಾಗಿ ಶ್ರೀಕೃಷ್ಣ ಹೆಚ್ಚಿಗೆ ಇರಲಿಲ್ಲ. ಸಾವನ್ನು ಗೆಲ್ಲಬೇಕೆಂಬ ಹುಂಬುತನವನ್ನು ಕೂಡ ತನ್ನ ಚಿಂತನೆಯಲ್ಲಿ ಇಟ್ಟುಕೊಂಡಿರಲಿಲ್ಲ. ಕ್ಷಣದ ಮಾಯೆಗೆ ಮಾಯವಾಗುವ ನಾವು ಪ್ರಜ್ಞೆಯಲ್ಲಿ ಉನ್ನತ ಸ್ಥಾನವನ್ನು ಹೊಂದಿದರೆ ನಮ್ಮ ಭೂತ, ವರ್ತಮಾನ, ಭವಿಷ್ಯತ್ ಗಳನ್ನು ಹಿಡಿತಕ್ಕೆ ತರಬಹುದೆಂಬ ಮಹಾ ಅರಿವನ್ನು ಹೊಂದಿದ್ದ ಗೋಪಾಲಕೃಷ್ಣನ ಲಕ್ಷಣಗಳೆಲ್ಲವೂ ಸೃಷ್ಟಿಯ ನೀತಿಯನ್ನು ತುಂಬಾ ಆಳವಾಗಿ ಒಪ್ಪಿದ್ದನು ಎಂಬುದು ಗೋಚರಿಸುವಲ್ಲಿಯೇ ಆಧ್ಯಾತ್ಮಿಯ ಲಕ್ಷಣಗಳು ಅಡಗಿದೆ. ಈ ಆಧ್ಯಾತ್ಮಿಕ ಲಕ್ಷಣಗಳು ಲೌಕಿಕ, ಅಲೌಕಿಕ ಎರಡರಲ್ಲೂ ಕಂಡುಬರುತ್ತದೆ. ಈ ಆಧ್ಯಾತ್ಮಿಕ ಚಿಂತನೆಗಳಿಂದ ಲೌಕಿಕದಲ್ಲಿದ್ದರೂ ತಮಗರಿವಿಲ್ಲದೇ ಉನ್ನತಿಯನ್ನು ಹೊಂದಿದವರು ಇದ್ದಾರೆ. ಹಾಗೆಯೇ ಅಲೌಕಿಕದಲ್ಲೂ ಆಧ್ಯಾತ್ಮದ ಮೂಲಕ ಉನ್ನತಿ ಪಡೆದವರಿದ್ದಾರೆ. ಕೆಲವರು ಮಾತ್ರ ಇದನ್ನು ಅರಿತು, ಗ್ರಹಿಕೆಗೆ ತಂದುಕೊಂಡು ಬದುಕಿ ಹೋಗಿದ್ದಾರೆ. ಬುದ್ಧನಿರಬಹುದು, ಬಸವಣ್ಣನಿರಬಹುದು, ಶಿಶುನಾಳ ಶರೀಫರಿರಬಹುದು, ಸಾಯಿಬಾಬನಿರಬಹುದು, ರಾಮಕೃಷ್ಣ ಪರಮಹಂಸರಿರಬಹುದು; ಹೀಗೆ ಇನ್ನು ಅನೇಕರು ಆಧ್ಯಾತ್ಮದಲ್ಲಿ ಉನ್ನತಿ ಪಡೆದವರು ಸಾಕಷ್ಟು ಮಂದಿ ಇದ್ದಾರೆ. ಇವರ್ಯಾರು ಸಾವನ್ನು ಬಯಸಲಿಲ್ಲ, ಹಾಗೆಯೇ ಸಾವನ್ನು ಜರಿಯಲಿಲ್ಲ, ಪ್ರಕೃತಿಯನ್ನು ಅದರ ನಿಯಮವನ್ನು ಕಂಡು ಒಪ್ಪಿ ಅದಕ್ಕೆ ಶರಣಾದರು. ಈಗಲೂ ಪ್ರಕೃತಿಯಂತೆಯೇ ಉಳಿದಿರುವರು. ಈ ಪ್ರಕೃತಿ ಧೋರಣೆಯನ್ನು ಶ್ರೀಕೃಷ್ಣ ಬಲವಾಗಿ ಸ್ವೀಕರಿಸಿ ತನ್ನ ಕಾರ್ಯಮಿತಿಯನ್ನು ಮೀರದೆ ದುಡಿಮೆಗಾರನಾದ ಫಲವಾಗಿ ಅವನೊಬ್ಬ ಆಧ್ಯಾತ್ಮಿ ಎನಿಸುವ ವರ್ಗಕ್ಕೆ ಅಂತಿಮವಾಗಿ ಸಿಕ್ಕಿದನೆಂಬುವುದೇ ಸತ್ಯ. ಶ್ರೀಕೃಷ್ಣ ಯಾವುದೇ ಅಪೇಕ್ಷೆ ಇಲ್ಲದೇ ತೋರಿದ ಬದುಕಿನ ಕಾರ್ಯಕ್ಷಮತೆಯಿಂದಾಗಿ ವಿಮುಕ್ತಿಗೆ ಸಿಲುಕಿದವರೆಲ್ಲರೂ ಮುಕ್ತಿಯ ಮೊಗಲಿಗೆ ಜಿಗಿದರು. ಪ್ರಕೃತಿಯನ್ನು ಚೆನ್ನಾಗಿ ಅರಿತ ಗೋವಿಂದ, ರಾಜ್ಯಲತಾಂಗಿಯನ್ನು ಪ್ರೀತಿಸಿದನು, ಪ್ರೇಮಿಸಿದನು ಆದರೆ ಮೋಹಿಸಲಿಲ್ಲ ಅಥವಾ ಬಯಸಲಿಲ್ಲ. ಅಧಿಕಾರ ಸ್ಥಾಪನೆಯ ನಾಮನೊಂದಣಿಯನ್ನು ಹೊಂದಲಿಲ್ಲ. ಹಾಗೇನಾದರೂ ಮಾಡಿದ್ದರೆ ಶ್ರೀಕೃಷ್ಣ ಲೌಕಿಕದೊಳಗೆ ಸಿಲುಕಿ ರಣಾಂಗಣದಲ್ಲೇ ಕೌರವರು ಮತ್ತು ಪಾಂಡವರ ಮುಂಚೆಯೇ ಹತನಾಗುತ್ತಿದ್ದ. ಈ ರೀತಿಯ ಹತನಾಗುವುದರಲ್ಲಿ ಯಾವುದೇ ಶ್ರೇಷ್ಠತೆ ಅಡಗಿಲ್ಲವೆಂಬುದು ಆತನಿಗೆ ತಿಳಿಸಿಕೊಟ್ಟದ್ದು ಪ್ರಕೃತಿ. ಆ ಪಕೃತಿಯ ದಾರಿಯಲ್ಲಿ ಸಾಗಿ ಆಧ್ಯಾತ್ಮಿ ಎಂಬ ಬಿರುದನ್ನು ಪಡೆದುಕೊಂಡ. ಜೊತೆಗೆ ಈ ಭೂಮಿಯ ಸಕಲ ಅನುಭೂತಿಗಳನ್ನು ಆಸ್ವಾಧಿಸಿ ಧನ್ಯತಾಭಾವದಲ್ಲಿ ದೂರ ಸರಿದು ಪ್ರಕೃತಿಗೆ ಹತ್ತಿರಗೊಂಡ. ಯುದ್ಧಮಾಡದೇ ಜಗಗಂಡನಾದ. ಈ ರೀತಿ ಎಲ್ಲದರ ಸ್ಥಿತಿಯಲ್ಲಿ ಅಂಟಿಯೂ ಅಂಟದ ಶ್ರೀಕೃಷ್ಣ ಆಧ್ಯಾತ್ಮಿಕ ಪುರುಷನಾದ.
*ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)*
*ಯುವಸಾಹಿತಿ,ವಿಮರ್ಶಕ, ಸಂಶೋಧಕ.*
*ದೂರವಾಣಿ ಸಂಖ್ಯೆ:- 8884684726*
*Gmail I’d:-manjunathabr709@gmail.com*
*https://www.instagram.com/kannada_inspirational_quotes__?r=nametag*