ಚಾಮರಾಜನಗರ: ತಾನು ಬೆಳೆದ ಉತ್ಪನ್ನಗಳಿಂದ ಇಡೀ ದೇಶಕ್ಕೆ ಅನ್ನ ನೀಡುವ ಮೂಲಕ ರೈತರು ದೇಶದ ಬೆನ್ನುಲುಬಾಗಿದ್ದಾರೆ ಎಂದು ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಅವರು ತಿಳಿಸಿದರು.
ನಗರದ ವಾಲ್ಮೀಕಿ ಭವನದಲ್ಲಿಂದು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಕೃಷಿಕ ಸಮಾಜ ಇವರ ಸಹಯೋಗದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ಹಾಗೂ ನೈಸರ್ಗಿಕ ಕೃಷಿ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಕೃಷಿ ಪ್ರಧಾನ ದೇಶವಾಗಿದೆ. ದೇಶದಲ್ಲಿ ಎಂತಹ ಕಠಿಣ ಪರಿಸ್ಥಿತಿ ಎದುರಾದರೂ, ಯಾವುದೇ ಉದ್ಯಮಗಳು ಸ್ಥಗಿತಗೊಂಡರು ರೈತರ ಕೃಷಿ ಚಟುವಟಿಕೆ ಮಾತ್ರ ನಿಲ್ಲುವುದಿಲ್ಲ. ರೈತರು ಯಾವುದೇ ಸಂಕಷ್ಟದಲ್ಲಿದ್ದರೂ ಕೃಷಿಯಲ್ಲಿ ತೊಡಗಿ ಸಮಾಜಕ್ಕೆ, ದೇಶಕ್ಕೆ ಆಹಾರ ನೀಡಿ ದೇಶಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ ಎಂದರೆ ತಪ್ಪಾಗಲಾರದು. ರೈತರಿಗೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಉತ್ತಮವಾಗಿ ಸ್ಪಂದಿಸಿ, ಅಗತ್ಯ ಸೌಲಭ್ಯಗಳನ್ನು ನೀಡಬೇಕು. ರೈತರು ಬೆಳದ ಉತ್ಪ್ಪನ್ನಗಳಿಗೆ ಉತ್ತಮ ಬೆಲೆ ನೀಡಬೇಕು. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂದರು.
ಪ್ರೊ. ನಂಜುಂಡಸ್ವಾಮಿಯವರ ವಿಚಾರಧಾರೆಗಳನ್ನು ರೈತರು ಅರಿಯಬೇಕು. ಒಂದೇ ಬೆಳೆಯನ್ನು ಅವಲಂಬಿಸದೇ ವಿವಿಧ ಬಗೆಯ ಉತ್ಪನ್ನಗಳನ್ನು ಬೆಳೆಯುವತ್ತ ಗಮನಹರಿಸಬೇಕು. ಸಿರಿಧಾನ್ಯಗಳಿಗೆ ಬಹಳ ಹಿಂದಿನ ಇತಿಹಾಸವಿದೆ. ನಮ್ಮ ಪೂರ್ವಜರು ಬಳಸುತ್ತಿದ್ದ ಸಿರಿಧಾನ್ಯಗಳಲ್ಲಿ ಸಾಕಷ್ಟು ಔಷಧಿ ಗುಣಗಳಿವೆ. ಸಿರಿಧಾನ್ಯಗಳ ಸೇವನೆಯಿಂದ ಯಾವುದೇ ರೋಗ ರುಜಿನಗಳಿಂದ ಪಾರಾಗಬಹುದು ಸಿರಿಧಾನ್ಯಗಳು, ಸಾಂಬಾರ ಪದಾರ್ಥಗಳನ್ನು ಬಳಸುವ ಏಕೈಕ ಸ್ವಾವಲಂಬಿ ದೇಶ ಭಾರತವಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜು ಅವರು ಮಾತನಾಡಿ ಸಿರಿಧಾನ್ಯಗಳು ಉತ್ತಮ ಉತ್ತಮ ಜೀವನಶೈಲಿಗೆ ಮನೆಮದ್ದಾಗಿರುವುದರಿಂದ ಜನರು ಹೆಚ್ಚಾಗಿ ಸಿರಿಧಾನ್ಯಗಳನ್ನು ಬಳಕೆ ಮಾಡಬೇಕು. ರೈತರಿದ್ದರೇ ಮಾತ್ರ ದೇಶ. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು. ರೈತರ ಬದುಕು ಹಸನಾಗಬೇಕು ಎಂದರು.
ರೈತ ಮುಖಂಡರಾದ ಹೊನ್ನೂರು ಪ್ರಕಶ್ ಅವರು ಮಾತನಾಡಿ ರೈತರು ಇಂದಿನ ಪಾಪಂಚಿಕ ವೇಗಕ್ಕೆ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ರಸಗೊಬ್ಬರಗಳನ್ನು ಹಾಕುವುದರಿಂದ ಭೂಮಿ ವಿಷಮಯವಾಗುತ್ತಿದೆ. ಸಿರಿಧಾನ್ಯಗಳನ್ನು ಬೆಳೆಯುವುದರಿಂದ ನೀರಿನ ಉಳಿತಾಯ ಹಾಗೂ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು. ರೈತರು ಸಾಮೂಹಿಕ ಬೇಸಾಯಕ್ಕೆ ಒತ್ತು ನೀಡಬೇಕು. ಉತ್ಪಾದಕರು,ಗ್ರಾಹಕರು ರೈತರೇ ಆಗಬೇಕು. ರೈತರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯಾಗಬೇಕು. ಹಾಗಾದಲ್ಲಿ ರೈತರು ಅರ್ಥಿಕವಾಗಿ ಸದೃಢರಾಗಲಿದ್ದಾರೆ ಎಂದರು.
ರೈತ ಮುಖಂಡರಾದ ಅಣಗಳ್ಳಿ ಬಸವರಾಜು ಹಾಗೂ ಹೆಚ್ಚಸೂರು ಬಸವಣ್ಣ ಅವರು ಮಾತನಾಡಿ ನೈಸರ್ಗಿಕ ಕೃಷಿಯ ಮಹತ್ವವನ್ನು ಎಲ್ಲರೂ ಅರಿಯಬೇಕು. ರೈತರು ಕೃಷಿ ಜೊತೆಗೆ ಹೊಸ ಹೊಸ ಆಲೋಚನೆಗಳನ್ನು ಮಾಡಬೇಕಿದೆ. ಸಿರಿಧಾನ್ಯಗಳನ್ನು ಬೆಳೆಯಲು ಸರ್ಕಾರ ರೈತರಿಗೆ ಪ್ರೋತ್ಸಾಹಧನ ನೀಡಬೇಕು. ತಂತ್ರಜ್ಞಾನ ಬೆಳವಣಿಗೆಯಿಂದ ಇಂದು ಭೂಮಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಸಾಮೂಹಿಕ ಬೆಳೆ ಬೆಳೆಯಲು ರೈತರು ಆದ್ಯತೆ ನೀಡಬೇಕು. ಅಲ್ಲದೇ ರೈತರು ಸಹ ಸರಳ ಜೀವನ ನಡೆಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಚಿಕ್ಕಸ್ವಾಮಿ ಅವರು ಮಾತನಾಡಿ ರೈತರು ಸಿರಿಧಾನ್ಯ ಬೆಳೆಯುವುದರಿಂದ ನಮ್ಮ ಆರೋಗ್ಯದ ಜೊತೆಗೆ ಭೂಮಿಯ ಆರೋಗ್ಯವನ್ನು ಕಾಪಾಡಕೊಳ್ಳಬಹುದು. ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಮುಂದಿನ ದಿನಗಳಲ್ಲಿ ರೈತರ ದಿನಾಚರಣೆಯನ್ನು ತಾಲೂಕುಮಟ್ಟದಲ್ಲಿಯೂ ಹಮ್ಮಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿರಿಧಾನ್ಯ ಹಾಗೂ ನೈಸರ್ಗಿಕ ಕೃಷಿ ಕುರಿತ ಕರಪತ್ರಗಳನ್ನು ಹಾಗೂ ರೈತ ಉತ್ಪಾದಕ ಸಂಸ್ಥೆಗಳು ತಯಾರಿಸಿದ ಉತ್ಪನ್ನಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಸಿರಿಧಾನ್ಯಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲು ಜಿಲ್ಲಾಡಳಿತ ಭವನದ ಮುಂಭಾಗದಿಂದ ಆಯೋಜಿಸಲಾಗಿದ್ದ ‘ಸಿರಿಧಾನ್ಯ ಜಾಥಾಗೆ ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸೇರಿದಂತೆ ಇತರೆ ಗಣ್ಯರು ಹಸಿರು ನೀಶಾನೆ ತೋರಿ ಚಾಲನೆ ನೀಡಿದರು.