ಗುಂಡ್ಲುಪೇಟೆ: ತಾಲೂಕಿನ ರಾಘವಾಪುರ ಗ್ರಾಮಕ್ಕೆ ಬೆಂಗಳೂರಿನ ಭಾರತಿಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಭೇಟಿ ನೀಡಿ, ರೈತರಿಗೆ ಸುಸ್ತಿರ ಮತ್ತು ಅಧಿಕ ಇಳುವರಿ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಬಿ.ಬಾಲಕೃಷ್ಣ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವಿವಿಧ ತರಕಾರಿ, ಹಣ್ಣು, ಹೂವಿನ ಅಧಿಕ ಹಾಗೂ ಸುಸ್ತಿರವಾಗಿ ಇಳುವರಿ ನೀಡುವ ಅತ್ಯುತ್ತಮ ಸುಧಾರಿತ ತಳಿಗಳ ಬಿತ್ತನೆ ಬೀಜ ಮತ್ತು ಪೈರುಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದು ರೈತರು ಹಾಗೂ ರೈತ ಮಹಿಳೆಯರು ಆರ್ಥಿಕವಾಗಿ ಮುಂದೆ ಬರಬೇಕು ಎಂದು ತಿಳಿಸಿದರು.

ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಸಿ.ಚಂದ್ರಶೇಖರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಣಬೆಗೆ ಬೇಡಿಕೆ ಹೆಚ್ಚಿನ ರೀತಯಲ್ಲಿದೆ. ಆದ್ದರಿಂದ ನಿಮ್ಮ ಗ್ರಾಮದಲ್ಲಿ ಹತ್ತು-ಹದಿನೈದು ಮಂದಿ ಮುಂದೆ ಬಂದರೆ ಅವರಿಗೆ ತರಬೇತಿ ನೀಡುವುದರ ಜೊತೆಗೆ ಅಣಬೆ ಬೇಸಾಯಕ್ಕೆ ಅವಶ್ಯಕವಿರುವ ಕೆಲವು ಪರಿಕರಗಳನ್ನು ನೀಡಲಾಗುವುದು ಎಂದರು.

ಕೋಳಿ ಸಾಕಾಣಿಕೆ ಮಾಡುವ ಸಣ್ಣ ರೈತರು ಮತ್ತು ಮಹಿಳೆಯರಿಗೆ ಹತ್ತರಿಂದ ಮೂವತ್ತು ಕೋಳಿಗಳನ್ನು ಸಂಸ್ಥೆಯ ಎಸ್‍ಸಿಎಸ್‍ಪಿ ಕಾರ್ಯಕ್ರಮದಡಿಯಲ್ಲಿ 10 ಮಂದಿಗೆ ಉಚಿತವಾಗಿ ನೀಡುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಿ. ಜೊತೆಗೆ ರೈತರಿಗೆ ಸುಸ್ತಿರ ಮತ್ತು ಅಧಿಕ ಇಳುವರಿ ನೀಡುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಉತ್ತಮ ತಳಿ ಮತ್ತು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಹೆಚ್ಚು ಸಬಲರಾಗಲು ರೈತರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮದ 40 ರೈತರು ಹಾಗೂ ರೈತ ಮಹಿಳೆಯರಿಗೆ ಭಾಗವಹಿಸಿದ್ದರು.

ವರದಿ: ಬಸವರಾಜು ಎಸ್.ಹಂಗಳ

By admin