ಚಾಮರಾಜನಗರ: ರಾಷ್ಟ್ರೀಯ ಮತದಾರರ ದಿನ ಆಚರಣೆ ಕಾರ್ಯಕ್ರಮವನ್ನು ಜನವರಿ ೨೫ರಂದು ಜಿಲ್ಲಾಕೇಂದ್ರ ಸೇರಿದಂತೆ ಎಲ್ಲ ಮತಗಟ್ಟೆ ಮಟ್ಟಗಳಲ್ಲಿಯೂ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮತದಾರರ ದಿನ ಆಚರಣೆ ಸಂಬಂಧ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
೧೩ನೇ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದ್ದು ಜಿಲ್ಲಾ ಕೇಂದ್ರ, ತಾಲ್ಲೂಕು, ಹೋಬಳಿ, ಮತಗಟ್ಟೆ ಕೇಂದ್ರಗಳ ಮಟ್ಟಗಳಲ್ಲಿಯೂ ಆಚರಿಸಲು ಮತದಾರರ ನೊಂದಣಾಧಿಕಾರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳು ಕ್ರಮವಹಿಸಬೇಕು. ಅಂದು ಮಧ್ಯಾಹ್ನ ೧ ಗಂಟೆಗೆ ಚುನಾವಣಾ ಆಯೋಗವು ನಿಗದಿಪಡಿಸಿರುವ ಮತದಾರರ ಪ್ರತಿಜ್ಞಾ ವಿಧಿಯನ್ನು ಇಲಾಖೆಯ ಅಧಿಕಾರಿ ಸಿಬ್ಬಂದಿ ಹಾಗೂ ಶಾಲಾ ಕಾಲೇಜುಗಳಲ್ಲಿ ಸ್ವೀಕರಿಸಲು ಅಗತ್ಯ ವ್ಯವಸ್ಥೆ ಮಾಡಲು ಸೂಚಿಸಿದರು.
ಶಾಲಾ ಕಾಲೇಜು ಮುಖ್ಯಸ್ಥರು, ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರು ಮತ್ತು ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಶಾಲಾ, ಕಾಲೇಜು ಮತ್ತು ಮತಗಟ್ಟೆಗಳಲ್ಲಿ ಹೊಸದಾಗಿ ನೊಂದಾಯಿತ ಯುವ ಮತದಾರರಿಗೆ ಸಮಾರಂಭವನ್ನು ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ದ್ಯೇಯ ವಾಕ್ಯಗಳೊಂದಿಗೆ ಹಮ್ಮಿಕೊಳ್ಳಬೇಕು. ನೂತನವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಿರುವ ಯುವ ಮತದಾರರಿಗೆ ಎಪಿಕ್ ಕಾರ್ಡ್‌ಗಳನ್ನು ವಿತರಿಸಬೇಕು ಎಂದರು.
ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ವ್ಯಾಪ್ತಿಯಲ್ಲಿ ಹೊಸದಾಗಿ ನೊಂದಣಿಯಾಗಿರುವ ವಿಶೇಷ ಚೇತನ ಯುವಮತದಾರರಿಗೆ ಎಪಿಕ್ ಕಾರ್ಡ್‌ಗಳನ್ನು ಆಯಾ ಮತಗಟ್ಟೆಗಳ ಬಿ.ಎಲ್.ಒ ಗಳು ವಿತರಿಸಲು ಮತ್ತು ಮತದಾನ ದಿನ ಆಚರಣೆ ಮಾಡುತ್ತಿರುವ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪದವಿ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಯುವ ಮತದಾರರ ದಿನ ಆಯೋಜಿಸಿ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ಚಿತ್ರಕಲೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲು ಪೂರ್ವಸಿದ್ಧತೆ ಕೈಗೊಳ್ಳಬೇಕು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಬೇಕು ಎಂದರು.
೨೦೨೨-೨೩ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯನಿರ್ವಹಿಸಿದ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಬ್ಬರು ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಗುರುತಿಸಿ ಗೌರವಿಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಧರಣೇಶ್, ಉಪವಿಭಾಗಾಧಿಕಾರಿ ಗೀತಾಹುಡೇದ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಪ್ರಸನ್ನ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಜಿಲ್ಲಾ ನಗರಾಭಿವೃದ್ದಿ ಯೋಜನಾ ನಿರ್ದೆಶಕರಾದ ಸುಧಾ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.
