ಚಾಮರಾಜನಗರ: ರಾಷ್ಟ್ರಕವಿ ಕುವೆಂಪು ಅವರು ಇಡೀ ಜಗತ್ತಿಗೆ ಸಾರಿದ ವಿಶ್ವಮಾನವ ತತ್ವವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸಲಹೆ ಮಾಡಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುವೆಂಪು ಅವರು ಸಾರ್ವಕಾಲಿಕ ನೀತಿ ಸತ್ಯಗಳನ್ನು ತಮ್ಮ ಕೃತಿಗಳಲ್ಲಿ ಹೇಳಿದ್ದಾರೆ. ಕುವೆಂಪು ಅವರ ಜೀವನವೇ ನಮಗೆ ಸಂದೇಶವಾಗಿದೆ. ಅವರ ವಿಶ್ವಮಾನವ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಿದೆ. ಅವರ ಮೌಲ್ಯ ವಿಚಾರಗಳು ಅನುಕರಣೀಯವಾಗಿದೆ ಎಂದು ಜಿಪಂ ಸಿಇಒ ಅವರು ತಿಳಿಸಿದರು.
ಎಲ್ಲ ಪ್ರಕಾರದ ಸಾಹಿತ್ಯ ರಚನೆಯಲ್ಲಿ ಮುಂದಾದ ಕುವೆಂಪು ಅವರ ಕವನ, ಕತೆ, ಕಾದಂಬರಿ, ನಾಟಕ, ಸೇರಿದಂತೆ ಎಲ್ಲ ಕೃತಿಗಳು ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ. ರಾಮಯಣ ದರ್ಶನಂ ನಂತಹ ಕೃತಿಯಲ್ಲಿ ಪಾತ್ರ ವರ್ಗಗಳ ವಿಶೇಷತೆ ಕಾಣಬಹುದಾಗಿದೆ. ಅವರು ರಚಿಸಿದ ಕಾದಂಬರಿಗಳ ಪಾತ್ರಗಳು ಜೀವಂತವಾಗಿವೆ ಎನ್ನುವ ರೀತಿಯಲ್ಲಿ ಮೂಡಿಬಂದಿದೆ ಎಂದರು.
ಕುವೆಂಪು ಅವರ ಚಿಂತನೆ, ಆಲೋಚನೆಗಳ ಮೌಲ್ಯ ಮುಂದಿನ ಪೀಳಿಗೆಗೂ ತಲುಪಿಸಬೇಕು. ಶಾಲಾ ಕಾಲೇಜುಗಳಲ್ಲಿ ಕುವೆಂಪು ಹಾಗೂ ಅವರ ಕೃತಿಗಳ ಬಗ್ಗೆ ಹೆಚ್ಚು ಅರ್ಥಪೂರ್ಣ ಚರ್ಚೆಗಳು ನಡೆದು ವಿದ್ಯಾರ್ಥಿಗಳಿಗೆ ಸದುಪಯೋಗವಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ನಟರಾಜು ಅವರು ಮಾತನಾಡಿ ಜಾತಿ ಮತಗಳನ್ನು ತೊಡೆದು ನಾವೆಲ್ಲರೂ ಒಂದೇ ಎಂಬ ಕುವೆಂಪು ಅವರ ವಿಶ್ವಮಾನವ ಸಂದೇಶ ಎಲ್ಲರಿಗೂ ಮಾದರಿಯಾಗಿದೆ. ಕುವೆಂಪು ಅವರ ಕೃತಿಗಳು ವಿಚಾರ ಧಾರೆಗಳನ್ನು ಮನದಟ್ಟು ಮಾಡಿಕೊಳ್ಳಬೇಕಿದೆ ಎಂದರು.
ಕುವೆಂಪು ಅವರ ಕುರಿತು ಮುಖ್ಯ ಉಪನ್ಯಾಸ ನೀಡಿದ ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಉಮೇಶ್ ಅವರು ಕುವೆಂಪು ಅವರು ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಮುಂದಿದ್ದಾರೆ. ಎಲ್ಲ ಪ್ರಶಸ್ತಿಗಳ ಪುರಸ್ಕೃತರ ಮೊದಲ ಸಾಲಿನಲ್ಲೇ ಕುವೆಂಪು ಅವರನ್ನು ನೋಡಬಹುದಾಗಿದೆ. ತಾವು ಬರೆದಂತೆ ಜೀವನದಲ್ಲಿ ನಡೆದುಕೊಂಡ ಕುವೆಂಪು ಅವರು ಉನ್ನತ ಹುದ್ದೆ ಅಲಂಕರಿಸಿದರೂ ಸಹ ಜನಸಾಮಾನ್ಯರಂತೆ ಬದುಕಿದ ಸ್ವಾಭಿಮಾನಿ ಎಂದರು.
ನಗರಸಭಾ ಸದಸ್ಯರಾದ ಗಾಯತ್ರಿ ಚಂದ್ರಶೇಖರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಿಂದ್ಯಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎ. ರಮೇಶ್, ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಚಾಮರಾಜನಗರದ ಶಾಂತಲಾ ಕಲಾವಿದರಿಂದ ಕುವೆಂಪು ವಿರಚಿತ ಶೂದ್ರ ತಪಸ್ವಿ ನಾಟಕ ಪ್ರದರ್ಶನ ನಡೆಯಿತು.
