ಬೆಂಗಳೂರು : ಅಸಾನಿ ಚಂಡಮಾರುತ ಪರಿಣಾಮ ಹಿನ್ನೆಲೆ ರಾಜ್ಯದ ಹಲವೆಡೆ ಇನ್ನು ೫ ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಆಗ್ನೇಯ ಬಂಗಾಳಕೊಲ್ಲಿ ಹಾಗೂ ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಪ್ರಬಲ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯಾದ್ಯಂತ ಗುಡುಗು, ಸಿಡಿಲಿನೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ಮಾ.೨೪ರವರೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಮಳೆಯಾಗಬಹುದು. ಮಾ.24 ಮತ್ತು25ರಂದು ಗದಗ, ಹಾವೇರಿ, ಧಾರವಾಡ, ಬೆಳಗಾವಿ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಬಹುತೇಕ ಎಲ್ಲ ಬಡಾವಣೆಗಳಲ್ಲಿ ನಿನ್ನೆ ಮಳೆಯಾಗಿದೆ. ಬಂಗಾಳ ಕೊಲ್ಲಿಯ ವಾಯುಭಾರ ಕುಸಿತ ಮತ್ತು ಅಸಾನಿ ಚಂಡಮಾರುತದ ಪರಿಣಾಮವಾಗಿ ಸಂಜೆಯ ವೇಳೆಯಲ್ಲಿ ರಾಜಧಾನಿಯ ಮಲ್ಲೇಶ್ವರಂ ಸದಾಶಿವನಗರ, ಚಾಮರಾಜಪೇಟ, ಚಿಕ್ಕಪೇಟೆಯಲ್ಲಿ ಮಳೆಯಾಗಿದೆ. ಗಿರಿನಗರ, ಹನುಮಂತನಗರ, ಬನಶಂಕರಿ, ಬಸವನಗುಡಿ, ಜಯನಗರ, ಜೆಪಿ ನಗರ, ಕುರುಬರಹಳ್ಳಿ, ಪದ್ಮನಾಭನಗರ, ಗಾಂಧಿನಗರ, ಕಾಟನ್ ಪೇಟೆ ಹಾಗೂ ಕಬ್ಬನ್ ಪಾರ್ಕ್, ಕೆಆರ್ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ನಗರದ ಹೊರ ಭಾಗದಲ್ಲಿ ಮಳೆಯಾಗಿದೆ. ಬೇಸಿಗೆಯಲ್ಲಿ ಮಳೆ ಬಂದಿರುವುದಕ್ಕೆ ಜನರು ಮತ್ತು ರೈತಾಪಿ ವರ್ಗ ಸಂತಸಗೊಂಡಿದ್ದಾರೆ. ಆದರೆ ಕೆಲ ಕಡೆ ಸಿಡಿಲು, ಗಾಳಿಯ ಆರ್ಭಟ ಕೂಡ ಕಂಡು ಬಂದಿದೆ. ಗಾಳಿಯ ಅಬ್ಬರಕ್ಕೆ ಮನೆ, ಕಟ್ಟಡಗಳ ಛಾವಣಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಕಡೆ ಅಡಕೆ, ತೆಂಗು ಬೆಳೆ ಹಾನಿಯಾಗಿದೆ.