ಮೈಸೂರು, ಮೇ.06.):- ಇದುವರೆಗೂ ಮೈಸೂರಿನ 4 ಕ್ಷೇತ್ರಗಳಾದ ಕೆ.ಆರ್.ಕ್ಷೇತ್ರ, ಎನ್.ಆರ್.ಕ್ಷೇತ್ರ, ಚಾಮರಾಜ ಕ್ಷೇತ್ರ ಹಾಗೂ ಚಾಮುಂಡಿ ಕ್ಷೇತ್ರದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿದ್ದು, ಈ ಎಲ್ಲಾ ಕ್ಷೇತ್ರಕ್ಕೂ ಸಮಾನ  ಮಹತ್ವವನ್ನು ಪ್ರಾಮಾಣಿಕವಾಗಿ ನೀಡಲಾಗುತ್ತಿದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದ್ದಾರೆ.

 

ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ನರಸಿಂಹರಾಜ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಕೋವಿಡ್ ಮುಂಜಾಗೃತ ಕ್ರಮಗಳ ಕುರಿತಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕ್ಷೇತ್ರಕ್ಕೂ ಬೇಧ ಭಾವ ಮಾಡುತ್ತಿಲ್ಲ ಎಂದರು.

 

ಆಸ್ಪತ್ರೆಗಳಲ್ಲಿ ಬೆಡ್ ಕೊಡಿಸುವುದು ಯಾರಿಗೂ ಆಗುತ್ತಿಲ್ಲ. ಅಂತಹ ಪರಿಸ್ಥಿತಿ ಇಂದು ಬಂದಿದೆ‌. ಹೀಗಾಗಿಯೇ ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಖಾಸಗಿ ಆಸ್ಪತ್ರೆಯವರೊಂದಿಗೆ 03   ಬಾರಿ ಸಭೆ ಮಾಡಿ ಅವರಿಗೆ ಸೂಚನೆ ನೀಡಲಾಗಿದ್ದು, ಶೇ.50 ರಷ್ಟು ಬೆಡ್ ನೀಡಬೇಕೆಂದು ಕೇಳಲಾಗಿದೆ ಎಂದರು.

 

ಮೈಸೂರಿನ ಆಸ್ಪತ್ರೆಗಳಿಗೆ ಕೇವಲ ಮೈಸೂರಿಗರಲ್ಲದೆ ನೆರೆಯ ಜಿಲ್ಲೆಯವರೂ ಸಹ ಬರುತ್ತಿದ್ದಾರೆ. ಬೆಂಗಳೂರು, ಚಾಮರಾಜನಗರ ಸೇರಿದಂತೆ ನೆರೆಯ ಜಿಲ್ಲೆಯ ಕೊವಿಡ್ ರೋಗಿಗಳು ತುರ್ತು ಪರಿಸ್ಥಿತಿಯಲ್ಲಿ ಬರುವ ಕಾರಣ ಜಿಲ್ಲೆಯಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ಆದಷ್ಟು ಬೇಗ ನಿಲ್ಲಿಸಬೇಕಾಗಿದೆ ಎಂದು ಹೇಳಿದರು.

 

ಮೈಸೂರಿನಲ್ಲಿ ಆಕ್ಸಿಜನ್ ಅನ್ನು ಉತ್ಪಾದನೆ ಮಾಡುವ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಮೈಸೂರಿಗೆ  ಅವಶ್ಯಕತೆ ಇರುವಷ್ಟು ಆಕ್ಸಿಜನ್ ಪಡೆಯಲು ಕ್ರಮವಹಿಸಲಾಗಿದೆ ಎಂದರು.

 

ರೆಮ್ಡಿಸಿವಿರ್ ಲಸಿಕೆಯನ್ನು ಸಹ ಸರ್ಕಾರದಿಂದ ನೇರವಾಗಿ ಆಸ್ಪತ್ರೆಗಳಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಾಳಸಂತೆಯಲ್ಲಿ ಲಸಿಕೆಯನ್ನು ಮಾರಾಟ ಮಾಡುತ್ತಿದ್ದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

 

ಪ್ರಸ್ತುತ ದಿನಗಳಲ್ಲಿ ಕೋವಿಡ್ ಪ್ರಕರಣಗಳು 2  ಸಾವಿರದಿಂದ 3 ಸಾವಿರದವರೆಗೆ ದಾಖಲಾಗುತ್ತಿದೆ. ಈ ಹರಡುವಿಕೆಯನ್ನು ತಡೆಗಟ್ಟಲು  ನಗರ ಪಾಲಿಕೆ ಸದಸ್ಯರ ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ ರಚಿಸಲು ಚಿಂತನೆ ನಡೆಸಲಾಗುತ್ತಿದೆ. ಆಯಾ ಕ್ಷೇತ್ರದ ಶಾಸಕರನ್ನೇ ಟಾಸ್ಕ್ ಫೋರ್ಸ್‌ನ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ ಎಂದರು.

 

ಸಭೆಯಲ್ಲಿ ಶಾಸಕ ತನ್ವೀರ್ ಸೇಠ್, ಮೈಸೂರು ನಗರ ಪಾಲಿಕೆಯ ಮಹಾಪೌರರಾದ ರುಕ್ಮಿಣಿ ಮಾದೇಗೌಡ, ಉಪಮಹಾಪೌರರಾದ ಅನ್ವರ್ ಬೇಗ್, ಮಾಜಿ ಮಹಾಪೌರರಾದ ಹಾಗೂ ಪಾಲಿಕೆ ಸದಸ್ಯರಾದ ಸಂದೇಶ್ ಸ್ವಾಮಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ನಗರ ಪಾಲಿಕೆಯ ಆಯುಕ್ತರಾದ ಶಿಲ್ಪನಾಗ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಹಾಗೂ ಆಯುಕ್ತರಾದ ಡಾ. ಡಿ.ಬಿ.ನಟೇಶ್ ಸೇರಿದಂತೆ ಇತರರು ಹಾಜರಿದ್ದರು.

By admin