ಚಾಮರಾಜನಗರ: ಆರೋಗ್ಯದ ಹಿತದೃಷ್ಠಿಯಿಂದ ಎಲ್ಲರಿಗೂ ಯೋಗ ಅಭ್ಯಾಸಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಜುಲೈ ೩ ರಿಂದ ಆಗಸ್ಟ್ ೧೪ರವರೆಗೆ ಪ್ರತೀ ಭಾನುವಾರ ಯೋಗಥಾನ್ ಕಾರ್ಯಕ್ರಮವನ್ನು ಜಿಲ್ಲೆಯಲ್ಲೂ ಹಮ್ಮಿಕೊಂಡಿದ್ದು ಇದನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಕಾಯೋನ್ಮುಖರಾಗಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಯೋಗಥಾನ್ ಕಾರ್ಯಕ್ರಮ ಆಯೋಜನೆ ಸಂಬಂಧ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯದ ಕಾಳಜಿ ಉದ್ದೇಶದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಇತರೆ ಎಲ್ಲರ ಸಹಕಾರದೊಂದಿಗೆ ಯೋಗಥಾನ್ ಕಾರ್ಯಕ್ರಮದಡಿ ಯೋಗ ಅಭ್ಯಾಸ ಜುಲೈ ೩ ರಿಂದ ಆಗಸ್ಟ್ ೧೪ರವರೆಗೆ ಪ್ರತೀ ಭಾನುವಾರ ಬೆಳಿಗ್ಗೆ ನಡೆಯಲಿದೆ. ಸುಮಾರು ಒಂದೂವರೆ ತಾಸು ನಡೆಯುವ ಯೋಗ ಅಭ್ಯಾಸದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಅಗತ್ಯ ಸಿದ್ದತೆ ಕೈಗೊಳ್ಳಬೇಕೆಂದು ಎಂದರು.
ಯೋಗ ಅಭ್ಯಾಸ ಕಾರ್ಯಕ್ರಮದಲ್ಲಿ ಎಲ್ಲಾ ಆಸಕ್ತರು ಪಾಲ್ಗೊಳ್ಳಲು ಅವಕಾಶ ಇರುತ್ತದೆ. ವಿದ್ಯಾರ್ಥಿಗಳಿಗೂ ಯೋಗದ ಮಹತ್ವದ ಬಗ್ಗೆ ತಿಳಿಸಿ ಅಭ್ಯಾಸಕ್ಕೆ ಉತ್ತೇಜಿಸಬೇಕು. ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುವ ಯೋಗದ ಅಭ್ಯಾಸ ಪ್ರದರ್ಶನಕ್ಕಾಗಿ ನಿಗದಿ ಮಾಡಿರುವ ಯೋಗಥಾನ್ ಕಾರ್ಯಕ್ರಮ ಫಲಪ್ರದವಾಗಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮಾತನಾಡಿ ಯೋಗದ ಪ್ರಾಮುಖ್ಯತೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಎಲ್ಲಾ ಯೋಗಾಸಕ್ತರು ಸಾರ್ವಜನಿಕರು ಪಾಲ್ಗೊಳ್ಳಲು ಅವಕಾಶವಾಗುವಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಬೇಕೆಂದು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾ ಸರ್ಜನ್ ಡಾ. ಕೃಷ್ಣಪ್ರಸಾದ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶಂಕರ್, ಇನ್ನಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.